P Prasanna Kumar, SPP for CID
P Prasanna Kumar, SPP for CID 
ಸುದ್ದಿಗಳು

[ಪಿಎಸ್‌ಐ ಹಗರಣ] ಸಿಬ್ಬಂದಿಗೆ ಪೌಲ್‌ ಬೆದರಿಕೆ ವಿಚಾರ ತನಿಖೆಯಲ್ಲಿ ಬಯಲು; ಜಾಮೀನಿಗೆ ಪ್ರಾಸಿಕ್ಯೂಷನ್‌ ತೀವ್ರ ವಿರೋಧ

Siddesh M S

ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಎಡಿಜಿಪಿ ಅಮೃತ್‌ ಪೌಲ್‌ ಅವರ ಪಾತ್ರದ ಬಗ್ಗೆ ಅಪರಾಧ ತನಿಖಾ ದಳದ (ಸಿಐಡಿ) ಅಧಿಕಾರಿಗಳ ಮುಂದೆ ಹೇಳಿಕೆ ನೀಡಿರುವುದಕ್ಕೆ ತಮಗೆ ಪೌಲ್‌ ಬೆದರಿಕೆ ಹಾಕಿದ್ದಾರೆ ಎಂದು ಅವರ ಸಿಬ್ಬಂದಿಯು ತಿಳಿಸಿರುವುದು ತನಿಖೆಯ ವೇಳೆ ತಿಳಿದುಬಂದಿರುವುದಾಗಿ ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ತಿಳಿಸಿದೆ.

ಪೌಲ್‌ ಅವರು ಕೋರಿರುವ ಜಾಮೀನು ಅರ್ಜಿಗೆ ಸಿಐಡಿಯು ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಹಗರಣದಲ್ಲಿ 35ನೇ ಆರೋಪಿಯಾಗಿ ಬಂಧಿತರಾಗಿರುವ ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಪೌಲ್‌ ಪಾತ್ರದ ಬಗ್ಗೆ ಅವರ ಸಿಬ್ಬಂದಿಯು ಸಿಐಡಿ ಅಧಿಕಾರಿಗಳಿಗೆ ಹೇಳಿಕೆ ನೀಡಿರುವುದಕ್ಕೆ ಅವರಿಗೆ ಪೌಲ್‌ ಬೆದರಿಕೆ ಹಾಕಿದ್ದಾರೆ ಎಂಬ ವಿಚಾರ ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ, ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುವುದರಿಂದ ಪೌಲ್‌ ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಸಿಐಡಿಯು ಗಂಭೀರ ಆಕ್ಷೇಪವೆತ್ತಿದೆ.

ಅಮೃತ್‌ ಪೌಲ್‌ ಜಾಮೀನು ಕೋರಿ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಬೆಂಗಳೂರಿನ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಧೀಶರಾದ ಆನಂದ್‌ ಟಿ. ಚವ್ಹಾಣ್‌ ಅವರು ನಡೆಸಿದರು. ಕಳೆದ ವಿಚಾರಣೆಯಲ್ಲಿನ ಆದೇಶದಂತೆ ಸಿಐಡಿ ಪ್ರತಿನಿಧಿಸಿರುವ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್‌ ಅವರು ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದರು.

ಹಿರಿಯ ಅಧಿಕಾರಿಯಾಗಿರುವ ಪೌಲ್‌ ಅವರು ತಮ್ಮ ಸಿಬ್ಬಂದಿ ಮತ್ತು ಮಧ್ಯವರ್ತಿಗಳ ಮೂಲಕ ಪಿತೂರಿ ನಡೆಸಿದ್ದು, ಓಎಂಆರ್‌ ಶೀಟ್‌ಗಳನ್ನು ತಿರುಚುವುದರಲ್ಲಿ ಭಾಗಿಯಾಗಿರುವುದು ಅವರ ವಿರುದ್ಧ ಮೇಲ್ನೋಟಕ್ಕೆ ಗಂಭೀರ ಪ್ರಕರಣವಿದೆ ಎಂದು ಸಿಐಡಿ ಆಕ್ಷೇಪಣೆಯಲ್ಲಿ ಉಲ್ಲೇಖಿಸಲಾಗಿದೆ. ಸಿಐಡಿ ಆಕ್ಷೇಪಣೆಯಲ್ಲಿರುವ ಪ್ರಮುಖ ಅಂಶಗಳು ಇಂತಿವೆ.

