[ಪಿಎಸ್‌ಐ ಹಗರಣ] ಪೌಲ್‌ರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿಲ್ಲವೇಕೆ ಎಂದು ಪ್ರಶ್ನಿಸಿದ ಹೈಕೋರ್ಟ್‌

ಎಡಿಜಿಪಿಯೇ ಓಎಂಆರ್‌ ಶೀಟುಗಳನ್ನು ತಿರುಚುವ ಕೃತ್ಯದಲ್ಲಿ ಭಾಗಿಯಾಗಿರುವುದರಿಂದ ಏನನ್ನು ನಿರೀಕ್ಷಿಸುವುದು? ಹೀಗಿರುವಾಗ, ಪಾರದರ್ಶಕ ತನಿಖೆಯನ್ನು ನಿರೀಕ್ಷಿಸಲಾದೀತೆ? ಇದು ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣವಲ್ಲದೆ ಮತ್ತೇನು ಅಲ್ಲ ಎಂದ ಪೀಠ.
Karnataka HC, PSI Scam and Justice H P Sandesh
Karnataka HC, PSI Scam and Justice H P Sandesh

ಪೊಲೀಸ್‌ ಇನ್‌ಸ್ಪೆಕ್ಟರ್‌ ನೇಮಕಾತಿ (ಪಿಎಸ್‌ಐ) ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ನೇಮಕಾತಿ ವಿಭಾಗದ ಅಮಾನತುಗೊಂಡಿರುವ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಅಮೃತ್‌ ಪೌಲ್‌ ಅವರನ್ನು ಬಂಧಿಸಿ ಹತ್ತು ದಿನಗಳಾಗಿದ್ದರೂ ಅವರನ್ನು ವಿಚಾರಣಾಧೀನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಅವರ ಹೇಳಿಕೆ ದಾಖಲು ಮಾಡಲಾಗಿಲ್ಲ. ಹೀಗಿರುವಾಗ ಹಗರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಸಲಾಗುತ್ತಿದೆ ಎಂದು ತೋರುತ್ತದೆಯೇ ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಹಗರಣದಲ್ಲಿ ಭಾಗಿಯಾಗಿ ಬಂಧಿತರಾಗಿರುವ ಆರೋಪಿಗಳಾದ ಸಿ ಎನ್‌ ಶಶಿಧರ್‌ ಮತ್ತಿತರರು ಸಲ್ಲಿಸಿರುವ ಜಾಮೀನು ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಅಪರಾಧ ತನಿಖಾ ದಳ (ಸಿಐಡಿ) ಪ್ರತಿನಿಧಿಸಿದ್ದ ವಕೀಲರು “ಪಿಎಸ್‌ಐ ನೇಮಕಾತಿ ಪ್ರಕರಣವು ಒಂದು ಹಗರಣ. ಈ ಪಿತೂರಿಯಲ್ಲಿ ಹಲವರು ಭಾಗಿಯಾಗಿದ್ದಾರೆ. ಸಿಐಡಿಯ ಪೊಲೀಸ್‌ ಮಹಾನಿರ್ದೇಶಕರು ತನಿಖೆಯ ಮೇಲೆ ನಿಗಾ ಇಟ್ಟಿರುವುದರಿಂದ ತನಿಖೆಯ ಬಗ್ಗೆ ಅನುಮಾನಪಡಬೇಕಿಲ್ಲ. ಕಳೆದ ಬಾರಿ ಸಿಐಡಿ ಡಿ ಜಿ ಅವರು ಮುಚ್ಚಿದ ಲಕೋಟೆಯಲ್ಲಿ ಸ್ಥಿತಿಗತಿ ವರದಿ ಸಲ್ಲಿಸಿದ್ದಾರೆ. ನ್ಯಾಯಾಲಯವು ಅದನ್ನು ಪರಿಶೀಲಿಸಬಹುದು” ಎಂದರು.

“ಇದೊಂದು ಹಗರಣವಾಗಿರುವುದಕ್ಕಾಗಿಯೇ ಬಂಧಿತ ಎಡಿಜಿಪಿಯನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಿ ಅವರ ಹೇಳಿಕೆಯನ್ನು ದಾಖಲಿಸುವ ಕೆಲಸ ಮಾಡಿಲ್ಲ. ಬಂಧಿತ ಎಡಿಜಿಪಿಯನ್ನು ನ್ಯಾಯಾಲಯ ಮುಂದೆ ಹಾಜರುಪಡಿಸಿ ಹೇಳಿಕೆಯನ್ನು ಯಾವಾಗ ದಾಖಲಿಸುತ್ತೀರಿ? ಕಳೆದ ಹತ್ತು ದಿನಗಳಲ್ಲಿ ನೀವು ಏನನ್ನೂ ಮಾಡಿಲ್ಲ. ನಿನ್ನೆ ಮ್ಯಾಜಿಸ್ಟ್ರೇಟ್‌ ಮುಂದೆ ಎಡಿಜಿಪಿ ಹಾಜರುಪಡಿಸಿ, ಐದು ದಿನ ವಶಕ್ಕೆ ಕೇಳಿದ್ದೀರಿ. ಮ್ಯಾಜಿಸ್ಟ್ರೇಟ್‌ ಅವರು ಮೂರು ದಿನ ವಶಕ್ಕೆ ನೀಡಿದ್ದಾರೆ. ಇದು ನೀವು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದೀರಿ ಎಂದು ತೋರಿಸುತ್ತದೆಯೇ? ಪ್ರಕರಣದಲ್ಲಿ ಏನೂ ಪ್ರಗತಿಯಾಗಿಲ್ಲವಾದ್ದರಿಂದ ಡಿಜಿ ಸಿಐಡಿಯನ್ನು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನ್ಯಾಯಾಲಯ ಹೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದರು. ಕೊನೆಗೆ ನ್ಯಾಯಾಲಕ್ಕೆ ಸಲ್ಲಿಸಿರುವ ವರದಿಗಳನ್ನು ಪರಿಶೀಲಿಸಬೇಕಿದೆ. ಹೀಗಾಗಿ, ಮಧ್ಯಾಹ್ನ 2:30ಕ್ಕೆ ವಿಚಾರಣೆ ನಡೆಸಲಾಗುವುದು ಎಂದರು.

ಇದಕ್ಕೂ ಮುನ್ನ, ಸರ್ಕಾರದ ವಕೀಲರು ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದ ವರದಿ (ಆರ್‌ಎಫ್‌ಎಸ್‌ಎಲ್‌), ಬದಲಾವಣೆ ಮಾಡಲಾಗಿರುವ ಓಎಂಆರ್‌ ಶೀಟುಗಳ ವಿವರಗಳನ್ನು ಒಳಗೊಂಡ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಬೆಂಗಳೂರಿನ ಪರೀಕ್ಷಾ ಕೇಂದ್ರಗಳ್ಲಲಿ ಬ್ಲೂಟೂತ್‌ ಬಳಸಿ ಅಕ್ರಮ ಎಸಗಲಾಗಿಲ್ಲ. ಓಎಂಆರ್‌ ಶೀಟು ತಿದ್ದುವ ಅಕ್ರಮ ನಡೆದಿದೆ” ಎಂದರು.

