Patiala House court  
ಸುದ್ದಿಗಳು

ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಕಾರಣ ತನ್ನ ವಿರುದ್ಧ ಸೇಡಿನ ಕ್ರಮ ಎಂದ ಪೂಜಾ: ನಾಳೆ ನಿರೀಕ್ಷಣಾ ಜಾಮೀನು ಆದೇಶ

ವ್ಯವಸ್ಥೆ ಮತ್ತು ಸಮಾಜಕ್ಕೆ ಪೂಜಾ ವಂಚಿಸಿದ್ದು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ದೆಹಲಿ ಪೊಲೀಸರು ಹಾಗೂ ಯುಪಿಎಸ್‌ಸಿಯಿಂದ ವಾದ ಮಂಡನೆ.

Bar & Bench

ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪರೀಕ್ಷೆಯನ್ನು ಮೋಸದಿಂದ ತೇರ್ಗಡೆಯಾಗಿರುವ ಆರೋಪಕ್ಕೆ ಸಂಬಂಧಿಸಿದಂತೆ ತರಬೇತಿ ನಿರತ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶವನ್ನು ದೆಹಲಿ ನ್ಯಾಯಾಲಯ ಬುಧವಾರ ಕಾಯ್ದಿರಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ಎಎಸ್‌ಜೆ) ದೇವೇಂದ್ರ ಕುಮಾರ್ ಜಂಗಾಲ ಅವರು ಗುರುವಾರ, ಆ.1ರಂದು ಸಂಜೆ 4 ಗಂಟೆಗೆ ಆದೇಶ ಪ್ರಕಟಿಸಲಿದ್ದಾರೆ.

ಪೂಜಾ ಅವರಿಗೆ ಪುಣೆ ಜಿಲ್ಲಾಧಿಕಾರಿ ಲೈಂಗಿಕ ಕಿರುಕುಳ ನೀಡಿದ್ದರು. ಅದಕ್ಕಾಗಿ ಅವರ ವಿರುದ್ಧ ಆಕೆ ದೂರು ದಾಖಲಿಸಿದ್ದರು. ಆದರೆ ಮಾಧ್ಯಮಗಳಿಗೆ ಈ ವಿಚಾರ ತಿಳಿಸಿರಲಿಲ್ಲ. ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸೇವಾ ನಿಯಮಗಳಡಿ ಸಮರ್ಥಿಸಿಕೊಳ್ಳಲು ನ್ಯಾಯಾಲಯ ಆಕೆಗೆ ಅವಕಾಶ ನೀಡಬೇಕು. ಇದಕ್ಕಾಗಿ ನಿರೀಕ್ಷಣಾ ಜಾಮೀನು ನೀಡಬೇಕು ಎಂದು ಪೂಜಾ ಪರ ವಕೀಲರು ವಾದಿಸಿದರು.  

"ಪೂಜಾ ಅವರ ತಂದೆ- ತಾಯಿ ವಿಚ್ಛೇದಿತರು. ಆಕೆ ಅಂಗವಿಕಲಳಾಗಿದ್ದು. ಆಕೆಯನ್ನು ರಕ್ಷಿಸಬೇಕಾದ ವ್ಯವಸ್ಥೆಯಿಂದಲೇ ಆಕೆ ವಿಕಲಾಂಗಳಾಗಿದ್ದಾಳೆ. ಯುಪಿಎಸ್‌ಸಿ ಅವಳ ವಿರುದ್ಧ ಏಕೆ ಹೀಗೆ ಮಾಡುತ್ತಿದೆ? ಅವಳು ಮಹಿಳೆ ಎಂದೇ?  ಅಂಗವಿಕಲಳೆಂದೇ?" ಎಂದು ನ್ಯಾಯಾಲಯವನ್ನು ಪ್ರಶ್ನಿಸಿದರು. ಅಲ್ಲದೆ ಪೂಜಾ ವಿರುದ್ಧ ಮಾಧ್ಯಮಗಳು ಅಪಪ್ರಚಾರ ನಡೆಸಿವೆ ಎಂದರು.

ಆದರೆ ವ್ಯವಸ್ಥೆ ಮತ್ತು ಸಮಾಜಕ್ಕೆ ಪೂಜಾ ವಂಚಿಸಿದ್ದು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ದೆಹಲಿ ಪೊಲೀಸರು ಮತ್ತು ಯುಪಿಎಸ್‌ಸಿ ವಾದ ಮಂಡಿಸಿದವು. ನಿರೀಕ್ಷಣಾ ಜಾಮೀನು ನೀಡಿದರೆ ಆಕೆ ಪ್ರಕರಣದ ತನಿಖೆಗೆ ಸಹಕರಿಸದೇ ಹೋಗಬಹುದು ಎಂದು ದೆಹಲಿ ಪೊಲೀಸರು ತಿಳಿಸಿದರೆ, ಕಾನೂನು ಪ್ರಕ್ರಿಯೆಯನ್ನು ಆಕೆ ಉಲ್ಲಂಘಿಸಿದ್ದಾರೆ ಎಂದು ಯುಪಿಎಸ್‌ಸಿ ದೂರಿತು.

ಕೇಂದ್ರ ಲೋಕಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ಬೆಂಚ್‌ಮಾರ್ಕ್ ವಿಕಲಾಂಗ ವ್ಯಕ್ತಿಗಳ ಮೀಸಲಾತಿಯನ್ನು ವಂಚನೆಯಿಂದ ಪಡೆದಿರುವ ಆರೋಪ ಖೇಡ್ಕರ್ ಮೇಲಿದೆ.

ಯುಪಿಎಸ್‌ಸಿಯು ತನ್ನ ತನಿಖೆ ವೇಳೆ, ಖೇಡ್ಕರ್ ತನ್ನ ಹೆಸರು, ತನ್ನ ತಂದೆ, ತಾಯಿಯ ಹೆಸರು, ತನ್ನ ಛಾಯಾಚಿತ್ರ/ಸಹಿ, ಇಮೇಲ್ ಐಡಿ, ಮೊಬೈಲ್‌ ಸಂಖ್ಯೆ ಮತ್ತು ವಿಳಾಸವನ್ನು ಬದಲಿಸುವ ಮೂಲಕ ತನ್ನ ಗುರುತು ಮರೆಮಾಚಿದ್ದು, ಪರೀಕ್ಷಾ ನಿಯಮಗಳ ಅಡಿಯಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಲು ಅನುಮತಿಸುವ ಮಿತಿಯನ್ನು ಮೀರಿ ಮೋಸದಿಂದ ಹೆಚ್ಚುವರಿ ಪ್ರಯತ್ನಗಳನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿರುವುದಾಗಿ ತಿಳಿಸಿದೆ.