ಪಿಎಸ್‌ಐ ಹಗರಣ: ಜಾಮೀನು ಕೋರಿ ಸೆಷನ್ಸ್‌ ನ್ಯಾಯಾಲಯದ ಕದ ತಟ್ಟಿದ ಪೌಲ್‌; ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನಿರ್ದೇಶನ

ಪೌಲ್‌ ಅವರ ಮೊಬೈಲ್‌ ಫೋನ್‌ಗೆ ಸಂಬಂಧಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮತ್ತು ಸಿಸಿಟಿವಿ ತುಣುಕುಗಳನ್ನು ಸಂಗ್ರಹಿಸಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಕಸ್ಟಡಿಯಲ್ಲಿಡಲು ಸಕಾರಣವಲ್ಲ ಎಂದು ಜಾಮೀನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
Bengaluru City civil court and Amrit Paul
Bengaluru City civil court and Amrit Paul

ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ಪ್ರಮುಖ ಆರೋಪಿ, ಅಮಾನತುಗೊಂಡಿರುವ ಪೊಲೀಸ್‌ ನೇಮಕಾತಿ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮೃತ್‌ ಪೌಲ್‌ ಅವರು ಸಲ್ಲಿಸಿರುವ ಜಾಮೀನು ಮನವಿಗೆ ಆಕ್ಷೇಪಣೆ ಸಲ್ಲಿಸಲು ಬೆಂಗಳೂರು ನಗರ ಮತ್ತು ಸತ್ರ ನ್ಯಾಯಾಲಯವು ಸೋಮವಾರ ಅಪರಾಧ ತನಿಖಾ ದಳಕ್ಕೆ (ಸಿಐಡಿ) ನಿರ್ದೇಶಿಸಿದೆ.

ಹಿರಿಯ ಐಪಿಎಸ್‌ ಅಧಿಕಾರಿ ಅಮೃತ್‌ ಪೌಲ್‌ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು 51ನೇ ಹೆಚ್ಚುವರಿ ನಗರ ಮತ್ತು ಸತ್ರ ನ್ಯಾಯಾಧೀಶರಾದ ಯಶವಂತ ಕುಮಾರ್‌ ಅವರು ನಡೆಸಿದ್ದರು.

ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಪ್ರಕರಣ ಆಧರಿಸಿ ಪೌಲ್‌ ಅವರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ 35ನೇ ಆರೋಪಿಯನ್ನಾಗಿಸಲಾಗಿದೆ. ಆರೋಪಿ ಪೌಲ್‌ ಅವರಿಂದ ಯಾವುದೇ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿಲ್ಲ. ಸಿಐಡಿ ಪೊಲೀಸರು ವಶಪಡಿಸಿಕೊಂಡಿರುವ ಪೌಲ್‌ ಅವರ ಮೊಬೈಲ್‌ ಫೋನ್‌ಗೆ ಸಂಬಂಧಿಸಿದ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಮತ್ತು ಸಿಸಿಟಿವಿ ತುಣುಕುಗಳನ್ನು ಸಂಗ್ರಹಿಸಿಲ್ಲ ಎಂಬುದು ಅವರನ್ನು ಕಸ್ಟಡಿಯಲ್ಲಿಡಲು ಸಕಾರಣವಲ್ಲ ಎಂದು ಪೌಲ್‌ ಅವರ ಜಾಮೀನು ಮನವಿಯಲ್ಲಿ ವಿವರಿಸಲಾಗಿದೆ.

ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ 1-22ನೇ ಆರೋಪಿಗಳಿಗೆ ಸಂಬಂಧಿಸಿದ ಆರೋಪ ಪಟ್ಟಿಯನ್ನು ಈಗಾಗಲೇ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು, ಬಹುತೇಕ ತನಿಖೆ ಮುಗಿದಿದೆ. ನ್ಯಾಯಾಲಯ ವಿಧಿಸುವ ಯಾವುದೇ ಕಠಿಣ ಷರತ್ತಿಗೆ ಒಳಪಡಲು ಪೌಲ್‌ ಅವರು ಸಿದ್ಧರಾಗಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಕೋರಲಾಗಿದೆ.

Also Read
ಪಿಎಸ್‌ಐ ಹಗರಣ: ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಜಾಮೀನು ಮನವಿ ತಿರಸ್ಕರಿಸಿದ ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

ಅಮೃತ್‌ ಪೌಲ್‌ ಅವರಿಗೆ 5 ಕೋಟಿ ರೂಪಾಯಿ ನೀಡಿದ್ದು, ಹೀಗಾಗಿ ಅವರು ಪಿಎಸ್‌ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಓಎಂಆರ್‌ ಕಿಟ್‌ಬಾಕ್ಸ್‌ಗಳನ್ನು ಇಟ್ಟಿದ್ದ ಅಲ್ಮೇರಾಗಳ ಕೀಗಳನ್ನು ನೀಡಿದ್ದು, ಇದನ್ನು ಬಳಸಿ ಓಎಂಆರ್‌ ತಿರುಚಿರುವುದಾಗಿ ಪೊಲೀಸ್‌ ನೇಮಕಾತಿ ವಿಭಾಗದಲ್ಲಿ ಉಪ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಬಂಧಿತರಾಗಿ ಅಮಾನತುಗೊಂಡಿರುವ 31ನೇ ಆರೋಪಿ ಶಾಂತಕುಮಾರ್‌ ಹೇಳಿಕೆ ನೀಡಿದ್ದಾರೆ ಎಂದು ರಿಮ್ಯಾಂಡ್‌ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ಆಧರಿಸಿ ಜುಲೈ 4ರಂದು ಅಮೃತ್‌ ಪೌಲ್‌ ಅವರನ್ನು ಸಿಐಡಿ ಬಂಧಿಸಿತ್ತು. ಜುಲೈ 15ರವರೆಗೆ ಪೊಲೀಸ್‌ ಕಸ್ಟಡಿಯಲ್ಲಿದ್ದ ಪೌಲ್‌ ಅವರನ್ನು ಆನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬೆಂಗಳೂರಿನ ಒಂದನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರಾದ ಆನಂದ್‌ ಟಿ. ಚವ್ಹಾಣ್‌ ಅವರು ಜುಲೈ 25ರಂದು ಅಮೃತ್‌ ಪೌಲ್‌ ಅವರ ಜಾಮೀನು ಮನವಿಯನ್ನು ತಿರಸ್ಕರಿಸಿದ್ದರು. ಈಗ ಪೌಲ್‌ ಅವರು ಜಾಮೀನು ಕೋರಿ ಸೆಷನ್ಸ್‌ ನ್ಯಾಯಾಲಯದ ಕದತಟ್ಟಿದ್ದಾರೆ.

Related Stories

No stories found.
Kannada Bar & Bench
kannada.barandbench.com