ಆಗ ಪೀಠವು “ಪರೀಕ್ಷಾ ಕೇಂದ್ರಗಳಲ್ಲಿ ಬೇರೆ ಅಕ್ರಮದ ಬಗ್ಗೆ ಏನು ಮಾಹಿತಿ ಇದೆ” ಎಂದು ಪ್ರಶ್ನಿಸಿತು. ಇದಕ್ಕೆ ಸರ್ಕಾದರ ವಕೀಲರು “ಪರೀಕ್ಷಾ ಕೇಂದ್ರಗಳಲ್ಲಿ ನಡೆದಿರಬಹುದಾದ ತನಿಖೆಗೆ ಸಂಬಂಧಿಸಿದಂತೆ ತನಿಖೆ ಪ್ರಗತಿಯಲ್ಲಿದೆ. ಯಾರೆಲ್ಲಾ ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ. ಈಗಾಗಲೇ ಹಲವು ಮಂದಿಯನ್ನು ಬಂಧಿಸಲಾಗಿದೆ. ಒಬ್ಬರು ಎಡಿಜಿಪಿ, ಇಬ್ಬರು ಡಿವೈಎಸ್‌ಪಿ, ಇಬ್ಬರು ಮೀಸಲು ಪಡೆಯ ಇನ್‌ಸ್ಪೆಕ್ಟರ್‌ಗಳು, ಒಬ್ಬರು ಫಿಂಗರ್‌ ಪ್ರಿಂಟ್‌ ತಜ್ಞರಾದ ಇನ್‌ಸ್ಪೆಕ್ಟರ್‌, ಇಬ್ಬರು ಪಿಎಸ್‌ಐ, ಒಬ್ಬರು ಆರ್‌ಎಸ್‌ಐ ಅವರನ್ನು ಬಂಧಿಸಲಾಗಿದೆ. ಈ ನಡುವೆ ಎಡಿಜಿಪಿ ಮನೆ ಹಾಗೂ ಅವರ ಆಪ್ತ ವಲಯದಲ್ಲಿ ಶೋಧ ನಡೆಸಲಾಗಿದೆ. 90 ದಿನಗಳ ಒಳಗೆ ಆರೋಪ ಪಟ್ಟಿ ಸಲ್ಲಿಸಬೇಕಿದ್ದು, ಇನ್ನೂ 15 ದಿನ ಸಮಯವಿದೆ. ತನಿಖೆಯ ಪರಿಸ್ಥಿತಿ ನೋಡಿಕೊಂಡು ಅದನ್ನು ನಿರ್ಧರಿಸಲಾಗುವುದು. ಆದರೆ, ಅದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ” ಎಂದು ವಿವರಿಸಿದರು.

ಇದಕ್ಕೆ ಪೀಠವು “ಅಮೃತ್‌ ಪೌಲ್‌ ಬಂಧನದ ಬಳಿಕ ಪ್ರಕರಣದಲ್ಲಿ ಯಾವ ರೀತಿಯ ಪ್ರಗತಿಯಾಗಿದೆ” ಎಂಬ ನಿರ್ದಿಷ್ಟ ಪ್ರಶ್ನೆ ಎತ್ತಿತು. ಇದಕ್ಕೆ ಸರ್ಕಾರದ ವಕೀಲರು “ಎಡಿಜಿಪಿ ಮನೆಯಲ್ಲಿ ಶೋಧನೆ ನಡೆಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಒಬ್ಬರನ್ನು ಬಂಧಿಸಲಾಗಿದೆ” ಎಂದರು.

ಆಗ ಪೀಠವು “ಪೌಲ್‌ ಅವರನ್ನು ಜುಲೈ 4ರಂದು ಸಿಐಡಿ ಕಸ್ಟಡಿಗೆ ಪಡೆಯಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ಏನು ಪ್ರಗತಿಯಾಗಿದೆ. ನಿನ್ನೆಯೂ ಅವರ ಪೊಲೀಸ್‌ ಕಸ್ಟಡಿಯನ್ನು ವಿಸ್ತರಿಸಿಕೊಂಡಿದ್ದೀರಿ” ಎಂದು ಒತ್ತಿ ಕೇಳಿತು.

