PSI exam scam and Karnataka HC
PSI exam scam and Karnataka HC 
ಸುದ್ದಿಗಳು

ಪಿಎಸ್‌ಐ ಹಗರಣ: ಆಯ್ಕೆಯಾದವರಲ್ಲಿ ಕಳಂಕರಹಿತರಿಗೆ ಮಾತ್ರವೇ ಒಂದು ಪರೀಕ್ಷೆ ನಡೆಸಲು ಸಾಧ್ಯವೇ ಎಂದು ಕೇಳಿದ ಹೈಕೋರ್ಟ್‌

Bar & Bench

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಆಯ್ಕೆಯಾದವರ ಪೈಕಿ ಆರೋಪ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರಿಗೆ ಮಾತ್ರ ಒಂದು ಪರೀಕ್ಷೆ ನಡೆಸಿ ಹುದ್ದೆಗೆ ಪರಿಗಣಿಸುವ ಸಾಧ್ಯತೆ ಕುರಿತು ರಾಜ್ಯ ಸರ್ಕಾರದಿಂದ ಕರ್ನಾಟಕ ಹೈಕೋರ್ಟ್ ಗುರುವಾರ ಮಾಹಿತಿ ಕೇಳಿದೆ.

ನೇಮಕಾತಿಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಸಲ್ಲಿಸಿದ್ದ ಏಳು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ನ್ಯಾಯಾಲಯದ ಈ ಹಿಂದಿನ ನಿರ್ದೇಶನದಂತೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಬಂಧಿಸಿದ (ಆರೋಪಕ್ಕೆ ಗುರಿಯಾದವರನ್ನು ಹೊರತುಪಡಿಸಿ) ತನಿಖಾ ವರದಿಯನ್ನು ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು.

ವರದಿ ಪರಿಶೀಲಿಸಿದ ಪೀಠವು ಆರೋಪ ಪಟ್ಟಿಯಲ್ಲಿ ಹೆಸರು ಉಲ್ಲೇಖವಾಗಿರದ ಅಭ್ಯರ್ಥಿಗಳಿಗೆ ಮಾತ್ರ ಒಂದು ಪರೀಕ್ಷೆ ನಡೆಸಿ, ಅದರ ಆಧಾರದಲ್ಲಿ ಅವರನ್ನು ಹುದ್ದೆಗೆ ಪರಿಗಣಿಸಲು ಸಾಧ್ಯವೇ ಎಂದು ಪ್ರಶ್ನಿಸಿತಲ್ಲದೆ, ಈ ಬಗ್ಗೆ ಸರ್ಕಾರದಿಂದ ಮಾಹಿತಿ ಪಡೆದು ನ್ಯಾಯಾಲಯಕ್ಕೆ ತಿಳಿಸುವಂತೆ ಅಡ್ವೊಕೇಟ್‌ ಜನರಲ್‌ ಅವರಿಗೆ ಮೌಖಿಕವಾಗಿ ಸೂಚಿಸಿ, ವಿಚಾರಣೆಯನ್ನು ಜೂನ್‌ 27ಕ್ಕೆ ಮುಂದೂಡಿತು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ಪಿ ಎಸ್‌ ರಾಜಗೋಪಾಲ ಅವರು “ನ್ಯಾಯಾಲಯದ ಮೆಟ್ಟಿಲೇರಿರುವ ಅಭ್ಯರ್ಥಿಗಳು ಯಾವುದೇ ರೀತಿಯಲ್ಲಿ ಹಗರಣದಲ್ಲಿ ಭಾಗಿಯಾಗಿಲ್ಲ. ಕಳಂಕಿತರು ಮತ್ತು ಕಳಂಕಿತರಲ್ಲದವರನ್ನು ಪ್ರತ್ಯೇಕಿಸಲಾಗಿಲ್ಲ. ಹೀಗಿರುವಾಗ ಅರ್ಜಿದಾರರಿಗೆ ಶಿಕ್ಷೆ ಏಕೆ? ಹೀಗಾಗಿ, ಮರು ಪರೀಕ್ಷೆ ನಡೆಸಬಾರದು” ಎಂದು ಕೋರಿದರು.

ಅರ್ಜಿದಾರರ ಪರವಾಗಿ ವಾದಿಸಿದ ಮತ್ತೊಬ್ಬ ವಕೀಲರಾದ ಕೆ ಎನ್‌ ಫಣೀಂದ್ರ ಅವರು “ಪಿಎಸ್‌ಐ ಸೇರಿದಂತೆ ಬೇರೆ ಪರೀಕ್ಷೆಗಳಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ಗಳು ದಾಖಲಾಗಿವೆ. ಆಗ ಪರೀಕ್ಷೆ ರದ್ದುಪಡಿಸಿಲ್ಲ. ಅಕ್ರಮದಲ್ಲಿ ಭಾಗಿಯಾದವರನ್ನು ಪ್ರತ್ಯೇಕಿಸಿ, ಅವರನ್ನು ನೇಮಕಾತಿಯಿಂದ ಹೊರಗಿಟ್ಟು ಉಳಿದ ಪ್ರಾಮಾಣಿಕರಿಗೆ ಉದ್ಯೋಗ ಕಲ್ಪಿಸಲಾಗಿದೆ. ಅದೇ ಮಾದರಿಯನ್ನು ಇಲ್ಲಿ ಅನುಸರಿಸಬೇಕು” ಎಂದು ಕೋರಿದರು.

ಅಡ್ವೊಕೇಟ್‌ ಜನರಲ್‌ ಶಶಿಕಿರಣ ಶೆಟ್ಟಿ ಅವರು “ತನಿಖೆ ಪ್ರಗತಿಯಲ್ಲಿದೆ. ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದರೆ ಪರೀಕ್ಷೆಯೇ ರದ್ದಾಗಲಿದೆ ಎಂಬ ಸಂದೇಶ ಸಮಾಜಕ್ಕೆ ರವಾನೆಯಾಗಲಿದೆ. ಇದಕ್ಕಾಗಿ ಮರು ಪರೀಕ್ಷೆ ನಡೆಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ” ಎಂದರು.

ಹಿರಿಯ ವಕೀಲ ಡಿ ಆರ್‌ ರವಿಶಂಕರ್‌, ವಕೀಲರಾದ ಸಂತೋಷ್‌ ನಗರ್ಲೆ ಅವರು ವಿಚಾರಣೆಯಲ್ಲಿ ಭಾಗಿಯಾಗಿದ್ದರು.

ಅರ್ಜಿದಾರರ ಕೋರಿಕೆ: ಕೆಲವರು ಮಾಡಿರುವ ತಪ್ಪಿಗೆ ಪರೀಕ್ಷೆ ಬರೆದಿರುವ ಎಲ್ಲರಿಗೂ ಶಿಕ್ಷೆ ಕೊಡುವುದು ಸರಿಯಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ 32 ಮಂದಿ ಕಳಂಕಿತರನ್ನು ಗುರುತಿಸಲಾಗಿದೆ. ಉಳಿದ ಅಭ್ಯರ್ಥಿಗಳ ವಿರುದ್ಧ ಯಾವುದೇ ಆರೋಪಗಳಿಲ್ಲ. ಕಳಂಕಿತರು ಹಾಗೂ ಕಳಂಕರಹಿತರನ್ನು ಪ್ರತ್ಯೇಕಿಸಲು ಅವಕಾಶವಿದ್ದರೂ, ಸರ್ಕಾರ ಆ ಪ್ರಯತ್ನವನ್ನೇ ಮಾಡದೆ, ಇಡೀ ಪ್ರಕ್ರಿಯೆ ರದ್ದುಪಡಿಸಿ, ಮರು ಪರೀಕ್ಷೆ ನಡೆಸಲು ಮುಂದಾಗಿರುವುದು ಸರಿಯಲ್ಲ ಎನ್ನುವುದು ಅರ್ಜಿದಾರರ ವಾದ.

ಇದರಿಂದ, ಈಗಾಗಲೇ ಆಯ್ಕೆಯಾಗಿರುವ ನೂರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗಲಿದೆ. ಎಷ್ಟೋ ಅಭ್ಯರ್ಥಿಗಳಿಗೆ ವಯೋಮಿತಿ ಮೀರುತ್ತಿದ್ದು, ಅವರಿಗೆ ಉದ್ಯೋಗ ಲಭಿಸುವುದು ಕಷ್ಟಕರವಾಗಲಿದೆ. ಆದ್ದರಿಂದ, ಮರುಪರೀಕ್ಷೆ ನಡೆಸಲು ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು. ಕಳಂಕಿತರನ್ನು ಪ್ರತ್ಯೇಕಿಸಿ ಉಳಿದವರಿಗೆ ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವುದಾಗಿ 2022ರ ಏಪ್ರಿಲ್‌ 29ರಂದು ಅಂದಿನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶ ರದ್ದುಪಡಿಸಬೇಕು. ಕಳಂಕರಹಿತ ಮತ್ತು ಕಳಂಕಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ ಹಿಂದಿನ ಅಧಿಸೂಚನೆ ಪ್ರಕಾರವೇ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು.

ಆ ಅರ್ಜಿಗಳನ್ನು ಕೆಎಟಿ 2022ರ ಜುಲೈ 19ರಂದು ವಜಾಗೊಳಿಸಿತ್ತು. ಇದರಿಂದ, ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು 2022ರ ಸೆಪ್ಟೆಂಬರ್‌ 28ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಮರು ಪರೀಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.