Dr. Rajendra Prasad, Punjab and Haryana High Court  
ಸುದ್ದಿಗಳು

ಜನಪ್ರತಿನಿಧಿಗಳಾಗಲು ಶೈಕ್ಷಣಿಕ ಅರ್ಹತೆಯ ನಿಯಮ ಇಲ್ಲದಿರುವ ಬಗ್ಗೆ ಪಂಜಾಬ್ ಹೈಕೋರ್ಟ್ ಬೇಸರ

ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ರಾವ್ ನರಬೀರ್ ಸಿಂಗ್ ಅವರ ವಿರುದ್ಧದ ಕ್ರಿಮಿನಲ್ ದೂರು ವಜಾಗೊಳಿಸುವುದನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ನ್ಯಾಯಾಲಯ ಈ ವಿಚಾರ ತಿಳಿಸಿದೆ.

Bar & Bench

ದೇಶದ ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ್‌ ಅವರು ವಿಧಾನಸಭೆ ಸದಸ್ಯರು ಮತ್ತು ಸಂಸತ್‌ ಸದಸ್ಯರಿಗೆ ಕನಿಷ್ಠ ವಿದ್ಯಾರ್ಹತೆ ಕಡ್ಡಾಯಗೊಳಿಸದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಆದರೆ ಈಗಲೂ ಅದಕ್ಕೆ ಉತ್ತರಕಂಡುಕೊಳ್ಳುವ ಯತ್ನ ನಡೆದಿಲ್ಲ ಎಂದು ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.  [ಹರಿಂದರ್ ಧಿಂಗ್ರಾ ಮತ್ತು ನರ್ಬೀರ್ ಸಿಂಗ್ ನಡುವಣ ಪ್ರಕರಣ] .

1949ರ ನವೆಂಬರ್ 26 ರಂದು ಸಂವಿಧಾನ ಸಭೆಯಲ್ಲಿ ಡಾ. ರಾಜೇಂದ್ರ ಪ್ರಸಾದ್‌ ಮಾಡಿದ್ದ ಭಾಷಣವನ್ನು ನ್ಯಾ. ಮಹಾಬೀರ್ ಸಿಂಗ್ ಸಿಂಧು ಅವರು ಉಲ್ಲೇಖಿಸಿದರು. ಕಾಯಿದೆ- ಕಾನೂನುಗಳನ್ನು ನಿರ್ವಹಿಸುವವರ ಅಥವಾ ನಿರ್ವಹಿಸಲು ಸಹಾಯ ಮಾಡುವವರಿಗೆ ಹೆಚ್ಚಿನ ವಿದ್ಯಾರ್ಹತೆ ಪಡೆಯುವಂತೆ ಒತ್ತಾಯಿಸುವುದು ಅಸಂಗತದ ವಿಚಾರವಾಗುತ್ತದೆ ಮತ್ತು ಆ ವಿದ್ಯಾರ್ಹತೆ ಅವರಿಗೆ ಇಲ್ಲ ಎಂದು ಭಾಷಣದಲ್ಲಿ ತಿಳಿಸಲಾಗಿತ್ತು.

ʼಸುಮಾರು 75 ವರ್ಷ ಕಳೆದಿದ್ದರೂ ಈವರೆಗೂ ಆ ಮೊದಲ ವಿಷಾದಕ್ಕೆ ಉತ್ತರ ಕಂಡುಕೊಳ್ಳುವುದು ಬಾಕಿ ಉಳಿದಿದೆ.  ಈಗಲೂ ಸಂಪುಟ ದರ್ಜೆ ಸಚಿವರಾಗಲು, ಅಥವಾ ಸಂಸದ ಇಲ್ಲವೇ ವಿಧಾನಸಭೆ ಸದಸ್ಯರಾಗಲು ಯಾವುದೇ ಶೈಕ್ಷಣಿಕ ಅರ್ಹತೆ ಕಂಡುಬರುತ್ತಿಲ್ಲ' ಎಂದು ನ್ಯಾಯಾಲಯ ನುಡಿದಿದೆ.

ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ (ಎಂಎಲ್ಎ) ರಾವ್ ನರಬೀರ್‌ ಸಿಂಗ್  ಅವರು ನಾಮಪತ್ರದಲ್ಲಿ ತಮ್ಮ ಶೈಕ್ಷಣಿಕ ಅರ್ಹತೆಯ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧದ ಕ್ರಿಮಿನಲ್ ದೂರು ವಜಾಗೊಳಿಸಿರುವುದನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಹಿಂದಿ ವಿಶ್ವವಿದ್ಯಾಲಯ ಹಿಂದಿ ಸಾಹಿತ್ಯ ಸಮ್ಮೇಳನ ಪ್ರಾಯಾದಿಂದ ಪದವಿ ಪಡೆದಿದ್ದ ನರಬೀರ್‌ ಅಲಾಹಾಬಾದ್‌ನ ಹಿಂದಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾಗಿ ಹೇಳಿಕೊಂಡಿದ್ದರು.  ಆದರೆ ಅಂತಹ ಯಾವುದೇ ವಿವಿ ಅಸ್ತಿತ್ವದಲ್ಲಿಲ್ಲ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ ಆರ್‌ಟಿಐ ಕಾಯಿದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದೆ ಎಂದು ಅರ್ಜಿದಾರ ದಿಂಗ್ರಾ ನ್ಯಾಯಾಲಯಕ್ಕೆ ತಿಳಿಸಿದ್ದರು.

ಆದರೆ ನಾಮಪತ್ರ ಸಲ್ಲಿಸುವ ವೇಳೆಗೆ ಅವರು ಪದವಿ ಪಡೆದಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳಿವೆ. ಸಿಂಗ್‌ ಅವರು ಪದವಿ ಪೂರ್ಣಗೊಳಿಸಿಲ್ಲ ಅಥವಾ ಅವರು ಪಡೆದ ಪದವಿ ನಕಲಿ ಇಲ್ಲವೇ ಕಪೋಲಕಲ್ಪಿತ ಎಂದೇನೂ ದೂರುದಾರರು ಆರೋಪಿಸಿಲ್ಲ ಎಂದ ನ್ಯಾಯಾಲಯ ಅವರು ಪದವಿ ಪಡೆದ ವರ್ಷದ ಬಗ್ಗೆ ತಪ್ಪು ಮಾಹಿತಿ ನೀಡಿರುವುದಕ್ಕೆ ತಪ್ಪಿತಸ್ಥರು ಎಂದು ಕರೆಯಲಾಗದು. ಆ ತಪ್ಪು ಅಕ್ಷರ ದೋಷದಿಂದ ಆಗಿರಬಹುದು ಎಂದಿತು. ಆ ಮೂಲಕ ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿಯಿತು.