PSI exam scam
PSI exam scam 
ಸುದ್ದಿಗಳು

[ಪಿಎಸ್‌ಐ ನೇಮಕಾತಿ ಹಗರಣ] ಜಾಗೃತ್‌, ರಚನಾ ಹನಮಂತ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಬೆಂಗಳೂರು ನ್ಯಾಯಾಲಯ

Siddesh M S

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪದ ಸಂಬಂಧ ತಮ್ಮ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿದ್ದ ತಾತ್ಕಾಲಿಕ ಪಟ್ಟಿಯಲ್ಲಿ ಉನ್ನತ ರ‍್ಯಾಂಕ್‌ ಪಡೆದಿದ್ದ ಇಬ್ಬರು ಅಭ್ಯರ್ಥಿಗಳ ಮನವಿಯನ್ನು ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ವಜಾ ಮಾಡಿದೆ.

ಪಿಎಸ್‌ಐ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಪ್ರಥಮ ರ‍್ಯಾಂಕ್‌ ಪಡೆದಿರುವ ರಚನಾ ಹನಮಂತ್‌ ಹಾಗೂ ನಾಲ್ಕನೇ ರ‍್ಯಾಂಕ್‌ ಪಡೆದಿರುವ ಜಾಗೃತ್‌ ಅವರು ಸಲ್ಲಿಸಿರುವ ಪ್ರತ್ಯೇಕ ಮನವಿಗಳು 51ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯದ ಉಸ್ತುವಾರಿಯಾಗಿದ್ದ 56ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಟಿ ಗೋವಿಂದಯ್ಯ ಅವರು ವಜಾ ಮಾಡಿದ್ದಾರೆ.

ಪ್ರಕರಣದಲ್ಲಿ ಕ್ರಮವಾಗಿ 1 ಮತ್ತು 17ನೇ ಆರೋಪಿಗಳಾಗಿರುವ ಜಾಗೃತ್‌ ಮತ್ತು ರಚನಾ ಅವರು 7, 8, 9, 12 ಮತ್ತು 18ನೇ ಆರೋಪಿಗಳ ಜೊತೆ ಸೇರಿಕೊಂಡು ತನಿಖೆ ಆರಂಭವಾದಾಗಿನಿಂದಲೂ ನಾಪತ್ತೆಯಾಗಿದ್ದಾರೆ. ಪಿಎಸ್‌ಐ ನೇಮಕಾತಿ ಮತ್ತು ಇತರೆ ಸರ್ಕಾರಿ ಉದ್ಯೋಗದಲ್ಲಿ ವಂಚನೆಯಲ್ಲಿ ತೊಡಗಿದ ಆರೋಪ ಎದುರಿಸುತ್ತಿರುವವರಿಗೆ ನಿರೀಕ್ಷಣಾ ಜಾಮೀನು ನೀಡಿದರೆ ಸಮಾಜದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಸರ್ಕಾರಿ ಅಭಿಯೋಜಕರ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.

ಇತ್ತ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲೆ ಡಾ. ವಂದನಾ ಪಿ ಎಲ್‌ ಮತ್ತು ವಕೀಲ ಎಂ ಸುಬ್ರಹ್ಮಣ್ಯ ಅವರು “ವೀರೇಶ್‌ ಎಂಬ ಆರೋಪಿ ವಂಚನೆ, ದುರ್ನಡತೆ ಇತ್ಯಾದಿಯಲ್ಲಿ ಭಾಗಿಯಾಗಿದ್ದು, ಅವರು ಕಲಬುರ್ಗಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಇಲ್ಲಿ ಅರ್ಜಿದಾರರು ಮತ್ತು ವೀರೇಶ್‌ಗೆ ಯಾವುದೇ ಸಂಪರ್ಕವಿಲ್ಲ. ಹೀಗಾಗಿ, ಅರ್ಜಿದಾರರು ಪ್ರಕರಣದಲ್ಲಿ ಭಾಗಿಯಾಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಪರೀಕ್ಷಾ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಭಾರಿ ಭದ್ರತೆಯ ನಡುವೆ ಪರೀಕ್ಷೆ ನಡೆಸಲಾಗಿದೆ. ಇಲ್ಲಿ ದುರ್ನಡತೆಗೆ ಅವಕಾಶವಿರಲಿಲ್ಲ. ಅರ್ಜಿದಾರರು ಗೌರವಾನ್ವಿತ ಕುಟುಂಬಕ್ಕೆ ಸೇರಿದ್ದು, ಅವರನ್ನು ಬಂಧಿಸಿದರೆ ವರ್ಚಸ್ಸಿಗೆ ಧಕ್ಕೆಯಾಗುತ್ತದೆ. ಹೀಗಾಗಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದರು.

ಸಿಐಡಿ ಉಪ ಪೊಲೀಸ್‌ ವರಿಷ್ಠಾಧಿಕಾರಿ ಪಿ ನರಸಿಂಹ ಮೂರ್ತಿ ಅವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್‌ 120B (ಕ್ರಿಮಿನಲ್‌ ಪಿತೂರಿ), 420 (ವಂಚನೆ), 465 (ನಕಲು), 468 (ವಂಚನೆಗೆ ವಿದ್ಯುನ್ಮಾನ ಸಾಧನ ಬಳಕೆ), 471 (ನಕಲಿ ದಾಖಲೆಯನ್ನು ನೈಜ ಎಂದು ಬಿಂಬಿಸುವುದು) ಜೊತೆಗೆ 34ರ (ಹಲವು ಕೃತ್ಯಯಲ್ಲಿ ಭಾಗಿ) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಈ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಜಾಗೃತ್‌ ಮತ್ತು ರಚನಾ ಅವರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದು, ಈ ಸಂಬಂಧ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಮೇ 19ರಂದು ನೋಟಿಸ್‌ ಜಾರಿ ಮಾಡಿದೆ. ಈ ಪ್ರಕರಣದ ವಿಚಾರಣೆಯು ಮೇ 25ಕ್ಕೆ ನಿಗದಿಯಾಗಿದೆ.

Jagrut V. State of Karnataka.pdf
Preview
Rachana Hanmanth V. State of Karnataka.pdf
Preview