Punjab and Haryana High Court, Chandigarh. 
ಸುದ್ದಿಗಳು

ಘೋಷಿತ ಅಪರಾಧಿಯನ್ನು ಬಂಧಿಸದ ಪೊಲೀಸ್ ಅಧಿಕಾರಿಗಳು: ವೇತನ ಮುಟ್ಟುಗೋಲಿಗೆ ಆದೇಶಿಸಿದ ಪಂಜಾಬ್ ಹೈಕೋರ್ಟ್

ನ್ಯಾಯಾಲಯ ಪದೇ ಪದೇ ಆದೇಶ ನೀಡುತ್ತಿದದರೂ ಅವುಗಳನ್ನು ಪಾಲಿಸುವ ಮಹತ್ವದ ಯತ್ನ ನಡೆದಿಲ್ಲ ಇದು ಪೊಲೀಸರ ಸಾಮರ್ಥ್ಯದ ಕೊರತೆಯನ್ನು ತೋರಿಸುತ್ತದೆ ಎಂದು ಟೀಕಿಸಿದೆ ಪೀಠ.

Bar & Bench

ಘೋಷಿತ ಅಪರಾಧಿಯನ್ನು ಪತ್ತೆ ಹಚ್ಚಿ ಬಂಧಿಸಲು ವಿಫಲರಾದ ಪೊಲೀಸ್‌ ಠಾಣಾಧಿಕಾರಿ ಮತ್ತು ಡಿಎಸ್‌ಪಿಯ ಸಂಬಳ ಮುಟ್ಟುಗೋಲು ಹಾಕಿಕೊಳ್ಳುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ.

ನ್ಯಾಯಾಲಯ ಪದೇ ಪದೇ ಆದೇಶ ನೀಡುತ್ತಿದದರೂ ಅವುಗಳನ್ನು ಪಾಲಿಸುವ ಮಹತ್ವದ ಯತ್ನ ನಡೆದಿಲ್ಲ ಇದು ಪೊಲೀಸರ ಸಾಮರ್ಥ್ಯದ ಕೊರತೆಯನ್ನು ತೋರಿಸುತ್ತದೆ ಎಂದು ನ್ಯಾಯಮೂರ್ತಿ ಹರ್‌ಪ್ರೀತ್ ಸಿಂಗ್ ಬ್ರಾರ್ ಅವರು ಟೀಕಿಸಿದ್ದಾರೆ.

ಪೊಲೀಸರು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿರುವುದರಿಂದ ಅವರ ವೇತನ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸುವುದನ್ನು ಬಿಟ್ಟರೆ ನ್ಯಾಯಾಲಯಕ್ಕೆ ಬೇರೆ ದಾರಿಯಿಲ್ಲ ಎಂದು ಅವರು ವಿವರಿಸಿದ್ದಾರೆ.

 ಈ ಲೋಪಕ್ಕೆ ಕಾರಣ ಒದಗಿಸುವುದಕ್ಕಾಗಿ ಮುಂದಿನ ವಿಚಾರಣೆ ವೇಳೆಗೆ ಉಪ ಇನ್‌ಸ್ಪೆಕ್ಟರ್‌ ಜನರಲ್‌ ಮತ್ತು ಫಿರೋಜ್‌ ಪುರ ವಲಯದ ಹಿರಿಯ ಪೊಲೀಸ್‌ ಅಧೀಕ್ಷಕರು ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಪೀಠ ಆದೇಶಿಸಿದೆ.

ಲೈಂಗಿಕ ದೌರ್ಜನ್ಯ ಮತ್ತು ಕ್ರಿಮಿನಲ್ ಬೆದರಿಕೆಯ ಆರೋಪ ಹೊತ್ತಿರುವ ವ್ಯಕ್ತಿಯನ್ನು ಬಂಧಿಸುವಲ್ಲಿ ಪಂಜಾಬ್ ಪೊಲೀಸರ ವೈಫಲ್ಯ  ಉಲ್ಲೇಖಿಸಿ ರಕ್ಷಣೆ ಕೋರಿದ ಮಹಿಳೆ ಸಲ್ಲಿಸಿದ್ದ ಅರ್ಜಿ ಸೇರಿದಂತೆ ಎರಡು ಅರ್ಜಿಗಳಿಗೆ ಸಂಬಂಧಿಸಿದಂತೆ ಈ ಆದೇಶ ನೀಡಲಾಗಿದೆ.

ಸುಪ್ರೀಂ ಕೋರ್ಟ್‌ ಕೂಡ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದ್ದು ಮಾರ್ಚ್ 2023ರಲ್ಲಿ ಘೋಷಿತ ಅಪರಾಧಿ ಎಂದು ಕರೆಸಿಕೊಂಡ ನಂತರವೂ ಆರೋಪಿ ಮುಕ್ತವಾಗಿಯೇ ಉಳಿದಿದ್ದ. ಅಂತಿಮವಾಗಿ ವಿದೇಶಕ್ಕೂ ಪರಾರಿಯಾದ. ಇಷ್ಟೆಲ್ಲಾ ಆದದ್ದು ಪೊಲೀಸ್‌ ಅಧಿಕಾರಿಗಳ ನಿರ್ಲಕ್ಷ್ಯದಿಂದ ಎಂದು ದೂರುದಾರರು ಅಳಲು ತೋಡಿಕೊಂಡಿದ್ದರು.

ಘೋಷಿತ ಅಪರಾಧಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದನ್ನು ಕಡ್ಡಾಯಗೊಳಿಸುವ ಸಿಆರ್‌ಪಿಸಿ ಸೆಕ್ಷನ್‌ 83ರ ಜಾರಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಪೊಲೀಸರು ಆರೋಪಿಯನ್ನು ರಕ್ಷಿಸುತ್ತಿರುವುದಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದರು.  

ಸಂಪೂರ್ಣ ಅಸಮರ್ಥತೆಗಾಗಿ ಪೊಲೀಸರನ್ನು ಖಂಡಿಸಿದ ನ್ಯಾಯಾಲಯ ಕಿರಿಯ ಅಧಿಕಾರಿಗಳನ್ನು ಬಲಿಪಶು ಮಾಡಿ ಹಿರಿಯ ಅಧಿಕಾರಿಗಳೇ ಆರೋಪಿಯನ್ನು ರಕ್ಷಿಸುತ್ತಿರುವಂತೆ ತೋರುತ್ತಿದೆ. ಬಂಧನಕ್ಕೆ ಕೈಗೊಂಡ ಎಲ್ಲಾ ಕ್ರಮಗಳು ಕಣ್ಣೊರೆಸುವ ರೀತಿಯಲ್ಲಿವೆ ಎಂದು ಡಿಸೆಂಬರ್ 9ರಂದು ನೀಡಿದ ಆದೇಶದಲ್ಲಿ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಡಿಸೆಂಬರ್ 16ರಂದು ನಡೆಯಲಿದೆ.