ಕಳಂಕರಹಿತ ಮತ್ತು ಯಾವುದೇ ತೆರನಾದ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲದ ತನ್ನನ್ನು ವದಂತಿ ಮತ್ತು ಕಾನೂನಿನಲ್ಲಿ ಸಾಕ್ಷ್ಯವಾಗಿ ಒಪ್ಪಲಾಗದ ಶಂಕಾಸ್ಪದ ವಿಚಾರಗಳನ್ನು ಆಧರಿಸಿ ಪೊಲೀಸ್ ನೇಮಕಾತಿ ಹಗರಣದಲ್ಲಿ ಸಿಲುಕಿಸಿರುವುದು ದುರದೃಷ್ಟಕರ ಎಂದು ಪೊಲೀಸ್ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಮೃತ್ ಪೌಲ್ ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮಂಗಳವಾರ ಸಲ್ಲಿಸಿರುವ ಲಿಖಿತ ವಾದದಲ್ಲಿ ಹೇಳಿದ್ದಾರೆ.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ 35ನೇ ಆರೋಪಿಯಾಗಿರುವ ಪೌಲ್ ಅವರ ಜಾಮೀನು ಮನವಿಯ ವಿಚಾರಣೆಯನ್ನು ಬೆಂಗಳೂರಿನ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಆನಂದ್ ಟಿ. ಚವ್ಹಾಣ್ ಅವರು ನಡೆಸಿದರು. ಈ ವೇಳೆ ಪೌಲ್ ಪರ ವಕೀಲರಾದ ಆಶೀಶ್ ಕೃಪಾಕರ ಅವರು ಜಾಮೀನಿಗೆ ಪೂರಕವಾಗಿ ಲಿಖಿತ ವಾದವನ್ನು ಪೀಠಕ್ಕೆ ಸಲ್ಲಿಸಿದರು. ಪೌಲ್ ಅವರ ಲಿಖಿತ ವಾದದ ಪ್ರಮುಖ ಅಂಶಗಳು ಇಂತಿವೆ.
ಆರೋಪಿಯು ಮುಗ್ಧರಾಗಿದ್ದು, ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 465, 468, 471, 120ಬಿ, 409 ಜೊತೆಗೆ 34ರ ಅಡಿ ಪ್ರಕರಣ ದಾಖಲಿಸಲಾಗಿದೆ.
2022ರ ಮೇ 24, 25 ಮತ್ತು 26ರಂದು ಪೊಲೀಸರು ಪೌಲ್ ಅವರಿಗೆ ಸಿಆರ್‌ಪಿಸಿ ಸೆಕ್ಷನ್ ಅಡಿ ನೋಟಿಸ್ ಜಾರಿ ಮಾಡಿ, ಸಾಕ್ಷಿಯಾಗಿ ತನಿಖೆಯಲ್ಲಿ ಭಾಗವಹಿಸುವಂತೆ ಅಪರಾಧ ತನಿಖಾ ದಳದ (ಸಿಐಡಿ) ತನಿಖಾಧಿಕಾರಿ ಸೂಚಿಸಿದ್ದರು.
ಜುಲೈ 4ರಂದು ರಿಮ್ಯಾಂಡ್ ಅರ್ಜಿಯಲ್ಲಿ ಮೊದಲ ಬಾರಿಗೆ ಪೌಲ್ ಅವರನ್ನು 35ನೇ ಆರೋಪಿ ಎಂದು ತನಿಖಾಧಿಕಾರಿ ಉಲ್ಲೇಖಿಸಿದ್ದಾರೆ. ಇದರಲ್ಲಿ ಮೊದಲ ಬಾರಿಗೆ ಸ್ವಯಂಪ್ರೇರಿತವಾಗಿ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸುಳ್ಳು ಅಥವಾ ಭಾಗಶಃ ಸತ್ಯವನ್ನು ಉಲ್ಲೇಖಿಸಲಾಗಿದೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಿರುವುದನ್ನು ರಿಮ್ಯಾಂಡ್ ಅರ್ಜಿಯಲ್ಲಿ ಉಲ್ಲೇಖಿಸಲಾಗಿಲ್ಲ.
ಜುಲೈ 4ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದ ತನಿಖಾಧಿಕಾರಿಯು ಬಂಧಿಸಿರುವುದಾಗಿ ತಿಳಿಸಿದ್ದು, ಆಘಾತ ಉಂಟು ಮಾಡಿದೆ. ಮೌಖಿಕವಾಗಿಯೂ ಪೌಲ್ ಅವರನ್ನು ಏತಕ್ಕಾಗಿ ಬಂಧಿಸಲಾಗುತ್ತಿದೆ ಎಂದು ತಿಳಿಸಿಲ್ಲ. ಬಂಧಿಸಿ ತಮ್ಮನ್ನು ಈ ಘನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, 10 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು.
