PSI exam scam 
ಸುದ್ದಿಗಳು

ಪಿಎಸ್‌ಐ ಹಗರಣ: 10 ಮಂದಿ ಅಭ್ಯರ್ಥಿಗಳು, ಇಬ್ಬರು ಮಧ್ಯವರ್ತಿಗಳಿಗೆ ಜಾಮೀನು, ಇಬ್ಬರು ಸರ್ಕಾರಿ ಅಧಿಕಾರಿಗಳ ಅರ್ಜಿ ವಜಾ

ಪ್ರಕರಣದಲ್ಲಿ 30ನೇ ಆರೋಪಿಯಾಗಿರುವ ಪೊಲೀಸ್‌ ಇಲಾಖೆಯಲ್ಲಿ ಸೆಕ್ಷನ್‌ ಅಧಿಕಾರಿಯಾಗಿರುವ ಆರ್‌ ಮಂಜುನಾಥ್‌ & 34ನೇ ಆರೋಪಿ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಹರೀಶ್‌ ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾ ಮಾಡಿದೆ.

Bar & Bench

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಯಲ್ಲಿ ಜಾಗೃತ್‌ ಮತ್ತು ರಚನಾ ಹಣಮಂತ ಸೇರಿದಂತೆ 10 ಮಂದಿ ಅಭ್ಯರ್ಥಿಗಳು ಹಾಗೂ ಇಬ್ಬರು ಮಧ್ಯವರ್ತಿಗಳಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಆದರೆ, ಇಬ್ಬರು ಸರ್ಕಾರಿ ಅಧಿಕಾರಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ಮಾಡಿದೆ.

ಅಭ್ಯರ್ಥಿಗಳು, ಮಧ್ಯವರ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶರಾದ ಕೆ ಲಕ್ಷ್ಮಿನಾರಾಯಣ ಭಟ್‌ ಅವರು ಆದೇಶ ಮಾಡಿದ್ದಾರೆ.

ಬಂಧಿತರಾಗಿರುವ ಅಭ್ಯರ್ಥಿಗಳಾದ ಮೊದಲ ಆರೋಪಿ ಜಾಗೃತ್‌, 3ನೇ ಆರೋಪಿ ಸೋಮನಾಥ್‌ ಎಂ ಎಚ್‌, 4ನೇ ಆರೋಪಿ ರಘುವೀರ್‌ ಎಚ್‌ ಯು, 10ನೇ ಆರೋಪಿ ಮಮತೇಶ್‌ ಗೌಡ, 12ನೇ ಆರೋಪಿ ಸಿ ಎಂ ನಾರಾಯಣ, 14ನೇ ಆರೋಪಿ ಆರ್‌ ಮಧು, 16ನೇ ಆರೋಪಿ ದಿಲೀಪ್‌ ಕುಮಾರ್‌ ಸಿ ಕೆ, 17ನೇ ಆರೋಪಿ ರಚನಾ ಹಣಮಂತ, 19ನೇ ಆರೋಪಿ ಪ್ರವೀಣ್‌ ಕುಮಾರ್‌ ಎಚ್‌ ಆರ್‌ ಮತ್ತು 22ನೇ ಆರೋಪಿ ರಾಘವೇಂದ್ರ ಜಿ ಸಿ ಅವರಿಗೆ ಜಾಮೀನು ಮಂಜೂರಾಗಿದೆ. ಖಾಸಗಿ ವ್ಯಕ್ತಿಗಳಾಗಿರುವ ಮಧ್ಯವರ್ತಿಗಳಾದ 23ನೇ ಆರೋಪಿ ಕೇಶವಮೂರ್ತಿ ಮತ್ತು 27ನೇ ಆರೋಪಿ ಶರತ್‌ ಕುಮಾರ್‌ ಅವರಿಗೂ ಜಾಮೀನು ನೀಡಲಾಗಿದೆ.

5 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ತಲಾ ಒಬ್ಬರ ಭದ್ರತೆ ನೀಡಬೇಕು. 50 ಸಾವಿರ ರೂಪಾಯಿಯನ್ನು ನ್ಯಾಯಾಲಯದಲ್ಲಿ ಠೇವಣಿ ಇಡಬೇಕು. ಜಾಮೀನು ಮಂಜೂರಾಗಿರುವ ಆರೋಪಿಗಳು ಪಾಸ್‌ಪೋರ್ಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಪಾಸ್‌ಪೋರ್ಟ್‌ ಇಲ್ಲವಾದಲ್ಲಿ ಆ ಕುರಿತು ಅಫಿಡವಿಟ್‌ ಸಲ್ಲಿಸಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯವು ವಿಧಿಸಿದೆ.

ಜಾಮೀನು ಅರ್ಜಿ ವಜಾ: ಪ್ರಕರಣದಲ್ಲಿ 30ನೇ ಆರೋಪಿಯಾಗಿರುವ ಪೊಲೀಸ್‌ ಇಲಾಖೆಯಲ್ಲಿ ಸೆಕ್ಷನ್‌ ಅಧಿಕಾರಿಯಾಗಿರುವ ಆರ್‌ ಮಂಜುನಾಥ್‌ ಮತ್ತು 34ನೇ ಆರೋಪಿ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಹರೀಶ್‌ ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾ ಮಾಡಿದೆ.