Madhya Pradesh HC, PM Narendra Nodi and Raja Pateria
Madhya Pradesh HC, PM Narendra Nodi and Raja Pateria 
ಸುದ್ದಿಗಳು

ರಾಷ್ಟ್ರಪತಿ, ಪ್ರಧಾನಿ ವಿರುದ್ಧ ಜನನಾಯಕರು ಅಸಭ್ಯ ಭಾಷೆ ಬಳಸಬೇಡಿ: ಪಟೇರಿಯಾಗೆ ಮಧ್ಯ ಪ್ರದೇಶ ಹೈಕೋರ್ಟ್‌ ಜಾಮೀನು ನಕಾರ

Bar & Bench

ರಾಷ್ಟ್ರಪತಿ ಅಥವಾ ಪ್ರಧಾನ ಮಂತ್ರಿಯಂತಹ ಉನ್ನತ ಸ್ಥಾನಗಳಲ್ಲಿ ಇರುವ ನೇತಾರರ ವ್ಯಕ್ತಿತ್ವವನ್ನು ಸಾರ್ವಜನಿಕ ನಾಯಕರು ಅವಹೇಳನ ಮಾಡುವುದು ಅಪೇಕ್ಷಣೀಯವಲ್ಲ ಎಂದು ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸುವ ವೇಳೆ ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ [ರಾಜಾ ಪಟೇರಿಯಾ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ಕಳೆದ ತಿಂಗಳು ಕಾಂಗ್ರೆಸ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಸಭ್ಯ ಮತ್ತು ಬೆದರಿಕೆಯ ಭಾಷೆ ಬಳಸಿ ಭಾಷಣ ಮಾಡಿದ ಆರೋಪದ ಮೇಲೆ ಪಟೇರಿಯಾ ಅವರನ್ನು ಬಂಧಿಸಲಾಗಿತ್ತು. ಧರ್ಮ ಮತ್ತು ಜಾತಿ ಆಧಾರದಲ್ಲಿ ಜರನ್ನು ಎತ್ತಿಕಟ್ಟಿದ ಆರೋಪವೂ ಪಟೇರಿಯಾ ಅವರ ಮೇಲಿದೆ.

ಸಾರ್ವಜನಿಕ ನಾಯಕರಾಗಿರುವ ಅರ್ಜಿದಾರರು ದೇಶದ ಪ್ರಧಾನಿಗೆ ಇಂತಹ ಅವಹೇಳನಕಾರಿ ಭಾಷೆಯನ್ನು ಬಳಸುವ ಇಲ್ಲವೇ ಅಪರಾಧ ಎಸಗಲು ಗುಂಪಿಗೆ ಕುಮ್ಮಕ್ಕು ನೀಡುವಂತಾಗಬಾರದು ಎಂದು ನ್ಯಾ. ಸಂಜಯ್‌ ದ್ವಿವೇದಿ ಅವರು ತಿಳಿಸಿದ್ದಾರೆ.

"ಇಂತಹ ನಡೆ ಸಮಾಜದಲ್ಲಿ ಸಾರ್ವಜನಿಕ ನಾಯಕರ ವ್ಯಕ್ತಿತ್ವಕ್ಕೆ ಕುಂದು ತರುವುದಷ್ಟೇ ಅಲ್ಲದೆ ರಾಜಕೀಯ ಅಪರಾಧ ಹೆಚ್ಚಳಕ್ಕೆ ಕಾರಣವಾಗುತ್ತದೆ. ಉನ್ನತ ನಾಯಕರ ಚಿತ್ರಣವನ್ನು ನೇತಾರರ ವ್ಯಕ್ತಿತ್ವವನ್ನು ಸಾರ್ವಜನಿಕ ನಾಯಕರು ಅವಹೇಳನ ಮಾಡುವುದು ಅಪೇಕ್ಷಣೀಯವಲ್ಲ. ಇದು ಸಮಾಜದಲ್ಲಿ ದಿಗ್ಭ್ರಮೆ ಉಂಟುಮಾಡುತ್ತದೆ” ಎಂದು ನ್ಯಾಯಾಲಯ ಹೇಳಿದೆ.

ಪಟೇರಿಯಾ ಪರ ವಾದ ಮಂಡಿಸಿದ ಹಿರಿಯ ವಕೀಲರು, ವೀಡಿಯೋ ಕ್ಲಿಪ್ ತಿರುಚಲಾಗಿದೆ. ಆ ಮೂಲಕ ಪ್ರಾಸಿಕ್ಯೂಷನ್‌ ಸುಳ್ಳು ಕತೆ ಹೆಣೆದಿದೆ. ಅವರು ಸಹಜವಾಗಿಯೇ ಈ ಮಾತುಗಳನ್ನಾಡಿದ್ದಾರೆ. ಸಾಮಾನ್ಯವಾಗಿ ರಾಜಕೀಯ ನಾಯಕರು ತಮ್ಮ ವಿರೋಧ ಪಕ್ಷದ ಸಾಧನೆ ಅಥವಾ ಅರ್ಹತೆಗೆ ಕುಂದುಂಟು ಮಾಡುವ ಪ್ರಚಾರದಲ್ಲಿ ತೊಡಗಿರುತ್ತಾರೆ. ಇದು ರಾಜಕೀಯ ತಂತ್ರಗಾರಿಕೆಯಾಗಿದ್ದು ಯಾರೊಬ್ಬರ ನಡತೆ ಅಥವಾ ಬದುಕಿಗೆ ಧಕ್ಕೆ ತರುವಂತಹ ಉದ್ದೇಶ ಪಟೇರಿಯಾ ಅವರಿಗೆ ಇಲ್ಲ ಎಂದು ವಾದಿಸಿದರು.

ಆದರೆ ಸರ್ಕಾರದ ಪರ ವಕೀಲರು ಪಟೇರಿಯಾ ಅಶಿಸ್ತಿನ ನಡವಳಿಕೆಗಳಿಗೆ ಸಾಕ್ಷಿಯಾಗಿ ವಿವಿಧ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಲಭ್ಯವಿವೆ. ಅವರ ಪ್ರಚೋದನಕಾರಿ ಭಾಷಣವನ್ನು ಸ್ಪಷ್ಟವಾಗಿ ತೋರಿಸುವ ವೀಡಿಯೊ ತುಣುಕುಗಳಿವೆ. ಆ ಮೂಲಕ ಪ್ರಧಾನಿ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವುದು ಮಾತ್ರವಲ್ಲದೆ ಅವರ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ಹೇಳಿದರು.

ವಾದಗಳನ್ನು ಆಲಿಸಿದ ನ್ಯಾಯಾಲಯ ಅಂತಿಮವಾಗಿ ಪಟೇರಿಯಾ ಅವರನ್ನು ಬಿಡುಗಡೆ ಮಾಡಿದರೆ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ತಿಳಿಸಿ ಜಾಮೀನು ಅರ್ಜಿ ತಿರಸ್ಕರಿಸಿತು.