ಇದಕ್ಕೆ ಸರ್ಕಾರದ ವಕೀಲರು “ಪೌಲ್‌ ಅವರ ಬ್ಯಾಂಕ್‌ ಖಾತೆಯನ್ನು ಜಫ್ತಿ ಮಾಡಲಾಗಿದೆ. ಎಡಿಜಿಪಿ ಮನೆಯಲ್ಲಿ ಶೋಧ ನಡೆಸಲಾಗಿದೆ. ಅವರ ಸಹಾಯಕರ ಮನೆಯಲ್ಲೂ ಶೋಧ ನಡೆಸಿದ್ದೇವೆ. ಈ ದಾಖಲೆಗಳು ಮತ್ತು ಕರೆಗಳ ಪರಿಶೀಲನೆ (ಸಿಡಿಆರ್‌) ನಡೆಯುತ್ತಿದೆ. ಇದನ್ನು ಪರಿಶೀಲಿಸಲಾಗುತ್ತಿದೆ” ಎಂದು ವಿವರಿಸಿದರು.

ಆಗ ನ್ಯಾಯಮೂರ್ತಿ ಸಂದೇಶ್‌ ಅವರು “ಪೌಲ್‌ ಅವರು ಯಾರ ಜೊತೆ ಮಾತನಾಡಿದ್ದಾರೆ ಎಂಬುದು ಬಹುಮುಖ್ಯ” ಎಂದರು.

ಇದಕ್ಕೆ ಸರ್ಕಾರದ ವಕೀಲರು “ಪೌಲ್‌ ಅವರ ಮೊಬೈಲ್‌ ವಶಕ್ಕೆ ಪಡೆಯಲಾಗಿದೆ. ಇದನ್ನು ತಪಾಸಣೆಗೆ ಕಳುಹಿಸಲಾಗಿದ್ದು, ಎಡಿಜಿಪಿ ಯಾರೆಲ್ಲರ ಜೊತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರ ಪಾತ್ರದ ಬಗ್ಗೆ ತಿಳಿಯಬೇಕಿದೆ. ಇದು ಪ್ರಮುಖವಾಗಿದೆ” ಎಂದರು.

ಇದಕ್ಕೆ ಪೀಠವು “ಪೌಲ್‌ ಅವರ ಫೋನ್‌ ವಶಕ್ಕೆ ಪಡೆದ ಮೇಲೆ ಏನು ಮಾಡಿದ್ದೀರಿ. ಎಡಿಜಿಪಿ ಶ್ರೇಣಿಯ ಕೆಳಗಿನ ಅಧಿಕಾರಿಗಳಿಂದ ತನಿಖೆ ನಡೆಸಿದ್ದೀರಿ. ಇದು ತನಿಖಾಧಿಕಾರಿಗಳಲ್ಲಿ ಆತಂಕ ಮೂಡಿಸುವುದಿಲ್ಲವೇ? ಒಂದೊಮ್ಮೆ ಬಂಧಿತ ಎಡಿಜಿಪಿಗೆ ಕ್ಲೀನ್‌ ಚಿಟ್‌ ನೀಡಿದರೆ ಅವರ ಕೆಳಗಿನ ಅಧಿಕಾರಿಗಳಿಗೆ ಆತಂಕ ಮೂಡುವುದಿಲ್ಲವೇ?” ಎಂದು ಪ್ರಶ್ನೆ ಹಾಕಿತು.

“ಆ ರೀತಿ ಆಗಲು ಸಾಧ್ಯವೇ ಇಲ್ಲ. ನ್ಯಾಯಾಲಯದ ನಿರ್ದೇಶನದಂತೆ ಸಿಐಡಿಯ ಡಿ ಜಿ ತನಿಖೆಯ ಮೇಲೆ ನಿಗಾ ಇಟ್ಟಿದ್ದಾರೆ. ಪೊಲೀಸ್‌ ವರಿಷ್ಠಾಧಿಕಾರಿಯೂ ನ್ಯಾಯಾಲಯದ ಮುಂದೆ ಇದ್ದು, ತನಿಖೆಯ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ, ಯಾರೂ ಪ್ರಭಾವ ಬೀರಲಾಗದು ಎಂಬ ಭರವಸೆಯನ್ನು ನಾನು ನ್ಯಾಯಾಲಯಕ್ಕೆ ನೀಡುತ್ತೇನೆ” ಎಂದು ಸರ್ಕಾರದ ವಕೀಲರು ಹೇಳಿದರು.

