Tweets of Kunal Kamra
Tweets of Kunal Kamra 
ಸುದ್ದಿಗಳು

“ಜನರ ನಂಬಿಕೆ ನ್ಯಾಯಾಂಗದ ಕಾರ್ಯಗಳ ಮೇಲೆ ಸ್ಥಾಪಿತವಾಗಿದೆಯೇ ವಿನಾ ಟೀಕೆಗಳ ಮೇಲಲ್ಲ:” ಕ್ಷಮೆ ಕೋರಲು ನಿರಾಕರಿಸಿದ ಕಮ್ರಾ

Bar & Bench

ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಆರೋಪ ಎದುರಿಸುತ್ತಿರುವ ಹಾಸ್ಯ ಕಲಾವಿದ ಕುನಾಲ್‌ ಕಮ್ರಾ ಅವರು ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆಯು ಅದರ ಕಾರ್ಯಗಳ ಮೇಲೆ ಸ್ಥಾಪಿತವಾಗಿದೆಯೇ ವಿನಾ ಅದರ ಬಗೆಗಿನ ಟೀಕೆ ಅಥವಾ ವಿಮರ್ಶೆಗಳ ಮೇಲಲ್ಲ ಎಂದು ತಾವು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.

“ನನ್ನ ಟ್ವೀಟ್‌ಗಳು ವಿಶ್ವದ ಅತ್ಯಂತ ಶಕ್ತಿಶಾಲಿ ನ್ಯಾಯಾಲಯದ ಅಡಿಪಾಯವನ್ನು ಅಲುಗಾಡಿಸಬಹುದು ಎಂಬ ಸಲಹೆಯು ನನ್ನ ಸಾಮರ್ಥ್ಯದ ಅತಿಯಾದ ಅಂದಾಜಾಗಿದೆ. ಸಾರ್ವಜನಿಕರು ಸುಪ್ರೀಂ ಕೋರ್ಟ್‌ ಮೇಲೆ ಇಟ್ಟಿರುವ ನಂಬಿಕೆಯನ್ನು ಗೌರವಿಸುವ ರೀತಿಯಲ್ಲಿಯೇ ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದ ಕೆಲವು ಹಾಸ್ಯಗಳನ್ನು ಆಧರಿಸಿ ಜನರು ತಮ್ಮ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳವುದಿಲ್ಲ ಎಂಬುದನ್ನು ನಂಬಬೇಕು. ನ್ಯಾಯಾಂಗದ ಮೇಲಿನ ಸಾರ್ವಜನಿಕರ ನಂಬಿಕೆಯು ಅದರ ಕಾರ್ಯಗಳ ಮೇಲೆ ಸ್ಥಾಪಿತವಾಗಿದೆಯೇ ವಿನಾ ಅದರ ಬಗೆಗಿನ ಟೀಕೆ ಅಥವಾ ವಿಮರ್ಶೆಗಳ ಮೇಲಲ್ಲ” ಎಂದು ಅಫಿಡವಿಟ್‌ನಲ್ಲಿ ಕಮ್ರಾ ವಿವರಿಸಿದ್ದಾರೆ.

ಸಾರ್ವಜನಿಕರ ನಂಬಿಕೆಯು ನ್ಯಾಯಾಂಗದ ಕಾರ್ಯಗಳ ಮೇಲೆ ಸ್ಥಾಪಿತವಾಗಿದೆಯೇ ವಿನಾ ಅದರ ಬಗೆಗಿನ ಟೀಕೆ ಅಥವಾ ವಿಮರ್ಶೆಗಳ ಮೇಲಲ್ಲ.
ಕುನಾಲ್‌ ಕಮ್ರಾ

ಪ್ರಜಾಪ್ರಭುತ್ವದಲ್ಲಿ ಯಾವುದೇ ಅಂಗವು ಟೀಕಾತೀತ ಎಂದು ಹೇಳುವುದು ದೇಶಾದ್ಯಂತ ಯೋಜಿತವಲ್ಲದ ಲಾಕ್‌ಡೌನ್‌ ಘೋಷಿಸಿ ವಲಸೆ ಕಾರ್ಮಿಕರು ತಮ್ಮ ಊರಿಗೆ ಮರಳಲು ದಾರಿ ಹುಡುಕಿಕೊಳ್ಳಬೇಕು ಎಂದು ಹೇಳಿದಂತೆ. ಇದು ತರ್ಕಹೀನ ಮತ್ತು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಕಮ್ರಾ ಹೇಳಿದ್ದಾರೆ. ವಕೀಲರಾದ ಪ್ರಿಥಾ ಶ್ರೀಕುಮಾರ್‌ ಐಯ್ಯರ್‌ ಮೂಲಕ ಕ್ರಮಾ ಅಫಿಡವಿಟ್‌ ಸಲ್ಲಿಸಿದ್ದಾರೆ.

ಕಮ್ರಾ ಅವರ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳು ಇಂತಿವೆ:

  • ಹಾಸ್ಯ ಕಲಾವಿದರು ತಮ್ಮ ಗ್ರಹಿಕೆ ಆಧರಿಸಿ ಹಾಸ್ಯ ಮಾಡಿ ಜನರನ್ನು ನಗಿಸುತ್ತಾರೆ. ತಮ್ಮನ್ನು ನಗಿಸಲಾರದ ಹಾಸ್ಯಗಳಿಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸುವುದಿಲ್ಲ. ತಮ್ಮ ಟೀಕಾಕಾರನ್ನು ರಾಜಕಾರಣಿಗಳು ಉಪೇಕ್ಷಿಸುತ್ತಾರಲ್ಲ ಹಾಗೆ. ಹಾಸ್ಯವು ಪರಿಸ್ಥಿತಿಯನ್ನು ತಿಳಿಗೊಳಿಸಿ ನೊಂದವರಿಗೆ ಸಮಾಧಾನ ಉಂಟು ಮಾಡುತ್ತದೆ.

  • ಲಕ್ಷ್ಮಣರೇಖೆಯನ್ನು ನಾನು ದಾಟಿದ್ದು, ನನ್ನ ಇಂಟರ್‌ನೆಟ್‌ ಅನ್ನು ನ್ಯಾಯಾಲಯವು ನಿರ್ಬಂಧಿಸಬೇಕು ಎಂದಾದರೆ ಆಗಸ್ಟ್‌ 15ರಂದು ನಮ್ಮ ಕಾಶ್ಮೀರಿ ಸ್ನೇಹಿತರು ಬರೆಯುವಂತೆ ನಾನು ಸ್ವಾತಂತ್ರ್ಯ ದಿನ ಶುಭಾಶಯಗಳು ಎಂಬ ಅಂಚೆ ಪತ್ರಗಳನ್ನು ಬರೆಯುತ್ತೇನೆ.

  • ವಿಡಂಬನೆ ಅಥವಾ ಹಾಸ್ಯಕ್ಕೆ ವಸ್ತುವಾದ ಮಾತ್ರಕ್ಕೆ ನ್ಯಾಯಮೂರ್ತಿಗಳು ತಮ್ಮ ಕರ್ತವ್ಯ ನಿಭಾಯಿಸಲಾಗದ ಸ್ಥಿತಿ ತಲುಪಲಾಗದು ಎಂದು ನಂಬಿದ್ದೇನೆ.

  • ದೇಶದಲ್ಲಿ ಅಸಹಿಷ್ಣುತೆಯ ಸಂಸ್ಕೃತಿ ವ್ಯಾಪಕವಾಗಿ ಹಬ್ಬುತ್ತಿದ್ದು, ಅನ್ಯಥಾ ಭಾವಿಸುವುದು ಮೂಲಭೂತ ಹಕ್ಕಂತೆ ಪರಿಗಣನೆಯಾಗುತ್ತಿದ್ದು, ರಾಷ್ಟ್ರೀಯ ಒಳಾಂಗಣ ಕ್ರೀಡೆಯ ಸ್ಥಾನಮಾನಕ್ಕೆ ಇದನ್ನು ಏರಿಸಲಾಗಿದೆ.

  • ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಲಾಗುತ್ತಿದ್ದು, ತಾವು ಮಾಡದ ಹಾಸ್ಯಗಳಿಗೆ ಹಾಸ್ಯ ಕಲಾವಿದ ಮುನಾವರ್‌ ಫಾರೂಖಿ ಅವರನ್ನು ಜೈಲಿಗೆ ಹಾಕಲಾಗಿದೆ. ರಾಷ್ಟ್ರದ್ರೋಹದ ಆರೋಪದಲ್ಲಿ ಶಾಲಾ ಮಕ್ಕಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇಂಥ ಸಂದರ್ಭದಲ್ಲಿ ನ್ಯಾಯಾಲಯವು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೂಲ ತತ್ವ ಎಂದು ತೋರಬೇಕು.

ಕಮ್ರಾ ಟ್ವಿಟರ್‌ನಲ್ಲಿ ಮಾಡಿದ್ದ ನಾಲ್ಕು ಟ್ವೀಟ್‌ಗಳ ಸಂಬಂಧ ಹಲವು ಕಾನೂನು ವಿದ್ಯಾರ್ಥಿಗಳು ಮತ್ತು ವಕೀಲರು ನ್ಯಾಯಾಂಗ ನಿಂದನಾ ಪ್ರಕ್ರಿಯೆಗೆ ಅನುಮತಿ ನೀಡುವಂತೆ ಕೋರಿದ್ದರು. ನವೆಂಬರ್‌ 12ರಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್ ಇದಕ್ಕೆ‌ ಒಪ್ಪಿಗೆ ನೀಡಿದ್ದರು.