ಹಿಂದುತ್ವವಾದಿ ನಾಯಕ ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪುಣೆಯ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಿದ್ದ ರಾಹುಲ್ ಅವರಿಗೆ ನ್ಯಾಯಾಧೀಶ ಅಮೋಲ್ ಶಿಂಧೆ ಅವರು ₹25,000 ಬಾಂಡ್ ನೀಡುವಂತೆ ಸೂಚಿಸಿ ಅರ್ಜಿ ಪುರಸ್ಕರಿಸಿದರು ಎಂದು ರಾಹುಲ್ ಪರ ವಕೀಲ ಮಿಲಿಂದ್ ಪವಾರ್ ಹೇಳಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮೋಹನ್ ಜೋಶಿ ಅವರು ರಾಹುಲ್ ಜಾಮೀನಿಗೆ ಭದ್ರತೆ ಒದಗಿಸಿದ್ದು ಮುಂದಿನ ವಿಚಾರಣೆಗಳಿಗೆ ಹಾಜರಾಗದಂತೆ ರಾಹುಲ್ ಅವರಿಗೆ ನ್ಯಾಯಾಲಯ ಶಾಶ್ವತ ವಿನಾಯಿತಿ ನೀಡಿದೆ ಎಂದು ಪವಾರ್ ವಿವರಿಸಿದ್ದಾರೆ.
ಲಂಡನ್‌ನಲ್ಲಿ ಮಾರ್ಚ್ 2023ರಲ್ಲಿ ರಾಹುಲ್ ಮಾಡಿದ ಭಾಷಣ ಆಧರಿಸಿ ಸಾವರ್ಕರ್ ಅವರ ಮೊಮ್ಮಗ ದೂರು ನೀಡಿದ್ದರು. ವಿ ಡಿ ಸಾವರ್ಕರ್ ಮತ್ತವರ ಗುಂಪು ಮುಸ್ಲಿಮರನ್ನು ಥಳಿಸಿದ್ದಾಗಿಯೂ ಅದರಿಂದ ಅವರಿಗೆ ಸಂತೋಷವಾಗಿದ್ದಾಗಿಯೂ ಸಾವರ್ಕರ್ ಬರೆದುಕೊಂಡಿದ್ದಾರೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಹೇಳಿಕೆಗಳನ್ನು ನಿರಾಕರಿಸಿದ್ದ ಸಾತ್ಯಕಿ ಅವರು ರಾಹುಲ್ ಅವರ ಟೀಕೆಗಳು ಮಾನಹಾನಿಕರ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 500ರ ಅಡಿಯಲ್ಲಿ ರಾಹುಲ್ ಅವರಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕು. ಅಲ್ಲದೆ ಸಿಆರ್‌ಪಿಸಿ ಸೆಕ್ಷನ್ 357ರ ಅಡಿಯಲ್ಲಿ ತಮಗೆ ಗರಿಷ್ಠ ಮಾನನಷ್ಟ ಪರಿಹಾರ ದೊರಕಿಸಿಕೊಡಬೇಕು ಎಂದು ಅವರು ಕೋರಿದ್ದರು