IPS officer Amrit Paul
IPS officer Amrit Paul 
ಸುದ್ದಿಗಳು

[ಪಿಎಸ್‌ಐ ಹಗರಣ] ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಜಾಮೀನು ಮನವಿ ತಿರಸ್ಕರಿಸಿದ ಬೆಂಗಳೂರಿನ ಸೆಷನ್ಸ್‌ ನ್ಯಾಯಾಲಯ

Bar & Bench

ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ಪ್ರಮುಖ ಆರೋಪಿ, ಅಮಾನತುಗೊಂಡಿರುವ ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮೃತ್‌ ಪೌಲ್‌ ಅವರ ಜಾಮೀನು ಮನವಿಯನ್ನು ಮಂಗಳವಾರ ಬೆಂಗಳೂರು ನಗರ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿದೆ.

ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಸಲ್ಲಿಸಿದ್ದ ಜಾಮೀನು ಮನವಿಯ ವಿಚಾರಣೆ ನಡೆಸಿದ್ದ 51ನೇ ಹೆಚ್ಚುವರಿ ನಗರ ಮತ್ತು ಸತ್ರ ನ್ಯಾಯಾಧೀಶರಾದ ಯಶವಂತ ಕುಮಾರ್‌ ಅವರು ಇಂದು ತೀರ್ಪು ಪ್ರಕಟಿಸಿದರು.

ಪಿಎಸ್‌ಐ ಹಗರಣದಲ್ಲಿ ಪೌಲ್‌ ಅವರು 35ನೇ ಆರೋಪಿಯಾಗಿದ್ದು, ಇನ್ನಷ್ಟೇ ಆರೋಪ ಪಟ್ಟಿ ಸಲ್ಲಿಸಬೇಕಿದೆ. ಪೌಲ್‌ ಅವರು ಪ್ರಭಾವ ಬೀರುವಂಥ ಸ್ಥಾನದಲ್ಲಿದ್ದಾರೆ ಹಾಗೂ ಹಗರಣಕ್ಕೆ ಸಂಬಂಧಿಸಿದ ಸಿಸಿಟಿವಿ ತುಣುಕುಗಳನ್ನು ಇನ್ನಷ್ಟೇ ವಿಶ್ಲೇಷಣೆ ನಡೆಸಬೇಕಿದೆ ಎಂಬ ಆಧಾರಗಳನ್ನು ನೀಡಿ ನ್ಯಾಯಾಲಯವು ಜಾಮೀನು ಮನವಿ ತಿರಸ್ಕರಿಸಿದೆ.

ಬೆಂಗಳೂರಿನ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಆನಂದ್‌ ಟಿ. ಚವ್ಹಾಣ್‌ ಅವರು ಜುಲೈ 25ರಂದು ಅಮೃತ್‌ ಪೌಲ್‌ ಅವರ ಜಾಮೀನು ಮನವಿಯನ್ನು ತಿರಸ್ಕರಿಸಿದ್ದರು. ಹೀಗಾಗಿ, ಪೌಲ್‌ ಅವರು ಜಾಮೀನು ಕೋರಿ ಸೆಷನ್ಸ್‌ ನ್ಯಾಯಾಲಯದ ಕದತಟ್ಟಿದ್ದರು.

ಸಿಐಡಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್‌ ಅವರು ವಾದ ಮಂಡಿಸಿದ್ದರು. ಪೌಲ್‌ ಅವರ ಪರವಾಗಿ ವಕೀಲರಾದ ಲೆನಿತಾ ಮಥಿಯಾಸ್‌ ಅವರು ವಾದಿಸಿದ್ದರು.