BR Ambedkar, Madurai bench 
ಸುದ್ದಿಗಳು

ಸಾರ್ವಜನಿಕ ಸೇವಕರು ಶಾಲಾಮಕ್ಕಳಂತೆ ಸಾರ್ವತ್ರಿಕ ರಜಾದಿನಗಳ ನಿರೀಕ್ಷೆಯಲ್ಲಿರುತ್ತಾರೆ: ಮದ್ರಾಸ್ ಹೈಕೋರ್ಟ್ ಬೇಸರ

ತಮ್ಮ ಜನ್ಮದಿನದಂದು ಜನ ಹೆಚ್ಚು ದುಡಿಮೆಯಲ್ಲಿ ತೊಡಗಲಿ ಎಂಬುದು ಡಾ. ಬಿ ಆರ್ ಅಂಬೇಡ್ಕರ್ ಅವರ ಬಯಕೆಯಾಗಿರುತ್ತಿತ್ತು ಎಂದು ನ್ಯಾಯಾಲಯ ನುಡಿಯಿತು.

Bar & Bench

ಸಾರ್ವಜನಿಕ ಸೇವಕರು ಸದಾ ಶಾಲಾ ಮಕ್ಕಳಂತೆ ರಜಾದಿನ ಮತ್ತು ಕೆಲಸದ ವಿನಾಯಿತಿಯ ನಿರೀಕ್ಷೆಯಲ್ಲಿರುತ್ತಾರೆ ಎಂದು ಮದ್ರಾಸ್‌ ಹೈಕೋರ್ಟ್‌ ಇತ್ತೀಚೆಗೆ ಬೇಸರವ್ಯಕ್ತಪಡಿಸಿದೆ.

ಜನರ ಭಾವನೆಗಳನ್ನು ಗೌರವಿಸುವ ಸಲುವಾಗಿ ಸರ್ಕಾರ ಅಂಬೇಡ್ಕರ್‌ ಜಯಂತಿ ದಿನವಾದ ಏಪ್ರಿಲ್ 14ರಂದು ರಜೆ ಘೋಷಿಸಿದೆ. ಆದರೆ ಜನ ಹೆಚ್ಚು ಕೆಲಸ ಮಾಡಬೇಕೆಂಬುದು ಸ್ವತಃ ಡಾ. ಅಂಬೇಡ್ಕರ್‌ ಅವರ ಬಯಕೆಯಾಗಿರುತ್ತಿತ್ತು ಎಂದು ನ್ಯಾ. ಜಿ ಆರ್‌ ಸ್ವಾಮಿನಾಥನ್‌ ಅವರಿದ್ದ ಮದ್ರಾಸ್‌ ಹೈಕೋರ್ಟ್‌ ಮಧುರೈ ಪೀಠ ನುಡಿಯಿತು.

"ಸಾರ್ವಜನಿಕ ಸೇವಕರು ಶಾಲಾ ಮಕ್ಕಳಂತೆ. ಅವರಿಗೆ ರಜೆ ನೀಡುವುದು ಮತ್ತು ಕೆಲಸದಿಂದ ವಿನಾಯಿತಿ ದೊರಕಿಸಿಕೊಡುವುದು ಸದಾ ಸ್ವಾಗತಾರ್ಹ ಸಂಗತಿ" ಎಂದು ಅದು ಹೇಳಿದೆ.

2018ರ ಏಪ್ರಿಲ್ 14ರಂದು ಘೋಷಿತ ರಜೆಯ ದಿನ ಕೆಲಸ ಮಾಡಿದ್ದರಿಂದ ಅಂದು ತಮ್ಮ ವೇತನ ದ್ವಿಗುಣಗೊಳಿಸುವಂತೆ ಕೋರಿ ಕೂಡಂಕುಳಂ ಪರಮಾಣು ವಿದ್ಯುತ್ ನೌಕರರ ಸಂಘದ ಸದಸ್ಯರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಅರ್ಜಿದಾರರು ಕೇಳಿದ ವಿತ್ತೀಯ ಸೌಲಭ್ಯ ಒದಗಿಸುವಂತೆ ನ್ಯಾಯಾಲಯ ಯೋಜನಾ ನಿರ್ದೇಶಕರಿಗೆ ನಿರ್ದೇಶನ ನೀಡಿದರೂ "ತಮ್ಮ  ಜಯಂತಿಯಂದು ರಜಾದಿನ ಘೋಷಿಸುವ ಬದಲು ಜನ ಕಷ್ಟಪಟ್ಟು ಕೆಲಸ ಮಾಡಬೇಕೆಂದು ಡಾ ಅಂಬೇಡ್ಕರ್ ಬಯಸುತ್ತಿದ್ದರು. ನಾವು ಭಾವನೆ  ಮತ್ತು ಸಂಕೇತ ವ್ಯವಸ್ಥೆಯನ್ನು ಪಾಲಿಸುತ್ತಿದ್ದು ದಕ್ಷತೆಯ ಬದಲು ಔದಾರ್ಯವನ್ನು ನೆಚ್ಚಿಕೊಂಡಿದ್ದೇವೆ" ಎಂದು ನ್ಯಾಯಾಲಯ ಹೇಳಿತು.

"ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ ಅವರಂತೆಯೇ  ಅಂಬೇಡ್ಕರ್ ಕೂಡ ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಸಾವಿನ ಸಂದರ್ಭದಲ್ಲಿ ರಜೆ ಘೋಷಿಸಬೇಡಿ, ಬದಲಿಗೆ ಹೆಚ್ಚು ಕೆಲಸ ಮಾಡಿ ಎನ್ನುತ್ತಿದ್ದರು" ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Kudankulam_Employee_Union_v_Govt_of_India.pdf
Preview