ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ಸಹೋದ್ಯೋಗಿ ನ್ಯಾಯಮೂರ್ತಿ ಅವರ ನಡತೆಗೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಮಾಡಲು ನ್ಯಾಯಮೂರ್ತಿಗಳು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದಕ್ಕೆ ಸಂಬಂಧಿಸಿದ ನೀತಿ ಸಂಹಿತೆ ರೂಪಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರಿಗೆ ಈಚೆಗೆ ಬೆಂಗಳೂರು ವಕೀಲರ ಸಂಘವು ಪತ್ರ ಬರೆದಿದೆ.
ಪ್ರಕರಣಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸುವುದಕ್ಕೆ ನಿಷೇಧ ಹೇರಿ ಲಕ್ಷ್ಮಣ ರೇಖೆಯನ್ನು ಹಾಕಬೇಕು. ಇದು ನ್ಯಾಯಮೂರ್ತಿಗಳು ಪ್ರಭಾವಿಸುವ ಸಾಧ್ಯತೆ ಇದೆ. ಇಂಥ ಘಟನೆಗಳು ಸಾಮಾನ್ಯ ಜನರನ್ನು ಘಾಸಿಗೊಳಿಸುತ್ತವೆ ಎಂದು ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ ಜಿ ರವಿ ಮತ್ತು ಖಜಾಂಚಿ ಎಂ ಟಿ ಹರೀಶ್ ಅವರು ಸಹಿ ಮಾಡಿರುವ ಪತ್ರದಲ್ಲಿ ವಿವರಿಸಲಾಗಿದೆ.
ನ್ಯಾಯಮೂರ್ತಿ ಸಂದೇಶ್ ಅವರು ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಕಣ್ಣು ತೆರೆಸಿದ್ದು, ವ್ಯವಸ್ಥೆಯನ್ನು ಸರಿಪಡಿಸುವ ನ್ಯಾಯಮೂರ್ತಿಗಳ ಪ್ರಯತ್ನಕ್ಕೆ ಬೆಂಗಳೂರು ವಕೀಲರ ಸಂಘವು ಬೆಂಬಲವಾಗಿ ನಿಲ್ಲಲಿದೆ ಎಂದು ಈಚೆಗೆ ಎಎಬಿ ಹೇಳಿತ್ತು.