Also Read
ಪಿಎಸ್‌ಐ ಹಗರಣ: ಅಮೃತ್‌ ಪೌಲ್‌ರನ್ನು ಮತ್ತೆ ಮೂರು ದಿನ ಸಿಐಡಿ ವಶಕ್ಕೆ ನೀಡಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

ʼಬೇಲಿಯೇ ಹೊಲ ಮೇಯ್ದʼ ಪ್ರಕರಣ ಇದು

ಇದಕ್ಕೆ ಪೀಠವು “ಪೊಲೀಸ್‌ ವರಿಷ್ಠಾಧಿಕಾರಿಯೂ ಎಡಿಜಿಪಿ ಶ್ರೇಣಿಗಿಂತ ಕೆಳಗಿದ್ದಾರಲ್ಲವೇ? ಇದು ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣವಲ್ಲವೇ? ಮಹತ್ವದ ಸ್ಥಾನದಲ್ಲಿರುವ ಎಡಿಜಿಪಿಯೇ ಓಎಂಆರ್‌ ಶೀಟುಗಳನ್ನು ತಿರುಚುವ ಕೃತ್ಯದಲ್ಲಿ ಭಾಗಿಯಾಗಿರುವುದರಿಂದ ಏನನ್ನು ನಿರೀಕ್ಷಿಸುವುದು? ಹೀಗಿರುವಾಗ, ಪಾರದರ್ಶಕ ತನಿಖೆಯನ್ನು ನಿರೀಕ್ಷಿಸಲಾದೀತೆ? ಇದು ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣವಲ್ಲದೆ ಮತ್ತೇನು ಅಲ್ಲ” ಎಂದಿತು.

“ಇದೇ ಕಾರಣಕ್ಕಾಗಿ 10 ದಿನಗಳ ಹಿಂದೆ ಪೌಲ್‌ ಅವರನ್ನು ಬಂಧಿಸಿದ ಮೇಲೆ ತನಿಖೆಯಲ್ಲಿ ಏನು ಪ್ರಗತಿಯಾಗಿದೆ ಎಂದು ಕೇಳಿದ್ದು. ಹೀಗಿರುವಾಗ ಎಡಿಜಿಪಿ ಶ್ರೇಣಿಗಿಂತ ಕೆಳಗಿನ ಅಧಿಕಾರಿಗಳು ತನಿಖೆ ನಡೆಸುವ ಸ್ಥಿತಿಯಲ್ಲಿರುತ್ತಾರೆಯೇ? ನೀವು ತನಿಖಾಧಿಕಾರಿಗಳ ಪಟ್ಟಿಯನ್ನು ಕಳೆದ ಬಾರಿ ನೀಡಿದ್ದೀರಿ. ಅವರೆಲ್ಲರೂ ಎಡಿಜಿಪಿ ಶ್ರೇಣಿಗಿಂತ ಕೆಳಗಿದ್ದಾರೆ. ಎಡಿಜಿಪಿಯೇ ಓಎಂಆರ್‌ ಶೀಟ್‌ ತಿರುಚಿದ ಕೃತ್ಯದಲ್ಲಿ ಬಂಧಿತರಾಗಿರುವಾಗ ತನಿಖಾಧಿಕಾರಿಗಳಿಂದ ಪಾರದರ್ಶಕ ತನಿಖೆಯನ್ನು ನ್ಯಾಯಾಲಯ ನಿರೀಕ್ಷಿಸಲಾದೀತೆ?” ಎಂದು ಪೀಠ ಕೇಳಿತು.

ವಿಚಾರಣೆ ಮಧ್ಯಾಹ್ನ ಮುಂದುವರೆಯಲಿದೆ.

Related Stories

No stories found.
Kannada Bar & Bench
kannada.barandbench.com