Puran Kumar IPS with Punjab and Haryana High Court  
ಸುದ್ದಿಗಳು

ದಲಿತ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಪಂಜಾಬ್ ಹೈಕೋರ್ಟ್ ನಕಾರ

ಹರಿಯಾಣ ಡಿಜಿಪಿ ಶತ್ರುಜಿತ್ ಕಪೂರ್ ಮತ್ತು ಆಗಿನ ರೋಹ್ಟಕ್ ಎಸ್ ಪಿ ನರೇಂದ್ರ ಬಿಜರ್ನಿಯಾ ಸೇರಿದಂತೆ ವಿವಿಧ ಅಧಿಕಾರಿಗಳು ಜಾತಿ ತಾರತಮ್ಯ ಎಸಗಿದ್ದರೆಂದು ಕುಮಾರ್ ತಮ್ಮ ಆತ್ಮಹತ್ಯೆ ಪತ್ರದಲ್ಲಿ ದೂರಿದ್ದರು.

Bar & Bench

ದಲಿತ ಸಮುದಾಯಕ್ಕೆ ಸೇರಿದ ಐಪಿಎಸ್ ಅಧಿಕಾರಿ ವೈ ಪೂರನ್‌ ಕುಮಾರ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿದ್ದ  ಸಾರ್ವಜನಿಕ ಹಿತಾಸಕ್ತಿ  ಅರ್ಜಿಯನ್ನು  (ಪಿಐಎಲ್) ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.

ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿ‌ ಹೇಗಾಗುತ್ತದೆ ಎಂದು ಅರ್ಜಿದಾರರಾದ ನವನೀತ್ ಕುಮಾರ್ ಅವರು ನಿರೂಪಿಸಲು ವಿಫಲರಾಗಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸಂಜೀವ್ ಬೆರ್ರಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಈಗಾಗಲೇ ಪ್ರಕರಣ ತನಿಖೆ ಮಾಡುತ್ತಿದೆ ಎಂಬುದನ್ನು ನ್ಯಾಯಾಲಯ ಈ ವೇಳೆ ಗಣನೆಗೆ ತೆಗೆದುಕೊಂಡಿತು.

ಇಲ್ಲಿಯವರೆಗೆ ತನಿಖೆಯಲ್ಲಿ ಯಾವುದೇ ಅನಗತ್ಯ ವಿಳಂಬ ಅಥವಾ ಲೋಪ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ  ಯಾವುದೇ ಸ್ವತಂತ್ರ ಸಂಸ್ಥೆಗೆ ತನಿಖೆ ಹಸ್ತಾಂತರಿಸುವ ಪ್ರಮೇಯ ಬಂದಿಲ್ಲ. ಆದ್ದರಿಂದ ಪ್ರಸ್ತುತ ಅರ್ಜಿಯನ್ನು ವಜಾಗೊಳಿಸಲಾಗಿದೆ " ಎಂದು ನ್ಯಾಯಾಲಯ ತೀರ್ಪು ನೀಡಿದೆ. ಚಂಡೀಗಢ ಪೊಲೀಸರು ತನಿಖೆಯ ಪ್ರಗತಿ ವಿವರಿಸುವಂತೆ ಅಕ್ಟೋಬರ್ 10 ರಂದು, ನ್ಯಾಯಾಲಯ ಸೂಚಿಸಿತ್ತು.

ಚಂಡೀಗಢದ ಹಿರಿಯ ಸ್ಥಾಯಿ ವಕೀಲ ಅಮಿತ್ ಝಾಂಜಿ ಇಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಪ್ರಕರಣದಲ್ಲಿ 14 ಜನರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.  ಇಲ್ಲಿಯವರೆಗೆ 22 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿದೆ ಎಂದು ತಿಳಿಸಿದರು.

ಅಕ್ಟೋಬರ್ 7ರಂದು ಚಂಡೀಗಢದ ತಮ್ಮ ಮನೆಯಲ್ಲಿ ಪೂರನ್‌ ಕುಮಾರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್ ಮತ್ತು ರೋಹ್ಟಕ್‌ನ ಅಂದಿನ ಎಸ್‌ಪಿ ನರೇಂದ್ರ ಬಿಜರ್ನಿಯಾ ಮತ್ತಿತರರು ಎಸಗಿದ ಜಾತಿ ತಾರತಮ್ಯ ಮತ್ತು ಕಿರುಕುಳ ತಮ್ಮ ಆತ್ಮಹತ್ಯೆಗೆ ಕಾರಣ ಎಂದು ಅವರು ಆತ್ಮಹತ್ಯೆಗೂ ಮುನ್ನ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು.

ಕುಮಾರ್ ಅವರ ಪತ್ನಿ ಹಿರಿಯ ಐಎಎಸ್ ಅಧಿಕಾರಿ ಅಮ್ನೀತ್ ಪಿ ಕುಮಾರ್ ಅವರು ದಲಿತ ಸಮುದಾಯದ ತಮ್ಮ ಪತಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ತೀವ್ರ ಸಾರ್ವಜನಿಕ ಆಕ್ರೋಶದ ನಂತರ, ಡಿಜಿಪಿ ಕಪೂರ್ ಮತ್ತು ಬಿಜರ್ನಿಯಾ ಇಬ್ಬರನ್ನೂ ಅಮಾನತು ಮಾಡಲಾಗಿತ್ತು.

ಇದೇ ವೇಳೆ ಕುಮಾರ್ ಅವರ ಸಹಾಯಕನನ್ನು ಬಂಧಿಸಿದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ಸಂದೀಪ್ ಲಾಥರ್ ಸಹ ಕೆಲ ದಿನದ ಅಂತರದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು, ವಿವಾದ ಇನ್ನಷ್ಟು ಭುಗಿಲೇಳಲು ಕಾರಣವಾಗಿತ್ತು. ಆತ ಕುಮಾರ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ  ಮಾಡಿದ್ದರು ಅಲ್ಲದೆ ಐಪಿಎಸ್ ಅಧಿಕಾರಿಯ ಕುಟುಂಬ ಸದಸ್ಯರನ್ನೂ ದೂಷಿಸಿದ್ದರು ಎನ್ನಲಾಗಿತ್ತು.