ಪಿಎಸ್‌ಐ ಪ್ರಕರಣ: ಅರ್ಜಿದಾರರಾದ 145 ಮಂದಿಯೂ ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ಎಂದು ವರದಿ ಸಲ್ಲಿಸಲು ಹೈಕೋರ್ಟ್‌ ಸೂಚನೆ

"ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ಉತ್ತರಿಸಬೇಕು. ಯಾವ ಮತ್ತು ಯಾರ ಸರ್ಕಾರವಿದೆ ಎಂಬುದರ ಬಗ್ಗೆ ನಾವು ಚಿಂತಿಸಬೇಕಿಲ್ಲ" ಎಂದು ಮೌಖಿಕವಾಗಿ ಹೇಳಿದ ನ್ಯಾಯಾಲಯ.
PSI exam scam and Karnataka HC
PSI exam scam and Karnataka HC

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿರುವ, ಹಾಲಿ ಅರ್ಜಿದಾರರಾಗಿರುವ 145 ಮಂದಿ ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ರಾಜ್ಯ ಸರ್ಕಾರದ ಮರು ಪರೀಕ್ಷೆ ಆದೇಶ ರದ್ದತಿ ಕೋರಿ ಕೋಲಾರದ ಚಂದನ್‌ ಎನ್‌ ವಿ, ವಸಂತ್‌ ನಾಯಕ್‌, ಆಶಾ ಸಣಕಲ್ಲ ಮತ್ತು ರಾಜೇಶ್ವರಿ ಸೇರಿದಂತೆ 145 ಮಂದಿ ಪ್ರತ್ಯೇಕವಾಗಿ ಸಲ್ಲಿಸಿರುವ ಒಟ್ಟು ಆರು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ಶಿವಶಂಕರ್‌ ಅಮರಣ್ಣವರ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಆಯ್ಕೆಯಾಗಿ, ನ್ಯಾಯಾಲಯದ ಮೆಟ್ಟಿಲೇರಿರುವ 145 ಮಂದಿ ಅರ್ಜಿದಾರ ಅಭ್ಯರ್ಥಿಗಳು ಹಗರಣದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಜೂನ್‌ 15ರ ಒಳಗೆ ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶ ಮಾಡಿದ್ದು, ವಿಚಾರಣೆಯನ್ನು ಮುಂದೂಡಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಡಿ ಆರ್‌ ರವಿಶಂಕರ್‌ ಮತ್ತು ರಾಜಗೋಪಾಲ ಅವರು “ಅರ್ಜಿದಾರರು ಮುಗ್ಧರಾಗಿದ್ದು, ಹಗರಣದಲ್ಲಿ ಅವರ ಪಾತ್ರವಿಲ್ಲ. ಹೀಗಾಗಿ, ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟು ಅರ್ಜಿದಾರರಿಗೆ ನೇಮಕಾತಿ ಆದೇಶ ನೀಡಬೇಕು” ಎಂದು ಮನವಿ ಮಾಡಿದರು.

Justices G Narendar & Shivashankar Amarannavar
Justices G Narendar & Shivashankar Amarannavar

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಪಿಎಸ್‌ಐ ಹಗರಣದ ತನಿಖೆಯ ನೇತೃತ್ವ ವಹಿಸಿರುವ ಸಿಐಡಿ ಮುಖ್ಯಸ್ಥರಾದ ಸಂಧು ಅವರು ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಹಗರಣದಲ್ಲಿ ಎರಡು ಬಗೆಯಿದ್ದು, ಬ್ಲೂಟೂತ್‌ ಬಳಕೆ ಮಾಡಿ ಹೊರಗಿನಿಂದ ಅಭ್ಯರ್ಥಿಗಳಿಗೆ ಉತ್ತರ ಹೇಳಿಕೊಟ್ಟಿರುವುದು ಒಂದು ಕಡೆಯಾದರೆ ನೇಮಕಾತಿ ವಿಭಾಗದಲ್ಲೇ ಓಎಂಆರ್‌ ಶೀಟ್‌ಗಳನ್ನು ತಿದ್ದಿರುವುದು ಇನ್ನೊಂದು ಭಾಗವಾಗಿದೆ. ಓಎಂಆರ್‌ ಶೀಟುಗಳಿಗೆ ಸಂಬಂಧಿಸಿದಂತೆ ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯದಿಂದ (ಎಫ್‌ಎಸ್‌ಎಲ್‌) ವರದಿ ಪಡೆಯಲಾಗಿದೆ. ಬ್ಲೂಟೂತ್‌ ಬಳಕೆ ಮಾಡಿ ನಕಲು ಮಾಡಿರುವುದರ ಕುರಿತು ತನಿಖೆ ನಡೆಯುತ್ತಿದೆ. ಮೊದಲಿಗೆ ಹಗರಣದಲ್ಲಿ 8 ಮಂದಿ ಮಾತ್ರ ಭಾಗಿಯಾಗಿದ್ದಾರೆ ಎನ್ನಲಾಗಿತ್ತು. ಆನಂತರ ಇದು 23ಕ್ಕೆ ಏರಿಕೆಯಾಗಿತ್ತು” ಎಂದರು.

ಆಗ ನ್ಯಾ. ನರೇಂದರ್ ಅವರು “ಕಳೆದ ಬಾರಿ ತನಿಖಾಧಿಕಾರಿ ನ್ಯಾಯಾಲಯದ ಮುಂದೆ ಹಾಜರಿದ್ದರು. ಆ ಸಂದರ್ಭದಲ್ಲಿ ಹಗರಣದಲ್ಲಿ ಬ್ಲೂಟೂತ್‌ ಬಳಕೆ ಮಾಡಿರುವುದರ ಕುರಿತು ತಿಳಿಸಿದ್ದರು. ಪರೀಕ್ಷೆ ಸಂದರ್ಭದಲ್ಲಿ ಸಂಬಂಧಿತ ಟವರ್‌ಗಳನ್ನು ಪರಿಶೀಲಿಸಿದರೆ ಅದನ್ನು ಪತ್ತೆ ಮಾಡುವುದು ಕಷ್ಟವಾಗದು. ತನಿಖಾಧಿಕಾರಿಗಳು ಇದನ್ನು ಕಳೆದ ಒಂದು ವರ್ಷದಿಂದ ಮಾಡುತ್ತಿದ್ದಾರೆ” ಎಂದರು.

ಇದಕ್ಕೆ ಎಜಿ “92 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ. ಈ ಎಲ್ಲಾ ಕೇಂದ್ರಗಳ ಸಂಬಂಧಿತ ಟವರ್‌ಗಳಲ್ಲಿನ ಡಂಪ್‌ (ದತ್ತಾಂಶ) ಪಡೆದು ತನಿಖಾಧಿಕಾರಿಗಳು ವಿಶ್ಲೇಷಿಸಬೇಕಿದೆ. ಅಭ್ಯರ್ಥಿಗಳಿಗೆ ಬೇರೆ ಬೇರೆ ನಂಬರ್‌ಗಳಿಂದ ಕರೆ ಸ್ವೀಕರಿಸಿದ್ದಾರೆ. ಇದೆಲ್ಲವನ್ನೂ ಪರಿಶೀಲಿಸಬೇಕಿದೆ” ಎಂದರು.

ಇದಕ್ಕೆ ನ್ಯಾ. ನರೇಂದರ್ ಅವರು “ನಿರ್ದಿಷ್ಟ ಸಂಖ್ಯೆಯನ್ನು ನಮೂದಿಸಿದರೆ ಕ್ಷಣಮಾತ್ರದಲ್ಲಿ ಇಡೀ ಮಾಹಿತಿ ಪಡೆಯಬಹುದು” ಎಂದರು. ಆಗ ಎಜಿ ಅವರು “ಅದನ್ನು ಮ್ಯಾನುವಲ್‌ ಆಗಿ ಮಾಡಬೇಕು ಎಂದು ತನಿಖಾಧಿಕಾರಿಗಳು ಹೇಳುತ್ತಿದ್ದಾರೆ. ಪ್ರತಿ ಸಂಖ್ಯೆಯನ್ನು ಪರಿಶೀಲಿಸಬೇಕು ಎನ್ನುತ್ತಿದ್ದಾರೆ. ಆರ್‌ ಡಿ ಪಾಟೀಲ್‌ ಎಂಬ ಆರೋಪಿಯು ವಿಭಿನ್ನ ಮೊಬೈಲ್‌ ಸಂಖ್ಯೆಗಳನ್ನು ಬಳಕೆ ಮಾಡಿದ್ದಾನೆ” ಎಂದು ಉತ್ತರಿಸಿದರು. ಇದಕ್ಕೆ ನ್ಯಾ. ನರೇಂದರ್‌ “ಮ್ಯಾನುವಲ್‌ ಆಗಿ ಏಕೆ? ಕಾಮನ್‌ ನಂಬರ್‌ ಹಾಕಿದರೆ ಸಾಕಾಗುತ್ತದೆ. ವ್ಯಕ್ತಿಯೊಬ್ಬ ಆ ಸಂದರ್ಭದಲ್ಲಿ ಎರಡು ಸಂಖ್ಯೆ ಬಳಸಿದ್ದರೆ ಅದನ್ನು ಪತ್ತೆ ಹಚ್ಚುವುದು ಕಷ್ಟವಾಗಲಾರದು. ಯಾವ ಸಂದರ್ಭದಲ್ಲಿ ಪರೀಕ್ಷೆ ಆರಂಭ ಮತ್ತು ಅಂತ್ಯವಾಯಿತು ಎಂಬುದನ್ನು ಕೇಂದ್ರೀಕರಿಸಿ ಕರೆ ದಾಖಲೆ ಪರೀಶೀಲಿಸಿದರೆ ಸಾಕು” ಎಂದರು.

ಆನಂತರ ಎಜಿ ಅವರು “ಓಎಂಆರ್‌ ಶೀಟುಗಳನ್ನು ತಿರುಚಿರುವುದರ ಕುರಿತು ಎಫ್‌ಎಸ್‌ಎಲ್‌ ವರದಿ ಬಂದಿದೆ. ಅದರಲ್ಲೇನು ಸಮಸ್ಯೆ ಇಲ್ಲ. ಬ್ಲೂಟೂತ್‌ ವಿಚಾರದಲ್ಲಿ ನಿರ್ಧಾರಕ್ಕೆ ಬರಲು ಇನ್ನೂ ಸ್ವಲ್ಪ ಕಾಲಾವಕಾಶ ಬೇಕಿದೆ ಎಂದು ಸಿಐಡಿ ಮುಖ್ಯಸ್ಥರು ಹೇಳಿದ್ದಾರೆ. ತನಿಖೆಯನ್ನು ಗಂಭೀರವಾಗಿ ನಡೆಸಲಾಗುತ್ತಿದೆ. ಹಗರಣದ ಕಿಂಗ್‌ಪಿನ್‌ ಆದ ಆರ್‌ ಡಿ ಪಾಟೀಲ್‌ ಎಂಬಾತ ನೀರಾವರಿ, ಕೆಪಿಎಸ್‌ಸಿ, ಬೆಸ್ಕಾಂ ಪರೀಕ್ಷೆಗಳಲ್ಲಿ ಈ ರೀತಿಯ ಕುಕೃತ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದೆ. ತನಿಖೆಗೆ ನ್ಯಾಯಾಲಯವು ಒಂದು ಕಾಲಾವಧಿ ನಿಗದಿ ಮಾಡಬಹುದು. ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಒಟ್ಟು 53 ಮಂದಿ ಅಭ್ಯರ್ಥಿಗಳ ಎಫ್‌ಐಆರ್‌ ಆಗಿದ್ದು, ಇದರಲ್ಲಿ 29 ಮಂದಿ ಓಎಂಆರ್‌ ತಿರುಚಿದ ಆರೋಪಿಗಳಾಗಿದ್ದಾರೆ. ತನಿಖೆ ಮುಂದುವರಿದಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ ಹಗರಣ ಬೆಳಕಿಗೆ ಬಂದಿದ್ದು, 22 ಆರೋಪ ಪಟ್ಟಿಗಳು ಹಾಗೂ 110 ಮಂದಿಯನ್ನು ಬಂಧಿಸಲಾಗಿದೆ” ಎಂದರು.

Also Read
ಪಿಎಸ್‌ಐ ನೇಮಕಾತಿ ಮರು ಪರೀಕ್ಷೆ: ರಾಜ್ಯ ಸರ್ಕಾರದ ಆದೇಶಕ್ಕೆ ನೀಡಿದ್ದ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್‌

ಇದಕ್ಕೆ ನ್ಯಾ. ನರೇಂದರ್ “ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡಲಾಗದು. ಕೆಲವರು ಪ್ರಮಾದ ಎಸಗಿರಬಹುದು. ಅಮಾಯಕರ ದೃಷ್ಟಿಯಿಂದಲೂ ನಾವು ಪರಿಶೀಲನೆ ಮಾಡಬೇಕಿದೆ. ಅರ್ಜಿದಾರರ ವಿರುದ್ಧವೂ ಬೇಕಾದರೆ ಪ್ರಾಥಮಿಕ ತನಿಖೆ ನಡೆಸಿ. ಆದರೆ, ನಾವು ಈ ಸಂಬಂಧ ನ್ಯಾಯಾಂಗ ಆದೇಶ ಮಾಡುವುದಿಲ್ಲ. ಪ್ರಕರಣದ ವಿಚಾರಣೆಯನ್ನು ಜೂನ್‌ 2ನೇ ವಾರಕ್ಕೆ ನಿಗದಿ ಮಾಡುತ್ತೇವೆ. ಈ ವೇಳೆಗೆ ಏನು ಬೆಳವಣಿಗೆ ಆಗಿರುತ್ತದೆ ಎಂಬುದನ್ನು ನೋಡೋಣ. ಈ ಸಂದರ್ಭದಲ್ಲಿ ಯಾವುದೇ ಬೆಳವಣಿಗೆ ಆಗಿಲ್ಲ ಎಂದಾದರೆ ನಾವು ಆದೇಶ ಮಾಡುತ್ತೇವೆ. ಇದೊಂದು ತಂತ್ರಜ್ಞಾನ ಆಧಾರಿತ ಅಪರಾಧವಾಗಿದೆ. ತನಿಖಾಧಿಕಾರಿಗಳಿಗೆ ಒಂದು ಅವಕಾಶ ನೀಡೋಣ” ಎಂದರು.

ಅಲ್ಲದೇ, ನ್ಯಾ. ನರೇಂದರ್ ಅವರು “ಮೇ 15ರ ನಂತರ ಎಲ್ಲವೂ ಮುಕ್ತಾಯವಾಗಲಿದೆ. ಅಧಿಕಾರ ಪಲ್ಲಟವಾದರೆ ಏನು ಬೇಕಾದರೂ ಆಗಬಹುದು. ಯಾರಿಗೆ ಗೊತ್ತು? ಹೆಚ್ಚಂದರೆ ನ್ಯಾಯಾಲಯ ಇನ್ನು ಆರು ದಿನ ಕೆಲಸ ಮಾಡಬಹುದು. ಆನಂತರ ನ್ಯಾಯಾಲಯಕ್ಕೆ ಬೇಸಿಗೆ ರಜೆ ಇರಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಪೊಲೀಸರು ಬ್ಯುಸಿಯಾಗಿದ್ದು, ವರ್ಗಾವಣೆಗಳೂ ಆಗಿವೆ. ಇದರ ಲಾಭವನ್ನು ಅವರಿಗೆ ನೀಡೋಣ. ಇದರಿಂದ ಏನೂ ಆಗುವುದಿಲ್ಲ. ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ಉತ್ತರಿಸಬೇಕು. ಯಾವ ಮತ್ತು ಯಾರ ಸರ್ಕಾರವಿದೆ ಎಂಬುದರ ಬಗ್ಗೆ ನಾವು ಚಿಂತಿಸಬೇಕಿಲ್ಲ” ಎಂದರು.

Related Stories

No stories found.
Kannada Bar & Bench
kannada.barandbench.com