ಕಳೆದ ವರ್ಷ ಮಹಾರಾಷ್ಟ್ರದಲ್ಲಿ ನಡೆದ 'ಭಾರತ್ ಜೋಡೋ' ರ‍್ಯಾಲಿ ವೇಳೆ ಹಿಂದೂ ಮಹಾಸಭಾ ಮುಖಂಡ ವಿ ಡಿ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ದಾಖಲಾದ ದೂರಿನ ಬಗ್ಗೆ ಉತ್ತರ ಪ್ರದೇಶದ ಲಖನೌ ಸೆಷನ್ಸ್ ನ್ಯಾಯಾಲಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.
ವಕೀಲ ನೃಪೇಂದ್ರ ಪಾಂಡೆ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಗೆ ಪ್ರತಿಕ್ರಿಯೆಯಾಗಿ ಸೆಷನ್ಸ್ ನ್ಯಾಯಾಧೀಶ ಅಶ್ವಿನಿ ಕುಮಾರ್ ತ್ರಿಪಾಠಿ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ರಾಹುಲ್ ವಿರುದ್ಧ ಈ ಸಂಬಂಧ ಎಫ್‌ಐಆರ್ ದಾಖಲಿಸಬೇಕು ಎಂದು ಕೋರಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಪಾಂಡೆ ಎಡತಾಕಿದ್ದರು.
ಕಳೆದ ವರ್ಷ ನವೆಂಬರ್ 17 ರಂದು ರಾಹುಲ್ ಗಾಂಧಿಯವರು ನೀಡಿದ ಹೇಳಿಕೆಗಳ ಬಗ್ಗೆ ಪಾಂಡೆ ದೂರು ದಾಖಲಿಸಿದ್ದರು. ಸಾವರ್ಕರ್ ಅವರು ಬ್ರಿಟಿಷರ ಸಹವರ್ತಿ, ಅವರಿಗೆ ಬ್ರಿಟಿಷರ ಪಿಂಚಣಿ ದೊರೆತಿತ್ತು ಎಂದು ರಾಹುಲ್ ಆರೋಪಿಸಿದ್ದರು.