ಆದಿವಾಸಿ ಯುವಕ ಮಧು ಎಂಬಾತನನ್ನು 2018ರಲ್ಲಿ ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿ ಹುಸೇನ್‌ಗೆ ಕೇರಳ ಹೈಕೋರ್ಟ್ ಬುಧವಾರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿಗಳಾದ ಪಿ ಬಿ ಸುರೇಶ್ ಕುಮಾರ್ ಮತ್ತು ಪಿ ಜಿ ಅಜಿತ್ಕುಮಾರ್ ಅವರಿದ್ದ ವಿಭಾಗೀಯ ಪೀಠ ಹುಸೇನ್ಗೆ ಈ ವರ್ಷದ ಆರಂಭದಲ್ಲಿ ವಿಶೇಷ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಿ, ಜಾಮೀನು ಮಂಜೂರು ಮಾಡಿತು.
ಮಧುಗೆ ನೀಡಿದ ಕಿರುಕುಳದಲ್ಲಿ ಆತ ಭಾಗಿಯಾಗಿಲ್ಲ ಎಂದು ಕಂಡುಕೊಂಡ ಪೀಠ ಶಿಕ್ಷೆಗೆ ತಡೆ ನೀಡುವುದು ಸೂಕ್ತ ಎಂದು ಪರಿಗಣಿಸಿತು.
“ಪ್ರಕರಣದ ಮೊದಲ ಆರೋಪಿಯ (ಹುಸೇನ್) ಪ್ರಕರಣದಲ್ಲಿ ಭಿನ್ನತೆ ಇದೆ. ಆತನ ವಿರುದ್ಧದ ಆರೋಪವೆಂದರೆ, ಮೃತನನ್ನು ಈಗಾಗಲೇ ಬಂಧನದಲ್ಲಿಟ್ಟ ನಂತರ ಆತ ಇತರ ಆಕ್ರಮಣಕಾರರೊಂದಿಗೆ ಸೇರಿಕೊಂಡ. ಅವನು ಮೃತನ ತಲೆಯನ್ನು ಗೋಡೆಗೆ ಹೊಡೆದ ಪರಿಣಾಮ ತಲೆಗೆ ಗಾಯವಾಗಿ ಅವನು ಸಾವನ್ನಪ್ಪಲು ಕಾರಣವಾಗಿ ಆತ (ಹುಸೇನ್) ತಪ್ಪಿತಸ್ಥ ಎಂದು ಕಂಡುಬಂತು. ಮೃತನಿಗೆ ಕಿರಕುಕುಳ ನೀಡದವರಲ್ಲಿ ಆತ ಇದ್ದ ಬಗ್ಗೆ ಆರೋಪ ಇಲ್ಲದಿರುವಾಗ ಆತನ ವಿಚಾರದಲ್ಲಿ ಬೇರೆ ಮಾನದಂಡಗಳನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ನ್ಯಾಯಾಲಯ ನುಡಿಯಿತು.
ಆದರೆ ಉಳಿದ ಹನ್ನೆರಡು ಅಪರಾಧಿಗಳಿಗೆ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಲು ಅಥವಾ ಅವರಿಗೆ ಜಾಮೀನು ಮಂಜೂರು ಮಾಡಲು ಪೀಠ ನಿರಾಕರಿಸಿತು.
ಉಳಿದ ಹನ್ನೆರಡು ಆರೋಪಿಗಳಿಗೆ ವಿಧಿಸಲಾದ ಶಿಕ್ಷೆಯನ್ನು ಅಮಾನತುಗೊಳಿಸಲು ನಿರಾಕರಿಸಿದ ಅಂಶವನ್ನು ಗಣನೆಗೆ ತೆಗೆದುಕೊಂಡಿರುವ ನ್ಯಾಯಾಲಯ ಮೇಲ್ಮನವಿಗಳನ್ನು ತ್ವರಿತವಾಗಿ ಆಲಿಸುವ ಮತ್ತು ವಿಲೇವಾರಿ ಮಾಡುವ ಅಗತ್ಯ ಇದೆ ಎಂದು ತಿಳಿಸಿತು. ಈ ಹಿನ್ನೆಲೆಯಲ್ಲಿ ಜನವರಿ 15, 2024ರಂದು ಪ್ರಕರಣದ ವಿಚಾರಣೆ ನಡೆಸಲು ಅದು ನಿರ್ಧರಿಸಿದೆ.
ಹಿನ್ನೆಲೆ
ಪಾಲಕ್ಕಾಡ್‌ನ ಅಟ್ಟಪ್ಪಾಡಿಯಲ್ಲಿ ಬುಡಕಟ್ಟು ಜನಾಂಗದ ಮಾನಸಿಕ ಅಸ್ವಸ್ಥ ಯುವಕ ಮಧು ಎಂಬಾತನನ್ನು ಹುಸೇನ್ ಸೇರಿದಂತೆ ಆರೋಪಿಗಳು ಕಟ್ಟಿಹಾಕಿ ಬರ್ಬರವಾಗಿ ಹೊಡೆದು ಕೊಂದಿದ್ದರು. ಕಿರಾಣಿ ಅಂಗಡಿಯಿಂದ ಅಕ್ಕಿ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಗಳು ಮಧುವನ್ನು ಸಮೀಪದ ಕಾಡಿನಿಂದ ಹಿಡಿದು ಕರೆತಂದು ಆತನ ಮೇಲೆ ಹಲ್ಲೆ ನಡೆಸಿದ್ದರು ಎಂದು ವಾದಿಸಲಾಗಿತ್ತು.
ಐಪಿಸಿ ಸೆಕ್ಷನ್ 143, 147, 148, 323, 324, 326, 294 (ಬಿ), 342, 352, 364, 367, 368, ಹಾಗೂ 302 ಸಹವಾಚನ 149 ಮತ್ತು ಎಸ್‌ಸಿ-ಎಸ್‌ಟಿ ಕಾಯಿದೆಯ (1) (ಡಿ), (ಆರ್) (ಎಸ್) ಮತ್ತು 3(2) (ವಿ) ಅಡಿ ವಿಶೇಷ ನ್ಯಾಯಾಲಯ ಅವರನ್ನು ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು.