Karnataka HC (Kalburgi bench) and Rajesh Hagaragi 
ಸುದ್ದಿಗಳು

ಪಿಎಸ್‌ಐ ಹಗರಣ: ದಿವ್ಯಾ ಪತಿ ರಾಜೇಶ್‌ ಹಾಗರಗಿಗೆ ಜಾಮೀನು ಮಂಜೂರು ಮಾಡಿದ ಕರ್ನಾಟಕ ಹೈಕೋರ್ಟ್‌

ಐಪಿಸಿ ಸೆಕ್ಷನ್‌ 212 (ಆಶ್ರಯ ಅಥವಾ ನೆರವು ನೀಡುವುದು) ಹೊರತುಪಡಿಸಿ, ರಾಜೇಶ್‌ ವಿರುದ್ಧ ಗಂಭೀರ ಆರೋಪ ಕಾಣುತ್ತಿಲ್ಲ. ಪ್ರಮುಖ ಆರೋಪಿ ದಿವ್ಯಾ ಪತಿ ಎಂಬ ಆಧಾರದ ಮೇಲೆ ಆರೋಪಿ ರಾಜೇಶ್‌ ಜಾಮೀನಿಗೆ ಅರ್ಹರಲ್ಲ ಎಂದು ಹೇಳಲಾಗದು ಎಂದಿರುವ ಪೀಠ.

Bar & Bench

ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ನೇಮಕಾತಿ ಹಗರಣದ ಪ್ರಮುಖ ಆರೋಪಿ ಹಾಗೂ ಬಿಜೆಪಿ ಸ್ಥಳೀಯ ನಾಯಕಿ ದಿವ್ಯಾ ಹಾಗರಗಿ ಅವರ ಪತಿ ಕಲಬುರ್ಗಿಯ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯ ಅಧ್ಯಕ್ಷ ರಾಜೇಶ್‌ ಹಾಗರಗಿಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಹಗರಣದ ಪ್ರಮುಖ ಆರೋಪಿ ದಿವ್ಯಾ ಪತಿ ಎಂಬ ಕಾರಣಕ್ಕೆ ಅರ್ಜಿದಾರ ಆರೋಪಿಗೆ ಜಾಮೀನು ನಿರಾಕರಿಸಲಾಗದು ಎಂದು ನ್ಯಾಯಮೂರ್ತಿ ಎಂ ಜಿ ಉಮಾ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶದಲ್ಲಿ ಹೇಳಿದೆ.

“ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಪತಿ ಎಂಬ ಆಧಾರದ ಮೇಲೆ ಆರೋಪಿ ರಾಜೇಶ್‌ ಜಾಮೀನಿಗೆ ಅರ್ಹರಲ್ಲ ಎಂದು ಹೇಳಲಾಗದು. ಆರೋಪ ಸಾಬೀತುಪಡಿಸುವ ದಾಖಲೆಗಳು ಇರಬೇಕು. ಐಪಿಸಿ ಸೆಕ್ಷನ್‌ 212 (ಆಶ್ರಯ ಅಥವಾ ನೆರವು ನೀಡುವುದು) ಹೊರತುಪಡಿಸಿ, ಅರ್ಜಿದಾರ ಆರೋಪಿ ವಿರುದ್ಧ ಗಂಭೀರ ಆರೋಪ ಕಾಣುತ್ತಿಲ್ಲ” ಎಂದು ಹೇಳಿದ ಪೀಠವು ಜಾಮೀನು ಮಂಜೂರು ಮಾಡಿತು.

ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುವಂತಿಲ್ಲ. ವ್ಯಾಪ್ತಿ ಹೊಂದಿದ ಪೊಲೀಸ್‌ ಠಾಣೆಯಿಂದ ಅನುಮತಿ ಇಲ್ಲದೇ ಹೊರಹೋಗುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯವು ಅರ್ಜಿದಾರ ಆರೋಪಿ ರಾಜೇಶ್‌ ಅವರಿಗೆ ವಿಧಿಸಿದೆ.

ಪ್ರಾಸಿಕ್ಯೂಷನ್‌ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಕಿರಣ್‌ ಜವಳಿ ಅವರು “ಪಿಎಸ್‌ಐ ದೊಡ್ಡ ಆರ್ಥಿಕ ಅಪರಾಧವಾಗಿದ್ದು, ಪತ್ನಿ ದಿವ್ಯಾ ಹಾಗರಗಿಗೆ ಆಶ್ರಯ ನೀಡುವ ಮೂಲಕ ಪ್ರಮಾದವೆಸಗಿದ್ದಾರೆ. ಹೀಗಾಗಿ, ಅವರಿಗೆ ಜಾಮೀನು ಮಂಜೂರು ಮಾಡಬಾರದು” ಎಂದು ಆಕ್ಷೇಪಿಸಿದರು.

ಅರ್ಜಿದಾರರ ಪರ ವಕೀಲರಾದ ಅವಿನಾಶ್‌ ಉಪ್ಲಾಂವಕರ್‌ ಅವರು “ಪ್ರಕರಣದಲ್ಲಿ 15ನೇ ಆರೋಪಿಯಾಗಿರುವ ಮಲ್ಲಿಕಾರ್ಜುನ ಮೇಳಕುಂದಿ ಅವರ ವಿರುದ್ಧವೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 120ಬಿ, 201, 212 ಜೊತೆಗೆ ಸೆಕ್ಷನ್‌ 34ರ ಅಡಿ ಪ್ರಕರಣ ದಾಖಲಾಗಿದ್ದು, ಅವರಿಗೆ ವಿಚಾರಣಾಧೀನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ರಾಜೇಶ್‌ ಅವರ ವಿರುದ್ಧವೂ ಇದೇ ಆರೋಪಗಳಿದ್ದು, ಅವರಿಗೆ ಜಾಮೀನು ನಿರಾಕರಿಸಲಾಗಿದೆ” ಎಂದು ಆಕ್ಷೇಪಿಸಿದರು.

ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿರುವ ರಾಜೇಶ್‌ ಹಾಗರಗಿ ಅವರನ್ನು 2022ರ ಏಪ್ರಿಲ್‌ 7ರಂದು ಬಂಧಿಸಲಾಗಿತ್ತು. ವಿಚಾರಣಾಧೀನ ನ್ಯಾಯಾಲಯವು ಅವರ ಜಾಮೀನು ಅರ್ಜಿ ವಜಾ ಮಾಡಿತ್ತು. ಆನಂತರ ಹೈಕೋರ್ಟ್‌ ಸಹ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. ಅರ್ಜಿದಾರರ ಪಾತ್ರದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಜಾಮೀನು ನಿರಾಕರಿಸಿತ್ತು. ಈಗ ತನಿಖಾಧಿಕಾರಿ ಆರೋಪ ಪಟ್ಟಿ ಸಲ್ಲಿಸಿದ್ದು, ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದೆ.