

ಪುಣೆಗೆ ಚಿನ್ನದ ನಾಣ್ಯಗಳನ್ನು ಆಮದು ಮಾಡಿಕೊಳ್ಳುವಾಗ ಸ್ಥಳೀಯ ಪಾಲಿಕೆಗೆ ತೆರಿಗೆ (ಆಕ್ಟ್ರಾಯ್ ತೆರಿಗೆ) ಪಾವತಿಸದೆ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕಿನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ಚಂದಾ ಕೊಚ್ಚರ್ ಸೇರಿದಂತೆ ಹಿರಿಯ ಅಧಿಕಾರಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಬಾಂಬೆ ಹೈಕೋರ್ಟ್ ಭಾಗಶಃ ರದ್ದುಗೊಳಿಸಿದೆ [ಐಸಿಐಸಿಐ ಬ್ಯಾಂಕ್ ಮತ್ತಿತರರು ಹಾಗೂ ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಆದರೆ ಬ್ಯಾಂಕಿನ ವಿರುದ್ಧದ ಮೊಕದ್ದಮೆ ಮುಂದುವರೆಯಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಚಂದಾ ಕೊಚ್ದಾರ್, ಮಾಜಿ ಉಪ ವ್ಯವಸ್ಥಾಪಕ ನಿರ್ದೇಶಕರಾದ ನಚಿಕೇತ್ ಮೋರ್ ಕಾನೂನು ವಿಭಾಗದ ಸದಸ್ಯರು ಮತ್ತು ಪುಣೆ ಶಾಖೆಯ ವ್ಯವಸ್ಥಾಪಕರು ಸೇರಿದಂತೆ ಐವರು ವೈಯಕ್ತಿಕ ಅರ್ಜಿದಾರರ ವಿರುದ್ಧ ಪುಣೆ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣವನ್ನು ನ್ಯಾಯಮೂರ್ತಿ ನೀಲಾ ಗೋಖಲೆ ಅವರು ಡಿಸೆಂಬರ್ 8ರಂದು ರದ್ದುಗೊಳಿಸಿದರು.
2006ರ ಏಪ್ರಿಲ್ 1ರಿಂದ 2009ರ ಆಗಸ್ಟ್ 31ರವರೆಗೆ ಪುಣೆ ನಗರಕ್ಕೆ ತಂದ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಪಾವತಿಸಬೇಕಿದ್ದ ಸುಮಾರು ₹1.27 ಕೋಟಿ ಮೊತ್ತದ ಪಾಲಿಕೆ ತೆರಿಗೆ ತಪ್ಪಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 1949ರ ಬಾಂಬೆ ಪ್ರಾಂತೀಯ ಮಹಾನಗರ ಪಾಲಿಕೆಗಳ ಕಾಯಿದೆ ಸೆಕ್ಷನ್ 398 ಮತ್ತು 401ರ ಅನ್ವಯ ಪುಣೆ ಮಹಾನಗರ ಪಾಲಿಕೆ ದೂರು ದಾಖಲಿಸಿತ್ತು.
ಈ ಹಿನ್ನೆಲೆಯಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ನವೆಂಬರ್ 20, 2009 ರಂದು ಬ್ಯಾಂಕ್ ಮತ್ತು ಅದರ ಅಧಿಕಾರಿಗಳಿಗೆ ಸಮನ್ಸ್ ಜಾರಿ ಮಾಡಿತ್ತು.
ಆದರೆ ವೈಯಕ್ತಿಕ ಅರ್ಜಿದಾರರ ವಿರುದ್ಧ ನಿರ್ದಿಷ್ಟ ಆರೋಪಗಳಿಲ್ಲದ ಕಾರಣ ತಮ್ಮನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂಬ ಆಧಾರದ ಮೇಲೆ ಪ್ರಕರಣ ರದ್ದುಗೊಳಿಸುವಂತೆ ಅರ್ಜಿದಾರರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಸಾಮಾನ್ಯ ಮತ್ತು ಅನಿರ್ದಿಷ್ಟ ಆರೋಪಗಳು ಇರುವುದರಿಂದ ಮತ್ತು ಸಿಇಒ ನಿರ್ದೇಶಕರು, ಕಾನೂನು ಅಧಿಕಾರಿ ಅಥವಾ ಶಾಖಾ ನಿರ್ವಾಹಕರ ಪಾತ್ರವನ್ನು ಸ್ಪಷ್ಟವಾಗಿ ವಿವರಿಸಲಾಗಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯ ಅವರ ವಿರುದ್ಧದ ಪ್ರಕರಣ ಮುಕ್ತಾಯಗೊಳಿಸಿತು.
ವಿವಿಧ ತೀರ್ಪುಗಳನ್ನು ಅವಲಂಬಿಸಿದ ಪೀಠ ಕೇವಲ ನಿರ್ದೇಶಕ/ಅಧಿಕಾರಿ ಎಂಬ ಹುದ್ದೆ ಹೊಂದಿರುವುದರಿಂದ ಜವಾಬ್ದಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಘಟನೆ ನಡೆದ ಅವಧಿಯಲ್ಲಿ ಕಂಪೆನಿಯ ವ್ಯವಹಾರ ನಿರ್ವಹಣೆಗೆ ಅಧಿಕಾರಿಗಳು ಹೇಗೆ ಜವಾಬ್ದಾರರು ಎಂಬುದನ್ನು ದೂರು ಸ್ಪಷ್ವವಾಗಿ ಹೇಳಬೇಕಿತ್ತು ಎಂದು ನ್ಯಾಯಾಲಯ ಹೇಳಿತು.
ಅಂತೆಯೇ ವೈಯಕ್ತಿಕ ಅರ್ಜಿದಾರರ ವಿರುದ್ಧ ಯಾವುದೇ ವಿಶೇಷ ವಿವರಗಳಿಲ್ಲ ಎಂದ ನ್ಯಾ. ನೀಲಾ, ಅರ್ಜಿದಾರರ ವಿರುದ್ಧ ತನಿಖೆ ಮುಂದುವರೆಸುವಂತಿಲ್ಲ ಎಂದರು. ಬ್ಯಾಂಕ್ ವಿರುದ್ಧ ಮೊಕದ್ದಮೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು.