ಪಿಎಸ್‌ಐ ನೇಮಕಾತಿ ಹಗರಣ: ಆರೋಪಿತ ಅಭ್ಯರ್ಥಿಗಳಾದ ಜಾಗೃತ್‌, ರಚನಾಗೆ ಜಾಮೀನು ಮಂಜೂರು ಮಾಡಿದ ವಿಶೇಷ ನ್ಯಾಯಾಲಯ

ಕಳೆದ ವರ್ಷ ರಾಜ್ಯದ 92 ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆದಿತ್ತು. ಕಲಬುರ್ಗಿಯ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ಸರ್ಕಾರವು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು.
PSI exam scam
PSI exam scam

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಯಲ್ಲಿ ಬಂಧಿತರಾಗಿರುವ ಇಬ್ಬರು ಅಭ್ಯರ್ಥಿಗಳಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಎಸ್‌ ಜಾಗೃತ್‌ ಮತ್ತು 17ನೇ ಆರೋಪಿಯಾಗಿರುವ ರಚನಾ ಹನುಮಂತ ಅವರು ಸಲ್ಲಿಸಿದ್ದ ಅರ್ಜಿಗಳನ್ನು ಬೆಂಗಳೂರಿನ 23ನೇ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶರಾದ ಕೆ ಲಕ್ಷ್ಮಿನಾರಾಯಣ್‌ ಭಟ್‌ ಅವರು ಮಾನ್ಯ ಮಾಡಿದ್ದಾರೆ.

ಸೆಪ್ಟೆಂಬರ್‌ 14ರಂದು ಜಾಗೃತ್‌ ಮತ್ತು ಅಕ್ಟೋಬರ್‌ 27ರಂದು ರಚನಾ ಅವರ ಪರವಾಗಿ ವಕೀಲೆ ಡಾ. ವಂದನಾ ಪಿ ಎಲ್‌ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಹಿರಿಯ ವಕೀಲ ಎಂ ಎಸ್‌ ಶ್ಯಾಮಸುಂದರ್‌ ಅವರು ಅರ್ಜಿದಾರರ ಪರವಾಗಿ ವಾದ ಮಂಡಿಸಿದ್ದರು. ಸಿಐಡಿ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ವಾದಿಸಿದ್ದರು.

ಸಿಐಡಿ ಉಪ ಪೊಲೀಸ್‌ ವರಿಷ್ಠಾಧಿಕಾರಿ ಪಿ ನರಸಿಂಹ ಮೂರ್ತಿ ಅವರ ದೂರಿನ ಮೇರೆಗೆ ಐಪಿಸಿ ಸೆಕ್ಷನ್‌ 120B (ಕ್ರಿಮಿನಲ್‌ ಪಿತೂರಿ), 420 (ವಂಚನೆ), 465 (ನಕಲು), 468 (ವಂಚನೆಗೆ ವಿದ್ಯುನ್ಮಾನ ಸಾಧನ ಬಳಕೆ), 471 (ನಕಲಿ ದಾಖಲೆಯನ್ನು ನೈಜ ಎಂದು ಬಿಂಬಿಸುವುದು) ಜೊತೆಗೆ 34ರ (ಹಲವು ಕೃತ್ಯಗಳಲ್ಲಿ ಭಾಗಿ) ಅಡಿ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ಏಪ್ರಿಲ್‌ 30ರಂದು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಇಲ್ಲಿ ಜಾಗೃತ್‌ ಅವರನ್ನು ಮೊದಲ ಆರೋಪಿಯನ್ನಾಗಿಸಿದ್ದು, ರಚನಾ 17ನೇ ಆರೋಪಿಯಾಗಿದ್ದಾರೆ.

ಜುಲೈ 2ರಂದು ಜಾಗೃತ್‌ ಅವರನ್ನು, ಆಗಸ್ಟ್‌ 28ರಂದು ರಚನಾ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದರು. ಪಿಎಸ್‌ಐ ನೇಮಕಾತಿ ಪಟ್ಟಿಯಲ್ಲಿ ಜಾಗೃತ್‌ ನಾಲ್ಕನೇ ರ‍್ಯಾಂಕ್‌ ಪಡೆದಿದ್ದು, ಮಹಿಳಾ ವಿಭಾಗದಲ್ಲಿ ರಚನಾ ಅವರು ಮೊದಲ ರ‍್ಯಾಂಕ್‌ ಪಡೆದಿದ್ದರು.

ರಚನಾ ಮತ್ತು ಜಾಗೃತ್‌ ಜಾಮೀನು ಅರ್ಜಿಗಳನ್ನು ವಿಚಾರಣಾಧೀನ ನ್ಯಾಯಾಲಯ ಮತ್ತು ಹೈಕೋರ್ಟ್‌ ಈ ಹಿಂದೆ ತಿರಸ್ಕರಿಸಿದ್ದವು.

ಪ್ರಕರಣದ ಹಿನ್ನೆಲೆ: 2021ರ ಅಕ್ಟೋಬರ್‌ 3ರಂದು ರಾಜ್ಯದ 92 ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆದಿತ್ತು. ಕಲಬುರ್ಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರ ಬಹಿರಂಗವಾಗುತ್ತಿದ್ದಂತೆ ರಾಜ್ಯ ಸರ್ಕಾರವು ಪ್ರಕರಣವು ಸಿಐಡಿ ತನಿಖೆಗೆ ವಹಿಸಿತ್ತು.

ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ಮಧ್ಯಂತರ ವರದಿ ಸಲ್ಲಿಸಿತ್ತು. ನೇಮಕಾತಿಯಲ್ಲಿ ಅಕ್ರಮ, ನ್ಯಾಯಯೋಚಿತವಾಗಿ ನೇಮಕಾತಿ ನಡೆಸದಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಹೀಗಾಗಿ, ಅರ್ಹರಿಗೆ ಅನ್ಯಾಯವಾಗದಂತೆ ಮರು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ವಿವರಿಸಿತ್ತು.

Also Read
[ಪಿಎಸ್‌ಐ ಹಗರಣ] ಎಫ್‌ಐಆರ್‌ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ 1ನೇ ರ‍್ಯಾಂಕ್‌ ರಚನಾ, 4ನೇ ರ‍್ಯಾಂಕ್‌ ಜಾಗೃತ್‌

ಕಲಬುರ್ಗಿ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ 11 ಅಭ್ಯರ್ಥಿಗಳ ಪೈಕಿ 8 ಮಂದಿ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಅಭ್ಯರ್ಥಿಗಳು, ಶಾಲಾ ಸಿಬ್ಬಂದಿ, ವ್ಯವಸ್ಥಾಪಕರು, ಏಜೆಂಟ್‌ಗಳು ಹಾಗೂ ಹಲವರ ಸಹಕಾರದಿಂದ ಪರೀಕ್ಷಾ ಪ್ರಕ್ರಿಯೆಯನ್ನು ದುರ್ಬಲಗೊಳಿಸಿರುವುದು ಸಿಐಡಿ ವಿಚಾರಣೆ ಹಾಗೂ ತನಿಖೆಯಿಂದ ಗೊತ್ತಾಗಿದೆ. ಜ್ಞಾನಜ್ಯೋತಿ ಪರೀಕ್ಷಾ ಕೇಂದ್ರದ ರೀತಿಯಲ್ಲಿಯೇ ಇತರೆ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆದಿರುವುದನ್ನು ತಳ್ಳಿಹಾಕಲಾಗದು ಎಂದೂ ಸರ್ಕಾರದ ಆದೇಶದಲ್ಲಿ ವಿವರಿಸಲಾಗಿತ್ತು.

Also Read
[ಪಿಎಸ್‌ಐ ನೇಮಕಾತಿ ಹಗರಣ] ಜಾಗೃತ್‌, ರಚನಾ ಹನಮಂತ್‌ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಬೆಂಗಳೂರು ನ್ಯಾಯಾಲಯ

ಬೆಂಗಳೂರಿನ ಏಳು ಕೇಂದ್ರಗಳಲ್ಲಿ ಪರೀಕ್ಷೆ ಬರೆದು ಆಯ್ಕೆಯಾಗಿರುವ 22 ಅಭ್ಯರ್ಥಿಗಳ ಒಎಂಆರ್‌ ಪ್ರತಿಗಳು ಸಂದೇಹಾಸ್ಪದವಾಗಿವೆ. ಇದರ ಜೊತೆಗೆ ಹೆಚ್ಚಿನ ಸಂಖ್ಯೆಯ ಒಎಂಆರ್‌ ಅಸಲಿ ಹಾಗೂ ಕಾರ್ಬನ್‌ ಪ್ರತಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಸಿಐಡಿ ವರದಿಯಲ್ಲಿ ಹೇಳಿತ್ತು. ಆನಂತರ ತನಿಖೆಯಲ್ಲಿ ಇಡೀ ಹಗರಣ ಬೆಳಕಿಗೆ ಬಂದಿತ್ತು.

Related Stories

No stories found.
Kannada Bar & Bench
kannada.barandbench.com