ಕಳೆದ ವರ್ಷ ಚಂಡೀಗಢದಲ್ಲಿ ಸಂಚಾರ ಪೊಲೀಸರು ತಡೆದಾಗ ತಾನು ನ್ಯಾಯಾಧೀಶ ಎಂದು ಬಿಂಬಿಸಿಕೊಂಡಿದ್ದ ವಕೀಲನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆ ರದ್ದತಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರಾಕರಿಸಿದೆ [ಪ್ರಕಾಶ್ ಸಿಂಗ್ ಮಾರ್ವಾ ಮತ್ತು ಚಂಡೀಗಢ ಕೇಂದ್ರಾಡಳಿತ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ]̤
ಆರೋಪಿ ಪ್ರಕಾಶ್ ಸಿಂಗ್ ಮಾರ್ವಾ ವಿರುದ್ಧ ತಾನು ನ್ಯಾಯಾಂಗ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಂದು ಬಿಂಬಿಸಿಕೊಳ್ಳುವ ಮೂಲಕ ಪೊಲೀಸ್ ಅಧಿಕಾರಿಗಳನ್ನು ಬೆದರಿಸಲು ಪ್ರಯತ್ನಿಸಿದ್ದಾನೆ ಎಂಬ ನಿರ್ದಿಷ್ಟ ಆರೋಪಗಳಿವೆ ಎಂದು ನ್ಯಾಯಮೂರ್ತಿ ಸೂರ್ಯ ಪ್ರತಾಪ್ ಸಿಂಗ್ ತಿಳಿಸಿದರು.
ಪೊಲೀಸರು ಚಾಲನಾ ಪರವಾನಗಿಗಾಗಿ ಒತ್ತಾಯಿಸುತ್ತಲೇ ಇದ್ದಾಗ, ವಕೀಲ ಸ್ಥಳದಿಂದ ಕಾರನ್ನು ಚಲಾಯಿಸಲು ಮುಂದಾದ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳ "ದುಷ್ಕೃತ್ಯಗಳ" ವಿರುದ್ಧ ದೂರು ನೀಡಿದ್ದರಿಂದ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂಬ ಮಾರ್ವಾ ಅವರ ವಾದವನ್ನು ನ್ಯಾಯಾಲಯ ಒಪ್ಪಲಿಲ್ಲ.
ಈ ಸಂಗತಿಯನ್ನು ನಿರ್ಲಕ್ಷಿಸುವಂತಿಲ್ಲ, ಅವರು ತಮ್ಮ ಕಾರನ್ನು ಚಾಲನೆ ಮಾಡುವಾಗ ಸ್ಥಳದಲ್ಲೇ ಇದ್ದರು ಎಂಬುದು ಒಪ್ಪಿತ ಸತ್ಯ. ಆದ್ದರಿಂದ, ವಿಚಾರಣೆಯಲ್ಲಿ ನಿರ್ಧರಿಸಬೇಕಾದ ವಿಷಯವೆಂದರೆ ಪ್ರಾಸಿಕ್ಯೂಷನ್ ವಾದಿಸಿದ್ದು ನಿಜವೇ ಅಥವಾ ಅರ್ಜಿದಾರರ ವಾದ ನಿಜವೇ ಎಂಬುದಾಗಿದೆ ಎಂದು ಪೀಠ ಹೇಳಿದೆ.
ಮೇ 2024 ರಲ್ಲಿ, ಸ್ಕಾರ್ಪಿಯೋ ಚಲಾಯಿಸುತ್ತಿದ್ದ ಮಾರ್ವಾ ಅವರ ಕಾರಿನ ನಂಬರ್ ಪ್ಲೇಟ್ ಸರಿಯಾಗಿ ಗೋಚರಿಸದ ಕಾರಣ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ASI) ಮತ್ತು ಕಾನ್‌ಸ್ಟೆಬಲ್ ಅವರನ್ನು ತಡೆದರು. ನಂಬರ್ ಪ್ಲೇಟಿನ ಒಂದು ಭಾಗವನ್ನು ಬಟ್ಟೆಯಿಂದ ಮುಚ್ಚಿರುವುದು ಕಂಡುಬಂದಿತ್ತು. ಅಲ್ಲದೆ ಮಾರ್ವಾ ಚಾಲನಾ ಪರವಾನಗಿಯನ್ನು ತೋರಿಸರಲಿಲ್ಲ.
ಅವರು ತಮ್ಮನ್ನು ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ 'ಪ್ರಕಾಶ್' ಎಂದು ಪರಿಚಯಿಸಿಕೊಂಡರು ಮತ್ತು ಅವರು ಮ್ಯಾಜಿಸ್ಟ್ರೇಟ್ ಆಗಿದ್ದಾರೆಯೇ ಎಂಬ ಬಗ್ಗೆ ಸ್ಪಷ್ಟೀಕರಣವನ್ನು ಕೇಳಿದಾಗಲೂ, ಅವರು ಸಕಾರಾತ್ಮಕವಾಗಿ ತಲೆಯಾಡಿಸಿದರು ಎಂದು ಹೇಳಲಾಗಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಾರ್ವಾ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 186 (ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ), ಸೆಕ್ಷನ್ 170 (ಸರ್ಕಾರಿ ಅಧಿಕಾರಿಯಂತೆ ಸೋಗು) ಮತ್ತು 419 (ಸೋಗು ಹಾಕಿ ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.