ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿಯಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಕೆ ಹರೀಶ್ ಅವರ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ತಿರಸ್ಕರಿಸಿದೆ.
ಪ್ರಕರಣದ 34ನೇ ಆರೋಪಿಯಾಗಿರುವ ಕೆ ಹರೀಶ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಉಮಾ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಸಿಐಡಿ ಪ್ರತಿನಿಧಿಸಿದ್ದ ವಿಶೇಷ ಅಭಿಯೋಜಕ ಪಿ ಪ್ರಸನ್ನಕುಮಾರ್ ಅವರು “ಪಿಎಸ್‌ಐ ನೇಮಕಾತಿ ಪ್ರಕರಣವು ಮಧ್ಯಪ್ರದೇಶದ ವ್ಯಾಪಂ ಮಾದರಿಯ ಹಗರಣವಾಗಿದೆ. ಪ್ರಕರಣದಲ್ಲಿ ಅತ್ಯಂತ ಪ್ರಭಾವಿಯಾಗಿರುವ ಸರ್ಕಾರಿ ಅಧಿಕಾರಿಗಳು, ಹಿರಿಯ ಐಪಿಎಸ್ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಸ್ಟ್ರಾಂಗ್ ರೂಂನಲ್ಲಿದ್ದ ಸೇಫ್ಟಿ ಲಾಕರ್‌ಗಳನ್ನೇ ತೆರೆದು, ಉತ್ತರ ಪತ್ರಿಕೆಗಳನ್ನು ತಿದ್ದುವ ಮಟ್ಟಕ್ಕೆ ಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕರೆ ತನಿಖೆಯಲ್ಲೂ ಹಸ್ತಕ್ಷೇಪ ಮಾಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ” ಎಂದು ವಾದಿಸಿದರು.
“ಅನರ್ಹ ಅಭ್ಯರ್ಥಿಗಳು ಅಕ್ರಮ ನಡೆಸಿ ಮುಖ್ಯವಾಹಿನಿಗೆ ಬಂದರೆ, ಅದು ಸಮಾಜಕ್ಕೆ ಮಾರಕವಾಗಲಿದೆ. ಆದ್ದರಿಂದ, ಇಂಥ ಪ್ರಕರಣಗಳಲ್ಲಿ ನ್ಯಾಯಾಲಯಗಳು ಕಠಿಣ ನಿಲುವು ತಾಳಬೇಕಾಗುತ್ತದೆ ಎಂದು ವ್ಯಾಪಂ ಹಗರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ. ಪೊಲೀಸ್ ಅಧಿಕಾರಿಯಾಗಿರುವ ಅರ್ಜಿದಾರರೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪ್ರಕರಣದ ತನಿಖೆ ಇನ್ನೂ ಬಾಕಿ ಇದ್ದು, ಈ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇದೆ. ಆದ್ದರಿಂದ, ಜಾಮೀನು ಅರ್ಜಿ ವಜಾಗೊಳಿಸಬೇಕು” ಎಂದು ಕೋರಿದ್ದರು.
ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿದ್ದ ಹರೀಶ್ ಪ್ರಕರಣದ 14ನೇ ಆರೋಪಿ ಆರ್ ಮಧು ಹಾಗೂ 16ನೇ ಆರೋಪಿ ದಿಲೀಪ್ ಕುಮಾರ್ (ಅಭ್ಯರ್ಥಿಗಳು) ಎಂಬುವರಿಗೆ ಪರೀಕ್ಷೆಯಲ್ಲಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಅದಕ್ಕಾಗಿ 33ನೇ ಆರೋಪಿಯಾದ ಮೀಸಲು ಪೊಲೀಸ್ ಇನ್‌ಸ್ಪೆಕ್ಟರ್ ಮಧು ಜತೆ ಒಳಸಂಚು ರೂಪಿಸಿದ್ದ ಹರೀಶ್, ಇಬ್ಬರು ಅಭ್ಯರ್ಥಿಗಳಿಂದಲೂ ತಲಾ 30 ಲಕ್ಷ ರೂಪಾಯಿ ಒಟ್ಟು 60 ಲಕ್ಷ ರೂಪಾಯಿಗಳನ್ನು ಸ್ವೀಕರಿಸಿದ್ದರು. ಬಳಿಕ 33ನೇ ಆರೋಪಿಯ ಮೂಲಕ 29ನೇ ಆರೋಪಿಯಾದ ನೇಮಕಾತಿ ವಿಭಾಗದ ಪ್ರಥಮ ದರ್ಜೆ ಸಹಾಯಕ ಡಿ ಹರ್ಷನಿಗೆ ಹಣ ಹಾಗೂ ಕಾರ್ಬನ್ ಒಎಂಆರ್ ಶೀಟ್‌ಗಳನ್ನು ತಲುಪಿಸಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ 14 ಹಾಗೂ 16ನೇ ಆರೋಪಿಗಳ ಒಎಂಆರ್ ಶೀಟ್ ತಿದ್ದಿರುವುದು ಸಾಬೀತಾಗಿದೆ ಎಂದು ಸಿಐಡಿಯ ದೋಷಾರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.