ನ್ಯಾಯಾಲಯದ ಕಾರ್ಯಚಟುವಟಿಕೆಗೆ ತೊಂದರೆಯಾಗುವುದರಿಂದ ಮುಕ್ತ ನ್ಯಾಯಾಲಯದಲ್ಲಿ ತಮ್ಮ ತಲೆಗೂದಲನ್ನು ಪದೇಪದೇ ಸರಿಪಡಿಸಿಕೊಳ್ಳದಿರಿ ಎಂಬ ವಿಲಕ್ಷಣ ಪ್ರಕಟಣೆಯೊಂದನ್ನು ಅಕ್ಟೋಬರ್ 20ರಂದು ಪುಣೆ ಜಿಲ್ಲಾ ನ್ಯಾಯಾಲಯ ಹೊರಡಿಸಿತ್ತು.
ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಶನಿವಾರ ವಿವಾದಾತ್ಮಕ ಪ್ರಕಟಣೆಯನ್ನು ಹಿಂಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
“ಮಹಿಳಾ ವಕೀಲರು ತೆರೆದ ನ್ಯಾಯಾಲಯದಲ್ಲಿ ತಮ್ಮ ತಲೆಗೂದಲು ಸರಿಪಡಿಸಿಕೊಳ್ಳುತ್ತಿರುವುದು ಪದೇ ಪದೇ ಗಮನಕ್ಕೆ ಬಂದಿದ್ದು ಇದು ನ್ಯಾಯಾಲಯದ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುತ್ತಿದೆ. ಆದ್ದರಿಂದ ಹಾಗೆ ಮಾಡದಿರಲು ಮಹಿಳಾ ವಕೀಲರಿಗೆ ಈ ಮೂಲಕ ಸೂಚಿಸಲಾಗಿದೆ” ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿತ್ತು.
ಪ್ರಕಟಣೆ ಕುರಿತು ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ “ವಾವ್, ಇಲ್ಲಿ ನೋಡಿ, ಮಹಿಳಾ ವಕೀಲರಿಂದ ಯಾರು ಮತ್ತು ಏಕೆ ವಿಚಲಿತರಾಗಿದ್ದಾರೆ ಎಂದು!” ಎಂಬುದಾಗಿ ಟ್ವೀಟ್ ಮಾಡಿ, ನೋಟಿಸ್‌ನ ಫೋಟೊವನ್ನು ಲಗತ್ತಿಸಿದ್ದರು.