  • ಪೊಲೀಸ್‌ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ ಪೌಲ್‌ ಅವರ ಬಳಿ ಅಭ್ಯರ್ಥಿಗಳ ಓಎಂಆರ್‌ ಶೀಟುಗಳನ್ನು ಇಡಲಾಗಿದ್ದ ಸ್ಟ್ರಾಂಗ್‌ ರೂಮ್‌ನ ಕೀಗಳು ಅವರೊಂದಿಗೆ ಇದ್ದವು. ಇತರೆ ಆರೋಪಿಗಳ ಜೊತೆ ಸೇರಿಕೊಂಡು ಪಿತೂರಿ ನಡೆಸಿ ಪೌಲ್‌ ಅವರು ಉದ್ದೇಶಪೂರ್ವಕವಾಗಿ ಕಿಟ್‌ ಬಾಕ್ಸ್‌ಗಳ ಕೀಗಳನ್ನು ನೀಡಿದ್ದರು. ಇದನ್ನು ಬಳಸಿಕೊಂಡು ಇತರೆ ಆರೋಪಿಗಳು ಅಭ್ಯರ್ಥಿಗಳ ಓಎಂಆರ್‌ ಶೀಟುಗಳ ತಿರುಚಿದ್ದಾರೆ.

  • ತನಿಖೆಯ ಸಂದರ್ಭದಲ್ಲಿ 23ರಿಂದ 34ನೇ ಆರೋಪಿಗಳ ಪಾತ್ರ ಬೆಳಕಿಗೆ ಬಂದಿದ್ದು, ಅವರನ್ನು ಆನಂತರ ಬಂಧಿಸಲಾಗಿದೆ. ಈ ಮಧ್ಯೆ, ಪೌಲ್‌ ಅವರ ಪಾತ್ರ ಬಯಲಾಗಿದ್ದು, ಜುಲೈ 4ರಂದು ಅವರನ್ನು ಬಂಧಿಸಲಾಗಿದೆ. ಪೌಲ್‌ ಅವರನ್ನು ಕಸ್ಟಡಿ ವಿಚಾರಣೆಗೂ ಒಳಪಡಿಸಲಾಗಿದೆ.

  • ವಿಚಾರಣೆಯ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಪಾಸಾಗಿದ್ದ 172 ಅಭ್ಯರ್ಥಿಗಳನ್ನು ಹಾಲ್‌ ಟಿಕೆಟ್‌ ಮತ್ತು ಓಎಂಆರ್‌ ಶೀಟಿನ ಕಾರ್ಬನ್‌ ಕಾಪಿ ಹಾಜರುಪಡಿಸಲು ಸೂಚಿಸಿಲಾಗಿತ್ತು. ಈ ಪೈಕಿ ನಾಲ್ವರನ್ನು ಹೊರತುಪಡಿಸಿ ಉಳಿದವರ ಸಲ್ಲಿಸಿದ್ದ ಓಎಂಆರ್‌ನ ಕಾರ್ಬನ್‌ ಕಾಪಿ ಮತ್ತು ಹಾಲ್‌ ಟಿಕೆಟ್‌ ಅನ್ನು ಜಫ್ತಿ ಮಾಡಲಾಗಿದೆ. ಆ ಓಎಂಆರ್‌ ಶೀಟುಗಳ ಕಾರ್ಬನ್‌ ಕಾಪಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗಿದ್ದು, ಅಸಲಿ ಓಎಂಆರ್‌ ಶೀಟುಗಳು, 22 ಅಭ್ಯರ್ಥಿಗಳ ಓಎಂಆರ್‌ ಶೀಟಿನ ಕಾರ್ಬನ್‌ ಕಾಪಿಗೆ ತಾಳೆಯಾಗಿಲ್ಲ. ಇದನ್ನು ಆಧರಿಸಿ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಿರುವ ದಾಖಲೆಗಳನ್ನು ಆಧರಿಸಿ ಪೊಲೀಸರು ಹಾಲಿ ಪ್ರಕರಣದಲ್ಲಿ ಐಪಿಸಿ ಸೆಕ್ಷನ್‌ 409 ಅನ್ನು ಸೇರಿಸಿದ್ದಾರೆ. ಇದರಲ್ಲಿ ಪೌಲ್‌ ಅವರ ಪಾತ್ರ ಸ್ಪಷ್ಟವಾಗಿದೆ. ಆದ್ದರಿಂದ ಅವರಿಗೆ ಜಾಮೀನು ನಿರಾಕರಿಸಬೇಕು.

  • ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಪೊಲೀಸ್‌ ನೇಮಕಾತಿ ವಿಭಾಗದ ಮುಖ್ಯಸ್ಥರು ಗಂಭೀರ ಅಪರಾಧದಲ್ಲಿ ಭಾಗಿಯಾಗಿದ್ದು, ಈ ಸಂದರ್ಭದಲ್ಲಿ ಅವರಿಗೆ ಜಾಮೀನು ನೀಡಿದರೆ ಅವರು ಪ್ರಾಸಿಕ್ಯೂಷನ್‌ ಸಾಕ್ಷಿಯನ್ನು ತಿರುಚುವ ಸಾಧ್ಯತೆ ಇರುತ್ತದೆ.

  • ­ತನಿಖೆಯ ಸಂದರ್ಭದಲ್ಲಿ ಪೌಲ್‌ ಅವರ ಮೊಬೈಲ್‌ ಫೋನ್‌ ಅನ್ನು ಜಫ್ತಿ ಮಾಡಿ, ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಎಫ್‌ಎಸ್‌ಎಲ್‌ ವರದಿ ಇನ್ನಷ್ಟೇ ಬರಬೇಕಿದೆ. ಇದರ ಜೊತೆಗೆ ಸಿಐಡಿಯು ಸಾಕ್ಷಿಗಳ ಹೇಳಿಕೆ ದಾಖಲಿಸುತ್ತಿದೆ. ಈ ಸಂದರ್ಭದಲ್ಲಿ ಪೌಲ್‌ ಅವರಿಗೆ ಜಾಮೀನು ನೀಡಿದರೆ ತನಿಖೆಗೆ ಅಡ್ಡಿಯಾಗಬಹುದು. ಪ್ರಕರಣದಲ್ಲಿ 7, 9, 17, 18, 36 ಮತ್ತು 37ನೇ ಆರೋಪಿಗಳು ನಾಪತ್ತೆಯಾಗಿದ್ದು, ಅವರನ್ನು ಬಂಧಿಸಿ, ಪೌಲ್‌ ಅವರ ಜೊತೆಗಿನ ಅವರ ಪಿತೂರಿ ಪಾತ್ರವನ್ನು ಪತ್ತೆ ಹಚ್ಚಬೇಕಿದೆ. ಹೀಗಾಗಿ, ಪೌಲ್‌ ಅವರಿಗೆ ಜಾಮೀನು ನೀಡಬಾರದು.

  • ಸಿಐಡಿಯು ವಿವಿಧ ಆರೋಪಿಗಳ ಗ್ರಾಹಕರ ಅರ್ಜಿಗಳು (ಕಸ್ಟಮರ್ ಅಪ್ಲಿಕೇಶನ್‌ ಫಾರ್ಮ್‌) ಮತ್ತು ಸಿಡಿಆರ್‌ ಸಂಗ್ರಹಿಸುತ್ತಿದ್ದು, ಅದನ್ನು ವಿಶ್ಲೇಷಿಸಿ, ಹಗರಣದ ಪಿತೂರಿಯನ್ನು ಬಯಲು ಮಾಡಬೇಕಿದೆ. ಪರೀಕ್ಷಾ ಕೇಂದ್ರಗಳ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಬೇಕಿದೆ.

  • ಪೌಲ್‌ ಅವರು ಅತ್ಯಂತ ಹಿರಿಯ ಅಧಿಕಾರಿಯಾಗಿದ್ದು, ತನಿಖೆಯ ಈ ಹಂತದಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಪ್ರಾಸಿಕ್ಯೂಷನ್‌ ಸಾಕ್ಷಿಯನ್ನು ತಿರುಚುವುದರ ಜೊತೆಗೆ ಅವರಿಗೆ ಗಂಭೀರ ಬೆದರಿಕೆ ಹಾಕುವ ಸಾಧ್ಯತೆ ಇದೆ. ಯಾವುದೇ ದೃಷ್ಟಿಯಿಂದ ನೋಡಿದರೂ ಪೌಲ್‌ ಅವರು ಜಾಮೀನಿಗೆ ಅರ್ಹರಾಗಿಲ್ಲ ಎಂದು ಆಕ್ಷೇಪಣೆಯಲ್ಲಿ ವಿವರಿಸಲಾಗಿದೆ.

ಮಂಪರು ಪರೀಕ್ಷೆಗೆ ನಕಾರ: ಮಂಪರು ಪರೀಕ್ಷೆಗೆ ಒಳಪಡಲು ಆರೋಪಿ ಅಮೃತ್‌ ಪೌಲ್‌ ನಿರಾಕರಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಪೌಲ್ ಪರ ವಕೀಲರು ತಿಳಿಸಿದರು. ಮಂಪರು ಪರೀಕ್ಷೆಗೆ ಪೌಲ್‌ ಅವರನ್ನು ಒಳಪಡಿಸಲು ಅವರ ಅನುಮತಿ ಕೋರಿ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು.