ಪಿಎಸ್‌ಐ ನೇಮಕಾತಿ ಹಗರಣವು ಕೊಲೆಗಿಂತ ಹೇಯ ಕೃತ್ಯವಾಗಿದ್ದು, ಸಾವಿರಾರು ಮಂದಿ ಬಾಧಿತರಾಗಲು ಕಾರಣವಾಗಿದೆ. ಇಂತಹ ಅಕ್ರಮಗಳನ್ನು ನೋಡುತ್ತಾ ನ್ಯಾಯಾಲಯವು ಕಣ್ಣುಮುಚ್ಚಿ ಕೂರಲಾಗದು ಎಂದು ಗುರುವಾರ ಕರ್ನಾಟಕ ಹೈಕೋರ್ಟ್ ನೇಮಕಾತಿಗಳಲ್ಲಿನ ಅಕ್ರಮದ ಬಗ್ಗೆ ತನ್ನ ತೀವ್ರ ಅಸಮಾಧಾನ ಹೊರಹಾಕಿತು.
ಹಗರಣದಲ್ಲಿ ಭಾಗಿಯಾಗಿ ಬಂಧಿತರಾಗಿರುವ ಆರೋಪಿಗಳಾದ ಸಿ ಎನ್ ಶಶಿಧರ್ ಮತ್ತಿತರರು ಜಾಮೀನು ಕೋರಿ ಪ್ರತ್ಯೇಕವಾಗಿ ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಈ ವೇಳೆ ಪೀಠವು, “ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣವು ಕೊಲೆಗಿಂತ ದೊಡ್ಡದಾಗಿದೆ. ಕೊಲೆಯಲ್ಲಿ ಒಬ್ಬರು ಬಾಧಿತರಾಗುತ್ತಾರೆ. ಇಲ್ಲಿ ಇಡೀ ಸಮಾಜ ಬವಣೆಪಡುವಂತಾಗಿದೆ. ಸಂತ್ರಸ್ತರು ಅಗಾಧ ಸಂಖ್ಯೆಯಲ್ಲಿದ್ದಾರೆ. ಅದಕ್ಕಾಗಿಯೇ ಹಿಂದಿನ ಆದೇಶದಲ್ಲಿ 50 ಸಾವಿರ ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಉಲ್ಲೇಖಿಸಿದ್ದೇನೆ. ಕೊಲೆ ತರಹದ ಅಪರಾಧ ಎಸಗುವುದಿಕ್ಕಿಂತ ಇದು ಭಿನ್ನವಾಗಿರುತ್ತದೆ. ಇದು ಸಮಾಜದ ಮೇಲಿನ ದಾಳಿ. ಇದರಿಂದ ಸಮಾಜಕ್ಕೆ ಧಕ್ಕೆಯಾಗಿದೆ. ಈ ರೀತಿಯ ಎಲ್ಲಾ ನೇಮಕಾತಿಗಳಲ್ಲೂ ಪರೀಕ್ಷೆ ನಡೆಸಲು ಬಿಟ್ಟು ನ್ಯಾಯಾಲಯವು ಕಣ್ಣು ಮುಚ್ಚಿ ಕುಳಿತಿಕೊಳ್ಳಬೇಕೆ?” ಎಂದು ಕಟುವಾಗಿ ಪ್ರಶ್ನಿಸಿತು.
ಆರೋಪಿಗಳ ಪರ ವಕೀಲರು ವಿಸ್ತೃತವಾಗಿ ವಾದ ಮಂಡಿಸಿ ಜಾಮೀನು ನೀಡಬೇಕು ಎಂದು ಪೀಠದ ಮುಂದೆ ಕೋರಿಕೆ ಇಟ್ಟರು. ಆಗ ಪೀಠವು ಮೇಲಿನಂತೆ ಹೇಳಿತು. ಜಾಮೀನು ಕೋರಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಒಂದು ಗಂಟೆ ವಾದ ಮಂಡಿಸುವುದು ಅಗತ್ಯವೇ? ಜಾಮೀನು ನೀಡಲು ಆಧಾರಗಳನ್ನು ಮಂಡಿಸಬೇಕು ಅಷ್ಟೆ. ನ್ಯಾಯಾಲಯ ಏನಾದರೂ ಪ್ರಶ್ನೆ ಹಾಕಿದರೆ ನಿಮ್ಮ ವಿಚಾರಗಳಿಗೆ ತೊಡಕಾಗುತ್ತದೆ ಎಂದು ನಾನು ಸುಮ್ಮನೆ ಕುಳಿತುಕೊಳ್ಳಬೇಕಾಯಿತು ಎಂದು ಅರ್ಜಿದಾರರ ಪರ ವಕೀಲರನ್ನು ಪೀಠವು ಛೇಡಿಸಿತು.
2.5 ಕೋಟಿ ನಗದು ವಶ: ತನಿಖೆಯ ಸಂದರ್ಭದಲ್ಲಿ ಇದುವರೆಗೆ ಎಷ್ಟು ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಪೀಠವು ಸರ್ಕಾರವನ್ನು ಪ್ರಶ್ನಿಸಿತು. ಆಗ ಸರ್ಕಾರದ ವಕೀಲರು 2.5 ಕೋಟಿ ರೂಪಾಯಿ ಹಣ ವಶಪಡಿಸಿಕೊಳ್ಳಲಾಗಿದೆ ಎಂದರು.
ಅಂತಿಮವಾಗಿ ಅರ್ಜಿದಾರರ ಪರ ವಕೀಲರು ವಾದ ಪೂರ್ಣಗೊಳಿಸಿದ್ದು, ಸರ್ಕಾರದ ಪರ ವಕೀಲರು ಜಾಮೀನು ನೀಡಬಾರದು ಎಂದು ಆಕ್ಷೇಪಿಸಿದ್ದಾರೆ. ಸರ್ಕಾರದ ವಕೀಲರ ವಾದ ಅಪೂರ್ಣವಾಗಿದ್ದು, ವಿಚಾರಣೆಯನ್ನು ಜುಲೈ 20ರ ಮಧ್ಯಾಹ್ನ 2.30ಕ್ಕೆ ಮುಂದೂಡಲಾಗಿದೆ ಎಂದು ಪೀಠವು ಹೇಳಿತು. ಮುಂದುವರೆದು, ಓಎಂಆರ್ ಶೀಟ್‌ಗಳಿಗೆ ಸಂಬಂಧಿಸಿದಂತೆ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ತನಿಖೆಗೆ ಸಂಬಂಧಿಸಿದಂತೆ ಸಿಐಡಿ ಪೊಲೀಸ್ ಮಹಾನಿರ್ದೇಶಕರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವರದಿಯನ್ನು ನ್ಯಾಯಿಕ ರಿಜಿಸ್ಟ್ರಾರ್‌ಗೆ ಸಲ್ಲಿಸುವಂತೆ ಆದೇಶಿಸಿತು.
ಇದಕ್ಕೂ ಮುನ್ನ, ಬೆಳಿಗ್ಗೆ ಅರ್ಜಿ ವಿಚಾರಣೆಗೆ ಆರಂಭಿಸಿದ್ದ ನ್ಯಾಯಾಲಯವು ಪೊಲೀಸ್ ನೇಮಕಾತಿ ವಿಭಾಗದ ಬಂಧಿತರಾದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಮೃತ್ ಪೌಲ್ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಹೇಳಿಕೆಯನ್ನು ಏಕೆ ದಾಖಲಿಸಿಕೊಂಡಿಲ್ಲ. ಇದು ತನಿಖೆಯನ್ನು ಸರಿಯಾದ ರೀತಿಯಲ್ಲಿ ನಡೆಸುವ ವಿಧಾನವಲ್ಲ ರಾಜ್ಯ ಸರ್ಕಾವನ್ನು ತರಾಟೆಗೆ ತೆಗೆದುಕೊಂಡಿತ್ತು. ತನಿಖೆಗೆ ಸಂಬಂಧಿಸಿದಂತೆ ಸಿಐಡಿ ಡಿಜಿ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿ, ವಿಚಾರಣೆಯನ್ನು ಮಧ್ಯಾಹ್ನ ನಡೆಸುವುದಾಗಿ ಮುಂದೂಡಿತ್ತು.
ಕೇಶವ್ ಎಂಬ ಪಿಎಸ್‌ಐ ಆಕಾಂಕ್ಷಿ ಒಬ್ಬರು ವಿಡಿಯೊ ಕಾನ್ಫರೆನ್ಸ್‌ನಲ್ಲಿ ನ್ಯಾಯಮೂರ್ತಿಗಳ ಮುಂದೆ ವಿಚಾರ ಪ್ರಸ್ತಾಪಿಸಲು ಪ್ರಯತ್ನಿಸಿದರು. ಆಗ ನ್ಯಾ. ಸಂದೇಶ್ ಅವರು ನ್ಯಾಯಿಕ ವಿಚಾರಣೆಯಲ್ಲಿ ವಿದ್ಯಾರ್ಥಿಗಳು ಈ ರೀತಿ ಭಾಗಿಯಾಗಲಾಗದು. ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಲಯ ಮುಂದೆ ಬರಬಹುದು. ಇದಕ್ಕೆ ಒಂದು ವಿಧಾನವಿದೆ. ಪಿಎಸ್‌ಐ ಪರೀಕ್ಷೆ ತೆಗೆದುಕೊಂಡಿದ್ದ 50 ಸಾವಿರ ವಿದ್ಯಾರ್ಥಿಗಳಿಗೆ ಈ ರೀತಿ ಅನುಮತಿಸಲಾಗದು. ಅಂತಹ ಯಾವುದೇ ವಿಧಾನ ಇಲ್ಲ. ನೀವು ಬಾಧಿತರಾಗಿದ್ದಾರೆ ಅರ್ಜಿ ಹಾಕಿ, ನ್ಯಾಯಾಲಯಕ್ಕೆ ಬನ್ನಿ ಎಂದು ಸೂಚಿಸಿದರು.
ವಿಚಾರಣೆಯ ವೇಳೆ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಕೆಲವರು ಬನಿಯನ್ ಧರಿಸಿ, ದಿವಾನ್ ಮೇಲೆ ಮಲಗಿಕೊಂಡು ಅಸಭ್ಯವಾಗಿ ಕಾಣಿಸಿಕೊಂಡಿದ್ದರ ಬಗ್ಗೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದ್ದೂ ಘಟಿಸಿತು.