IPS officer Amrit Paul
IPS officer Amrit Paul 
ಸುದ್ದಿಗಳು

ಪಿಎಸ್‌ಐ ಹಗರಣ: ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಜಾಮೀನು ಮನವಿ ತಿರಸ್ಕರಿಸಿದ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

Bar & Bench

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಬಂಧನಕ್ಕೊಳಗಾಗಿ ಅಮಾನತುಗೊಂಡಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರ ಜಾಮೀನು ಅರ್ಜಿಯನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.

ಹಗರಣದಲ್ಲಿ 35ನೇ ಆರೋಪಿಯಾಗಿರುವ ಅಮೃತ್ ಪೌಲ್ ಅವರ ಜಾಮೀನು ಮನವಿಯ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ತೀರ್ಪನ್ನು ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಆನಂದ್‌ ಟಿ. ಚವ್ಹಾಣ್‌ ಅವರು ಪ್ರಕಟಿಸಿದರು. ಜುಲೈ 20ರಂದು ನ್ಯಾಯಾಲಯವು ಜಾಮೀನು ತೀರ್ಪು ಕಾಯ್ದಿರಿಸಿತ್ತು.

ಅಪರಾಧ ತನಿಖಾ ದಳದ (ಸಿಐಡಿ) ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್ ಅವರು “ಹಿರಿಯ ಅಧಿಕಾರಿಯಾಗಿರುವ ಅಮೃತ್ ಪೌಲ್ ಈಗಾಗಲೇ ಪ್ರಕರಣದ ಸಹ ಆರೋಪಿಗಳಿಗೆ ಬೆದರಿಕೆ ಒಡ್ಡಿದ್ದು, ತಮ್ಮ ಹೆಸರು ಬಹಿರಂಗ ಪಡಿಸಬಾರದು, ಒಂದೊಮ್ಮೆ ಹೆಸರು ಹೊರ ಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆದರಿಸಿದ್ದಾರೆ. ಇಡೀ ಹಗರಣ ಮೇಲ್ನೋಟಕ್ಕೆ ಮಧ್ಯಪ್ರದೇಶದಲ್ಲಿ ನಡೆದಿದ್ದ ವ್ಯಾಪಂ ಹಗರಣದಂತೆಯೇ ಕಂಡುಬರುತ್ತಿದೆ. ಆ ಪ್ರಕರಣದಲ್ಲೂ ಓಎಂಆರ್ ಶೀಟ್‌ಗಳನ್ನು ತಿದ್ದಲಾಗಿತ್ತು. ಈ ಪ್ರಕರಣದಲ್ಲಿ ಓಎಂಆರ್ ಶೀಟ್‌ಗಳನ್ನು ಇರಿಸಲಾಗಿದ್ದ ಸ್ಟ್ರಾಂಗ್ ರೂಂನ ಬೀಗದ ಕೀಗಳನ್ನು ಆರೋಪಿಗಳಿಗೆ ನೀಡುವ ಮೂಲಕ ಪೌಲ್ ಹಗರಣದಲ್ಲಿ ನೇರ ಭಾಗಿದಾರಾಗಿದ್ದಾರೆ. ಹಗರಣದಿಂದ ಸಾವಿರಾರು ಜನ ತೊಂದರೆಗೆ ಸಿಲುಕಿದ್ದು, ನ್ಯಾಯಾಲಯ ಸಮಾಜದ ಅಳಲನ್ನು ಆಲಿಸಬೇಕಿದೆ” ಎಂದು ವಾದಿಸಿದ್ದರು.

ಪೌಲ್‌ ಅವರನ್ನು ಜುಲೈ 4ರಂದು ಬಂಧಿಸಲಾಗಿತ್ತು. ಮೊದಲಿಗೆ ಹತ್ತು ದಿನ, ಆನಂತರ ಮೂರು ದಿನ್‌ ಪೌಲ್‌ ಅವರ ಪೊಲೀಸ್‌ ಕಸ್ಟಡಿ ವಿಸ್ತರಿಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಜುಲೈ 15ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.