IPS officer Amrit Paul and Karnataka HC
IPS officer Amrit Paul and Karnataka HC 
ಸುದ್ದಿಗಳು

ಪಿಎಸ್‌ಐ ನೇಮಕಾತಿ ಹಗರಣ: ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

Bar & Bench

ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿರುವ ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಕಾಯ್ದಿರಿಸಿದೆ.

ಪ್ರಕರಣದಲ್ಲಿ 35ನೇ ಆರೋಪಿಯಾಗಿರುವ ಪೌಲ್‌ ಅವರ ಅರ್ಜಿಯನ್ನು ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ ಸುಂದರ್‌ ಅವರು “31ನೇ ಆರೋಪಿ ಡಿವೈಎಸ್‌ಪಿ ಶಾಂತಕುಮಾರ್‌ ಅವರಿಂದ 5 ಕೋಟಿ ರೂಪಾಯಿ ಡೀಲ್‌ ಭಾಗವಾಗಿ ಪೌಲ್‌ ಅವರು 1.35 ಕೋಟಿ ರೂಪಾಯಿ ಸ್ವೀಕರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಹಣ ಜಪ್ತಿ ಮಾಡಲಾಗಿಲ್ಲ. ಇದಕ್ಕೆ ಯಾವುದೇ ಪುರಾವೆ ಇಲ್ಲ. ಶಾಂತಕುಮಾರ್‌ ಸ್ವಯಂ ಹೇಳಿಕೆ ಹೊರತುಪಡಿಸಿ ಪೌಲ್‌ ವಿರುದ್ಧ ಯಾವುದೇ ಸಾಕ್ಷಿ ಇಲ್ಲ. ಪಿಎಸ್‌ಐ ಹಗರಣದ ಓಎಂಆರ್‌ ಶೀಟ್‌ಗಳನ್ನು ಶಾಂತಕುಮಾರ್‌ ಜೊತೆ ಸೇರಿ ತಿರುಚಲಾಗಿದೆ ಎಂಬ ಏಕೈಕ ಆರೋಪ ಅಮೃತ್‌ ಪೌಲ್‌ ವಿರುದ್ಧ ಇದೆ. ಇದಕ್ಕೂ ಯಾವುದೇ ದಾಖಲೆಗಳು ಇಲ್ಲ. ಇಡೀ ಪ್ರಕರಣದಲ್ಲಿ ಪೌಲ್‌ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿದೆ” ಎಂದು ಪ್ರಮುಖವಾಗಿ ವಾದಿಸಿದ್ದರು.

ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು "ಇಡೀ ಹಗರಣ ಪೌಲ್‌ ಅವರ ಕಣ್ಣೆದುರು ಅವರ ನಿರ್ದೇಶನದಂತೆ ನಡೆದಿದೆ. ಪೌಲ್‌ ಅವರ ಪ್ರಾಸಿಕ್ಯೂಷನ್‌ಗೆ ಕೇಂದ್ರ ಸರ್ಕಾರ ಸಹ ಅನುಮತಿ ನೀಡಿದೆ. ಇದೊಂದು ದೊಡ್ಡ ಹಗರಣವಾಗಿದ್ದು, ಆರೋಪಿಯು ಜಾಮೀನಿನ ಮೇಲೆ ಹೊರಬಂದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಜಾಮೀನು ಮಂಜೂರು ಮಾಡಬಾರದು” ಎಂದು ವಾದಿಸಿದ್ದರು.

ಹಲವು ದಿನಗಳ ಕಾಲ ಸುದೀರ್ಘ ವಾದ ಆಲಿಸಿದ ನ್ಯಾಯಾಲಯವು ಅಂತಿಮವಾಗಿ ಇಂದು ಆದೇಶ ಕಾಯ್ದಿರಿಸಿದೆ.

ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮತ್ತು ಸತ್ರ ನ್ಯಾಯಾಲಯ, ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯವು ಹಲವು ಬಾರಿ ಪೌಲ್‌ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. 2022ರ ಜುಲೈ 4ರಂದು ಬಂಧಿತರಾಗಿದ್ದ ಪೌಲ್‌ ಅವರು ಇದಾಗಲೇ ಜೈಲಿನಲ್ಲಿ ಒಂದು ವರ್ಷ ಕಳೆದಿದ್ದಾರೆ.