ಜುಲೈ 6ರಂದು ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಪೌಲ್ ಅವರ ವಸತಿ ಮತ್ತು ಪೋಷಕರು ನೆಲೆಸಿರುವ ಕಡೆ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳಿಗಾಗಿ ಶೋಧ ನಡೆಸಲಾಗಿದೆ. ಅರ್ಧ ದಿನಕ್ಕೂ ಹೆಚ್ಚು ಕಾಲ ಅಧಿಕಾರಿಗಳು ಸ್ಥಳ ಶೋಧ ಮಾಡಿದ್ದು, ಪೊಲೀಸರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ದೊರೆತಿಲ್ಲ. ಇದರರ್ಥ ಇತರರನ್ನು ರಕ್ಷಿಸಲು, ಸ್ಥಾಪಿತ ಹಿತಾಸಕ್ತಿಗಳ ಅಂಬೋಣದಂತೆ ತಪ್ಪಾಗಿ ಪೌಲ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ.
ಪೌಲ್ ಅವರ ಬಂಧನದ ಬೆನ್ನಿಗೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಜುಲೈ 4ರಿಂದ ತಕ್ಷಣ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ಅಮಾನತು ಮಾಡಿದೆ. ಹೀಗಿರುವಾಗ ಸಾಕ್ಷ್ಯವನ್ನು ತಿರುಚುವುದು ಇರಲಿ ಅದನ್ನು ಸಂಧಿಸುವ ಸಾಧ್ಯತೆಯೂ ಇಲ್ಲ.
2011ರಲ್ಲಿ ಗಣರಾಜ್ಯ ದಿನದಂದು ಆಡಳಿತ ವಿಭಾಗದ ಎಡಿಜಿಪಿ ಪೊಲೀಸ್ ಮೆಡಲ್ ನೀಡಿ ಗೌರವಿಸಿದ್ದು, ಎಡಿಜಿಪಿ ಅವರು “ಪ್ರಾಮಾಣಿಕ" ಸರ್ಟಿಫಿಕೇಟ್ ನೀಡಿ ಗೌರವಿಸಿದ್ದಾರೆ.
ಅಕ್ರಮ ಗಣಿಗಾರಿಕೆ ವಿಚಾರವು ಬಹುಚರ್ಚಿತವಾಗಿದ್ದಾಗ ಅತ್ಯಂತ ಸಂದಿಗ್ಧ ಸಂದರ್ಭದಲ್ಲಿ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಪೌಲ್ ಕೆಲಸ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಚಿಸಲಾದ ಆಂತರಿಕ ಭದ್ರತಾ ವಿಭಾಗಕ್ಕೆ ಏಕಾಂಗಿಯಾಗಿ ಮೂಲಸೌಕರ್ಯ ಕಲ್ಪಿಸುವ ಮೂಲಕ ಗೌರವಕ್ಕೆ ಪಾತ್ರರಾಗಿದ್ದಾರೆ.
ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಕೆಲಸ ಮಾಡುವಾಗ ಜನವರಿ 13ರಂದು ಇ-ಸೇವಾ ಸಿಂಧುತ್ವ, ಡಿಜಿ ಲಾಕರ್, ಬಯೊಮೆಟ್ರಿಕ್ ಕ್ಯಾಪ್ಚರ್ ಮತ್ತು ಅಥೆಂಟಿಕೇಶನ್ ಪ್ರೊಟೋಕಾಲ್ (ಬಿ-ಕ್ಯಾಪ್) ಜಾರಿಗಾಗಿ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಂದ ಗೌರವ ಸ್ವೀಕರಿಸಿದ್ದಾರೆ. ಈ ಮೂಲಕ ರಾಜ್ಯದ ಪೊಲೀಸ್ ಪಡೆಯನ್ನು ಸಶಕ್ತಗೊಳಿಸುವ ಕೆಲಸ ಮಾಡಿದ್ದಾರೆ. ಒಮ್ಮೆಯೂ ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ತಿಳಿಸಲಾಗಿದೆ. ಈ ಎಲ್ಲಾ ಕಾರಣಗಳಿಗಾಗಿ, ಪೌಲ್ ಅವರು ಜಾಮೀನಿಗೆ ಅರ್ಹರು ಎಂದು ವಾದಿಸಲಾಗಿದೆ.