Justices V Ramasubramanian, BR Gavai, Abdul Nazeer, AS Bopanna, BV Nagarathna
Justices V Ramasubramanian, BR Gavai, Abdul Nazeer, AS Bopanna, BV Nagarathna  
ಸುದ್ದಿಗಳು

ಭ್ರಷ್ಟಾಚಾರ ಎಸಗಿದ ಸಾರ್ವಜನಿಕ ಸೇವಕನನ್ನು ಸಾಂದರ್ಭಿಕ ಸಾಕ್ಷ್ಯ ಆಧರಿಸಿಯೂ ದೋಷಿ ಎಂದು ಪರಿಗಣಿಸಬಹುದು: ಸುಪ್ರೀಂ

Bar & Bench

ಭ್ರಷ್ಟಾಚಾರ ತಡೆ ಕಾಯಿದೆಯಡಿ ನೇರ ಸಾಕ್ಷ್ಯಾಧಾರಗಳು ಇಲ್ಲದಿದ್ದಾಗ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ಸಾರ್ವಜನಿಕ ಸೇವಕನನ್ನು ದೋಷಿ ಎಂದು ಪರಿಗಣಿಸಬಹುದು ಎಂಬುದಾಗಿ ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ನೀಡಿದೆ. [ನೀರಜ್ ದತ್ತಾ ಮತ್ತು ದೆಹಲಿ ಸರ್ಕಾರ ನಡುವಣ ಪ್ರಕರಣ].

ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕೆ ಮತ್ತು ಪಡೆದಿದ್ದಕ್ಕೆ ನೇರ ಮೌಖಿಕ ಅಥವಾ ದಾಖಲೆಯಲ್ಲಿ ಸಾಕ್ಷ್ಯಗಳು ಇಲ್ಲದಿದ್ದಲ್ಲಿ ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ಅದನ್ನು ಸಾಬೀತುಪಡಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್, ವಿ ರಾಮಸುಬ್ರಮಣ್ಯಂ, ಬಿ ಆರ್ ಗವಾಯಿ, ಎಎಸ್ ಬೋಪಣ್ಣ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ತಿಳಿಸಿದೆ.  

“ದೂರುದಾರರ ಪುರಾವೆಗಳು ಇಲ್ಲದಿದ್ದಾಗ ಅಪರಾಧವನ್ನು ತಾರ್ಕಿಕವಾಗಿ ಮಂಡಿಸಲು ಅನುಮತಿ ಇದೆ” ಎಂದು ನ್ಯಾಯಾಲಯ ಹೇಳಿದೆ.

ಆದರೆ, ಮೂಲಭೂತ ಸಂಗತಿಗಳನ್ನು ಸಾಬೀತುಪಡಿಸಿದಾಗ ಮಾತ್ರವಷ್ಟೇ ಅಕ್ರಮವಾಗಿ ಲಂಚಕ್ಕೆ ಬೇಡಿಕೆ ಇಟ್ಟ ಅಥವಾ ಸ್ವೀಕರಿಸಿದ್ದಕ್ಕೆ ಸಂಬಂಧಿಸಿದ ಊಹೆಯನ್ನು ತಾರ್ಕಿಕವಾಗಿ ನ್ಯಾಯಾಲಯ ತೀರ್ಮಾನ ಮಾಡಬಹುದಾಗಿದೆ ಎಂದು ಅದು ಸ್ಪಷ್ಟಪಡಿಸಿದೆ.

ಲಂಚದ ಬೇಡಿಕೆ ಮತ್ತು ಅದನ್ನು ಸ್ವೀಕರಿಸಿದ್ದನ್ನು ಸಾಬೀತುಪಡಿಸುವ ವಿವಿಧ ಅಂಶಗಳನ್ನು ವಿವರಿಸಿದ ನ್ಯಾಯಾಲಯ ಸೆಕ್ಷನ್ 7 ಮತ್ತು 13(1)(1) ಅಡಿಯಲ್ಲಿ ಅಪರಾಧಗಳಿಗೆ ಶಿಕ್ಷೆ ನೀಡಲು ಅಗತ್ಯವಾದ ಪುರಾವೆಗಳ ಸ್ವರೂಪ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದಂತೆ  ಈ ಹಿಂದೆ ತ್ರಿಸದಸ್ಯ ಪೀಠ ನೀಡಿದ್ದ ತೀರ್ಪಿನ ಬಗ್ಗೆ ಯಾವುದೇ ಸಂಘರ್ಷಗಳಿಲ್ಲ ಎಂದು ಸ್ಪಷ್ಟಪಡಿಸಿತು.