Punjab and Haryana High Court, Chandigarh. 
ಸುದ್ದಿಗಳು

ಕಳ್ಳ ಎಂಬ ಫಲಕ ಹಾಕಿ ಶಂಕಿತರ ಮೆರವಣಿಗೆ ಮಾಡಿದ್ದ ವ್ಯಕ್ತಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಪಂಜಾಬ್ ಹೈಕೋರ್ಟ್

ಮುಖಕ್ಕೆ ಮಸಿ ಬಳಿಯುವುದು, ಶಂಕಿತರಿಗೆ ಫಲಕ ಹಾಕಿ ಮೆರವಣಿಗೆ ಮಾಡಿಸುವುದು, ಅದರ ವೀಡಿಯೊ ವೈರಲ್ ಮಾಡುವುದು ಅಮಾನವೀಯ ಕೃತ್ಯವಾಗಿದ್ದು ಇದು ಸಂತ್ರಸ್ತರ ವರ್ಚಸ್ಸು ಮತ್ತು ಭವಿಷ್ಯವನ್ನು ಹಾಳುಮಾಡಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Bar & Bench

ಕಳ್ಳತನದ ಆರೋಪಕ್ಕೆ ಸಂಬಂಧಿಸಿದಂತೆ ತನ್ನ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಕುತ್ತಿಗೆಗೆ ʼನಾನು ಕಳ್ಳʼ ಎಂಬ ಫಲಕ ಹಾಕಿ ಸಾರ್ವಜನಿಕವಾಗಿ ಅವಮಾನಿಸಿದ ಆರೋಪ ಹೊತ್ತ ಕಾರ್ಖಾನೆ ಮಾಲೀಕನಿಗೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಈಚೆಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಕೃತ್ಯ "ತಾಲಿಬಾನ್ ಶೈಲಿಯ" ಶಿಕ್ಷೆಗೆ ಸಮ ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವುದು ಮತ್ತು ವ್ಯಕ್ತಿಗಳನ್ನು ಸಾರ್ವಜನಿಕವಾಗಿ ಅವಮಾನಿಸುವುದನ್ನು ನಾಗರಿಕ ಸಮಾಜದಲ್ಲಿ ಸಹಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ನಮಿತ್ ಕುಮಾರ್ ಹೇಳಿದರು.

ಅಪರಾಧದ ಗಂಭೀರತೆಯನ್ನು ಒತ್ತಿ ಹೇಳಿದ ನ್ಯಾಯಾಲಯ ಆರೋಪಿಯಾಗಿರುವ ಕಾರ್ಖಾನೆ ಮಾಲೀಕನ ಕೃತ್ಯ ಅಮಾನವೀಯವಾಗಿದ್ದು, ಸಂತ್ರಸ್ತರ ಸಾಮಾಜಿಕ ವ್ಯಕ್ತಿತ್ವ ಮತ್ತು ಭವಿಷ್ಯಕ್ಕೆ ಸರಿಪಡಿಸಲಾಗದಷ್ಟು ಹಾನಿ ಉಂಟುಮಾಡಿ ಅವರ ಮೇಲೆ ಶಾಶ್ವತ ಪರಿಣಾಮ ಬೀರಬಹುದು ಎಂದಿತು.

 “ಅರ್ಜಿದಾರ ಸೇರಿದಂತೆ ಆರೋಪಿಗಳ ಕೃತ್ಯ ಯಾವುದೇ ರೀತಿಯಲ್ಲೂ ಒಪ್ಪುವಂತಹ ಮಾನವ ಕೃತ್ಯವಾಗಿರದೆ ಕಾನೂನು ಕೈಗೆತ್ತಿಕೊಳ್ಳುವ ಮೂಲಕ ವಿಧಿಸುವ ತಾಲಿಬಾನ್‌ ಶೈಲಿಯ ಶಿಕ್ಷೆಯಾಗಿತ್ತು. ಸಂತ್ರಸ್ತರಲ್ಲಿ ಕೆಲವರು ಬಾಲಕಿಯರು ಮತ್ತು ವೃದ್ಧರೂ ಇದ್ದು ಅಂತಹ ಕೃತ್ಯ ಸಾಮಾಜಿಕ ಪ್ರತಿಷ್ಠೆ ಮೇಲೆ ಪರಿಣಾಮ ಬೀರಿ ಅವರನ್ನು ಕಳಂಕಿತಗೊಳಿಸಬಹುದು. ಕೃತ್ಯ ಒಟ್ಟಾರೆಯಾಗಿ ಸಮಾಜದ ಎದುರು ಅವರ ವರ್ಚಸ್ಸು ಮತ್ತು ಪ್ರತಿಷ್ಠೆಯನ್ನು ಕುಗ್ಗಿಸುವ ಮೂಲಕ ಅವರ ಭವಿಷ್ಯವನ್ನು ಹಾಳುಮಾಡಬಹುದು ಇದು ಕಳವಳಕಾರಿಯಾದ ಗಂಭೀರ ವಿಚಾರ” ಎಂಬುದಾಗಿ ನ್ಯಾಯಾಲಯ ವಿವರಿಸಿತು.

ಲುಧಿಯಾನದಲ್ಲಿ ನಡೆದ ಘಟನೆಯೊಂದರಲ್ಲಿ ಆರೋಪಿ ಮತ್ತು ಸಹ ಆರೋಪಿಗಳಾದ ಮೂವರು ಹುಡುಗಿಯರು, ಒಬ್ಬ ವೃದ್ಧ ಮಹಿಳೆ ಮತ್ತು ಒಬ್ಬ ಹುಡುಗನ ಮುಖಕ್ಕೆ ಕಪ್ಪು ಬಣ್ಣ ಬಳಿದು, "ನಾನು ಕಳ್ಳ, ನಾನು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ" ಎಂಬ ಫಲಕಗಳನ್ನು ಕುತ್ತಿಗೆಗೆ ನೇತುಹಾಕಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮೆರವಣಿಗೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿತ್ತು. ಇದು ವ್ಯಾಪಕ ಖಂಡನೆಗೆ ಕಾರಣವಾಗಿತ್ತು.

ಬಿಎನ್‌ಎಸ್ ಸೆಕ್ಷನ್‌ 127 (ತಪ್ಪಾಗಿ ಬಂಧನ), 356 (ಮಾನನಷ್ಟ), 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 75 (ಲೈಂಗಿಕ ಕಿರುಕುಳ) ಮತ್ತು 61 (2) (ಕ್ರಿಮಿನಲ್ ಪಿತೂರಿ) ಅಡಿಯ ಅಪರಾಧಗಳಿಗಾಗಿ ಎಫ್‌ಐಆರ್ ದಾಖಲಿಸಲಾಗಿತ್ತು. ನಂತರ ಆರೋಪಿಗಳು ಬಂಧನ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದರು.

ಬಾಕಿ ಇರುವ ತನಿಖೆ ಮತ್ತು 'ಸಂದೇಹದ ಲಾಭ'ದ ಆಧಾರದ ಮೇಲೆ ಮಾತ್ರ ವಿಚಾರಣಾ ನ್ಯಾಯಾಲಯ ಸಹ- ಆರೋಪಿಗಳಿಗೆ ಜಾಮೀನು ನೀಡಿದೆ. ಆರೋಪಿಯ ಮೊಬೈಲ್ ಫೋನ್ ಮತ್ತು ಕಾರ್ಖಾನೆಯ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ನಿರ್ಣಾಯಕ ಸಾಕ್ಷ್ಯಗಳನ್ನು ಮರುಪಡೆಯಲು ಕಸ್ಟಡಿ ವಿಚಾರಣೆ ಅಗತ್ಯ. ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅಥವಾ ಬೆದರಿಸುವ ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದ ನ್ಯಾಯಾಲಯ ತಿಳಿಸಿದೆ.

ಇದಲ್ಲದೆ, ಸಂತ್ರಸ್ತರಲ್ಲಿ ಒಬ್ಬರು ಅಪ್ರಾಪ್ತ ವಯಸ್ಕರಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯಿದೆಯಡಿಯಲ್ಲಿ ಅಪರಾಧ ಸೇರಿಸಲು ಕೂಡ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಈ ಹಿನ್ನೆಲೆಯಲ್ಲಿ,  ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ಆರೋಪಿಗಳು 10 ದಿನಗಳ ಒಳಗಾಗಿ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು ಎಂದಿತು. ಇದೇ ವೇಳೆ ಅವರು ನಿಯಮಿತ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡಿತು.

ಜಾಮೀನು ಅರ್ಜಿ ಸಲ್ಲಿಸಿದರೆ, ಅದನ್ನು ತ್ವರಿತವಾಗಿ ಪರಿಗಣಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದ ಹೈಕೋರ್ಟ್‌ ತನ್ನ ಆದೇಶದಲ್ಲಿನ ಯಾವುದೇ ಅವಲೋಕನಗಳನ್ನು ಪ್ರಕರಣದ ಅರ್ಹತೆಯ ಆಧಾರದಲ್ಲಿ ನೀಡಲಾದ ಅಭಿಪ್ರಾಯವಾಗಿ ಅರ್ಥೈಸಿಕೊಳ್ಳಬಾರದು ಎಂದು ಸ್ಪಷ್ಟಪಡಿಸಿದೆ.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Parvinder_Singh_vs__State_of_Punjab.pdf
Preview