ದಲಿತ ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆ ಕೋರಿ ಪಂಜಾಬ್ ಹೈಕೋರ್ಟ್‌ನಲ್ಲಿ ಪಿಐಎಲ್

ಜಾತಿ ತಾರತಮ್ಯ ಮತ್ತು ಕಿರುಕುಳ ತಮ್ಮ ಸಾವಿಗೆ ಕಾರಣ ಎಂದು ಪೂರನ್‌ ಕುಮಾರ್ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬರೆದ ಪತ್ರದಲ್ಲಿ ನೋವು ತೋಡಿಕೊಂಡಿದ್ದರು.
IPS Puran Kumar, Punjab and Haryana HC
IPS Puran Kumar, Punjab and Haryana HC
Published on

ಐಪಿಎಸ್‌ ಅಧಿಕಾರಿ, ದಲಿತ ಸಮುದಾಯಕ್ಕೆ ಸೇರಿದ ವೈ ಪೂರನ್‌ ಕುಮಾರ್‌ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿ ಸಲ್ಲಿಸಲಾಗಿದೆ.

ಅರ್ಜಿದಾರ ಹಾಗೂ ಲೂಧಿಯಾನದ ಸರ್ಕಾರೇತರ ಸಂಸ್ಥೆಯೊಂದರ ಮುಖ್ಯಸ್ಥರಾದ ನವನೀತ್‌ ಕುಮಾರ್‌ ಎಂಬುವವರನ್ನು ಪ್ರತಿನಿಧಿಸಿದ್ದ ವಕೀಲರು ವಾದ ಮಂಡನೆಗೆ ಸಮಯಾವಕಾಶ ಕೋರಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಸಂಜೀವ್ ಬೆರ್ರಿ ಅವರಿದ್ದ ಪೀಠ ಪ್ರಕರಣ ಮುಂದೂಡಿತು.

Also Read
ತನಿಖಾಧಿಕಾರಿಯಿಂದ ಕಿರುಕುಳ ಆರೋಪ: ಹೈಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ ಐಶ್ವರ್ಯಾ ಗೌಡ

ಅಕ್ಟೋಬರ್ 7ರಂದು ಚಂಡೀಗಢದ ತಮ್ಮ ಮನೆಯಲ್ಲಿ ಪೂರನ್‌ ಕುಮಾರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್ ಮತ್ತು ರೋಹ್ಟಕ್‌ನ ಅಂದಿನ ಎಸ್‌ಪಿ ನರೇಂದ್ರ ಬಿಜರ್ನಿಯಾ ಮತ್ತಿತರರು ಎಸಗಿದ ಜಾತಿ ತಾರತಮ್ಯ ಮತ್ತು ಕಿರುಕುಳ ತಮ್ಮ ಆತ್ಮಹತ್ಯೆಗೆ ಕಾರಣ ಎಂದು ಅವರು ಆತ್ಮಹತ್ಯೆಗೂ ಮುನ್ನ ಬರೆದಿದ್ದ ಪತ್ರದಲ್ಲಿ ತಿಳಿಸಿದ್ದರು.

ಕುಮಾರ್ ಅವರ ಪತ್ನಿ ಹಿರಿಯ ಐಎಎಸ್ ಅಧಿಕಾರಿ ಅಮ್ನೀತ್ ಪಿ ಕುಮಾರ್ ಅವರು ದಲಿತ ಸಮುದಾಯದ ತಮ್ಮ ಪತಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ತೀವ್ರ ಸಾರ್ವಜನಿಕ ಆಕ್ರೋಶದ ನಂತರ, ಡಿಜಿಪಿ ಕಪೂರ್ ಮತ್ತು ಬಿಜರ್ನಿಯಾ ಇಬ್ಬರನ್ನೂ ಅಮಾನತು ಮಾಡಲಾಗಿದೆ.

Also Read
ಎರಡು ತಿಂಗಳೊಳಗೆ ವಿವಿಗಳಲ್ಲಿ ಜಾತಿ ತಾರತಮ್ಯ ತಡೆಗೆ ನಿಯಮ ರೂಪಿಸಿ: ಯುಜಿಸಿಗೆ ಸುಪ್ರೀಂ ಸೂಚನೆ

ಇದೇ ವೇಳೆ ಕುಮಾರ್ ಅವರ ಸಹಾಯಕನನ್ನು ಬಂಧಿಸಿದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ಸಂದೀಪ್ ಲಾಥರ್, ಈ ವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ವಿವಾದ ಇನ್ನಷ್ಟು ಭುಗಿಲೇಳಲು ಕಾರಣವಾಗಿದೆ. ಆತ ಕುಮಾರ್ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ  ಮಾಡಿದ್ದರು ಅಲ್ಲದೆ ಐಪಿಎಸ್ ಅಧಿಕಾರಿಯ ಕುಟುಂಬ ಸದಸ್ಯರನ್ನೂ ದೂಷಿಸಿದ್ದರು ಎನ್ನಲಾಗಿದೆ. ಎರಡು ಆತ್ಮಹತ್ಯೆಗಳು ಸಮಾಜದ ಆತ್ಮಸಾಕ್ಷಿಯನ್ನು ಕಲಕಿವೆ ಎಂದು ಅರ್ಜಿದಾರರ ಪರ ವಕೀಲರು ಇಂದು ಹೈಕೋರ್ಟ್‌ಗೆ ತಿಳಿಸಿದರು.

ಪ್ರಸ್ತುತ, ಚಂಡೀಗಢ ಪೊಲೀಸ್ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು ಹಲವು ಹಿರಿಯ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಹೀಗಾಗಿ ಸ್ಥಳೀಯ ಪೊಲೀಸರ ಬದಲಿಗೆ ಸಿಬಿಐನಂತಹ ತನಿಖಾ ಸಂಸ್ಥೆಗಳು ಪ್ರಕರಣ ಕೈಗೆತ್ತಿಕೊಳ್ಳಬೇಕಿದೆ ಎಂದು ಅವರು ವಾದಿಸಿದರು.

Kannada Bar & Bench
kannada.barandbench.com