Punjab and Haryana High Court, Chandigarh.  
ಸುದ್ದಿಗಳು

ನಕಲಿ ವರ್ಚುವಲ್ ಕಲಾಪ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡದ ಪಂಜಾಬ್ ಹೈಕೋರ್ಟ್

ಆರೋಪಿ ವಾಟ್ಸಾಪ್ ಮತ್ತು ಸ್ಕೈಪ್ ಮೂಲಕ ನಿವೃತ್ತ ಸಿಜೆಐಯೊಬ್ಬರ ಸೋಗಿನಲ್ಲಿ ಉದ್ಯಮಿಯೊಬ್ಬರನ್ನು ʼಡಿಜಿಟಲ್ ಅರೆಸ್ಟ್ʼ ಮಾಡಿ ₹7 ಕೋಟಿ ವಂಚಿಸಿದ್ದ.

Bar & Bench

ಸಿಬಿಐ ಅಧಿಕಾರಿಗಳಂತೆ ನಟಿಸಿ, ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರ ಸೋಗಿನಲ್ಲಿ ನಕಲಿ ವರ್ಚುವಲ್‌ ನ್ಯಾಯಾಲಯ ಸೃಷ್ಟಿಸಿದ ಆರೋಪಿಯೊಬ್ಬನಿಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ಈಚೆಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ [ಅತನು ಚೌಧರಿ ಮತ್ತು ಪಂಜಾಬ್‌ ಸರ್ಕಾರ ನಡುವಣ ಪ್ರಕರಣ].

ಸೈಬರ್ ವಂಚನೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ವಹಿಸುತ್ತಿರುವ ದತ್ತಾಂಶದ ಪ್ರಕಾರ, 2020 ಮತ್ತು 2024 ರ ನಡುವೆ 5,82,000 ಕ್ಕೂ ಹೆಚ್ಚು ಸೈಬರ್ ವಂಚನೆ ಪ್ರಕರಣಗಳಲ್ಲಿ ₹3,207 ಕೋಟಿ ನಷ್ಟವಾಗಿದೆ ಎಂದು ನ್ಯಾಯಮೂರ್ತಿ ಮಹಾಬೀರ್ ಸಿಂಗ್ ಸಿಂಧು ಹೇಳಿದರು.

ವರ್ಧಮಾನ್ ಗ್ರೂಪ್‌ನ ಅಧ್ಯಕ್ಷ ಪಾಲ್ ಓಸ್ವಾಲ್ ನೀಡಿದ ದೂರಿನ ಮೇರೆಗೆ ಲುಧಿಯಾನ ಪೊಲೀಸರು ದಾಖಲಿಸಿರುವ ಪ್ರಕರಣದಲ್ಲಿ ಆರೋಪಿ ಅತನು ಚೌಧರಿ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಓಸ್ವಾಲ್ ಅವರಿಗೆ ಆರೋಪಿ ವಾಟ್ಸಾಪ್ ಮತ್ತು ಸ್ಕೈಪ್ ಮೂಲಕ ʼಡಿಜಿಟಲ್ ಅರೆಸ್ಟ್ʼ ಮಾಡಿ ₹7 ಕೋಟಿ ವಂಚಿಸಿದ್ದ.

ಅಪರಾಧವನ್ನು ಎಸಗಲು ಅರ್ಜಿದಾರ (ಆರೋಪಿ) ಹಾಗೂ ಆತನ ಸಹಚರರು ಅಳವಡಿಸಿಕೊಂಡಿರುವ ಅಪರಾಧ ಕೃತ್ಯದ ಸ್ವರೂಪದ ಗಂಭೀರ ತನಿಖೆಯ ಅಗತ್ಯವಿರುವುದರಿಂದ ಹಾಗೂ ಇದಕ್ಕಾಗಿ ಪೊಲೀಸ್‌ ವಶದಲ್ಲಿ ವಿಚಾರಣೆಯು ಅತ್ಯಂತ ಅವಶ್ಯಕವಿರುವುದರಿಂದ ಅರ್ಜಿದಾರರಿಗೆ ಜಾಮೀನು ನಿರಾಕರಿಸಿರುವುದಾಗಿ ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.

ಈ ಮಧ್ಯೆ ಫೆಬ್ರವರಿ 10ರಂದು ಲುಧಿಯಾನದ ವಿಚಾರಣಾ ನ್ಯಾಯಾಲಯ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಅಲೋಕ್ ರಂಗಿ ಮತ್ತು ಗೋಲಂ ಮುರ್ತಾಜಾ ಅವರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು.