Supreme Court, Air Pollution 
ಸುದ್ದಿಗಳು

ಕೃಷಿ ತ್ಯಾಜ್ಯ ದಹಿಸುವವರಿಗೆ ಪಂಜಾಬ್, ಹರಿಯಾಣ ದಂಡ ವಿಧಿಸುತ್ತಿಲ್ಲ ಎಂದ ಸುಪ್ರೀಂ: ಸಿಎಕ್ಯೂಎಂ ಮೌನದ ಬಗ್ಗೆ ಅತೃಪ್ತಿ

ರಾಜ್ಯ ಸರ್ಕಾರಗಳು ರೈತರಿಂದ ಹೆಸರಿಗಷ್ಟೇ ದಂಡ ವಿಧಿಸುತ್ತಿವೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ಪೀಠ ತಿಳಿಸಿತು.

Bar & Bench

ದೆಹಲಿ ಹಾಗೂ ಅದರ ಸುತ್ತಮುತ್ತಲಿನ ರಾಜ್ಯಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯ ಹಾಗೂ ವಾಯು ಗುಣಮಟ್ಟ ಕುಸಿತಕ್ಕೆ ಪ್ರಮುಖ ಕಾರಣವಾಗಿರುವ ಕೃಷಿ ತ್ಯಾಜ್ಯ ದಹಿಸುವ ರೈತರ ವಿರುದ್ಧ ದಂಡನೀಯ ಕ್ರಮ ಕೈಗೊಳ್ಳದ ಪಂಜಾಬ್‌ ಮತ್ತು ಹರಿಯಾಣ ಸರ್ಕಾರಗಳನ್ನು ಸುಪ್ರೀಂ ಕೋರ್ಟ್‌ ಗುರುವಾರ ತರಾಟೆಗೆ ತೆಗೆದುಕೊಂಡಿತು [ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ ಸಂಬಂಧಿಸಿದಂತೆ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಪ್ರಕರಣ].

ಗೋಧಿ ಮತ್ತು ಭತ್ತದಂತಹ ಧಾನ್ಯಗಳನ್ನು ಕೊಯ್ಲು ಮಾಡಿದ ನಂತರ ಹೊಲಗಳಲ್ಲಿ ಉಳಿಯುವ ಒಣಹುಲ್ಲಿನ ಕಡ್ಡಿಗಳನ್ನು (ಕೂಳೆ) ದಹಿಸುವುದು ಕೃಷಿ ತ್ಯಾಜ್ಯವನ್ನು ಸುಲಭವಾಗಿ ಮತ್ತು ಅಗ್ಗವಾಗಿ ವಿಲೇವಾರಿ ಮಾಡುವ ವಿಧಾನವಾದರೂ ಅದು ಗಾಳಿಯ ಗುಣಮಟ್ಟದ ತೀವ್ರ ಕುಸಿತಕ್ಕೆ ಕಾರಣವಾಗುತ್ತದೆ.

ರಾಜ್ಯ ಸರ್ಕಾರಗಳು ರೈತರಿಂದ ಹೆಸರಿಗಷ್ಟೇ ದಂಡ ವಿಧಿಸುತ್ತಿವೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ, ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಅಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ಪೀಠ ತಿಳಿಸಿತು.

ಇತ್ತ ತಾನು ನೀಡಿದ್ದ ನಿರ್ದೇಶನ  ಪಾಲಿಸದ ರಾಜ್ಯಗಳ ವಿರುದ್ಧ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಕೂಡ ಕ್ರಮ ಕೈಗೊಳ್ಳದೆ ಮೌನ ವಹಿಸಿರುವ ಬಗ್ಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ಶೇ 70ರಷ್ಟು ರೈತರು ಸಣ್ಣ ಹಿಡುವಳಿದಾರರಾಗಿದ್ದು ಕೃಷಿ ತ್ಯಾಜ್ಯ ತೆಗೆಯುವ ಯಂತ್ರ ಬಳಸುವುದಕ್ಕಾಗಿ ಚಾಲಕರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಅಲ್ಲದೆ ಡೀಸೆಲ್‌ ಬಳಸಬೇಕಾಗುತ್ತದೆ. ಆದರೆ ಇದಕ್ಕೆ ರೈತರು ಸಿದ್ಧರಿಲ್ಲ ಎಂದು ವಿಚಾರಣೆ ವೇಳೆ ಪಂಜಾಬ್‌ ಸರ್ಕಾರ ತಿಳಿಸಿತು. ಅಲ್ಲದೆ ರೈತರಿಗೆ ದಂಡ ವಿಧಿಸಲು ರಾಜ್ಯಗಳಿಗೆ ಅಧಿಕಾರ ಇಲ್ಲ ಎಂದು ನುಡಿಯಿತು.

ಆದರೆ ಇದಕ್ಕೆ ತೃಪ್ತವಾಗದ ನ್ಯಾಯಾಲಯ ಪರಿಸರ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ದಂಡ ವಿಧಿಸಬಹುದಾಗಿದೆ ಎಂದಿತು. ಆದ್ದರಿಂದ ಸಿಎಕ್ಯೂಎಂ ನಿರ್ದೇಶನವನ್ನು ಪಂಜಾಬ್‌ ಮತ್ತು ಹರಿಯಾಣ ಸರ್ಕಾರಗಳು ಪಾಲಿಸಿವೆಯೇ ಎನ್ನುವ ಕುರಿತು ಒಂದು ವಾರದೊಳಗೆ ಅನುಪಾಲನಾ ಅಫಿಡವಿಟ್‌ ಸಲ್ಲಿಸಬೇಕು ಎಂದು ಅದು ತಾಕೀತು ಮಾಡಿತು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 16 ರಂದು ನಡೆಯಲಿದೆ.

ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಕೃಷಿ ತ್ಯಾಜ್ಯ ಸುಡುವುದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ನ್ಯಾಯಾಲಯ ಕಳೆದ ಕೆಲವು ವರ್ಷಗಳಿಂದ ಹೇಳುತ್ತಲೇ ಬಂದಿದೆ.