ನ್ಯಾಯಮೂರ್ತಿಗಳ ನೇಮಕಾತಿಯ ವಿಧಾನ ಬದಲಿಸುವವರೆಗೆ , ಭಾರತೀಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಬಗ್ಗೆ ಪ್ರಶ್ನೆ ಎತ್ತುವುದು ಮುಂದುವರಿಯುತ್ತದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಗುರುವಾರ ಹೇಳಿದರು.
ಪ್ರಸಕ್ತ ದೇಶಾದ್ಯಂತ 5 ಕೋಟಿ ಪ್ರಕರಣಗಳು ಬಾಕಿ ಇರುವ ಕುರಿತು ರಾಜ್ಯಸಭೆಯ ಪ್ರಶ್ನೋತ್ತರ ಕಲಾಪದ ವೇಳೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು “ಪ್ರಕರಣಗಳ ಬಾಕಿ ಉಳಿಯುವಿಕ ತಪ್ಪಿಸಲು ನಾವು ಬೆಂಬಲ ನೀಡುತ್ತಿದ್ದೇವೆ. ಆದರೆ ನೇಮಕಾತಿ ಪ್ರಕ್ರಿಯೆ ಬದಲಾಗುವವರೆಗೆ ಪ್ರಕರಣ ಬಾಕಿ ಬಗ್ಗೆ ಪ್ರಶ್ನೆಗಳು ಮುಂದುವರೆಯುತ್ತಲೇ ಇರುತ್ತವೆ” ಎಂದು ಪ್ರತಿಕ್ರಿಯಿಸಿದರು.
ಸಂಸತ್ತು 2014ರಲ್ಲಿ ಅಂಗೀಕರಿಸಿದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗ (ಎನ್‌ಜೆಎಸಿ) ಕಾಯಿದೆಯನ್ನು ಮೂರನೇ ಎರಡರಷ್ಟು ರಾಜ್ಯಗಳು ಅನುಮೋದಿಸಿವೆ ಎಂದು ಅವರು ಹೇಳಿದರು.
"ಪ್ರಕರಣಗಳ ಬಾಕಿ ಹೆಚ್ಚಳ ತಪ್ಪಿಸಲು ಸರ್ಕಾರ ಹತ್ತು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಸಮಯಾಭಾವದ ಕಾರಣ ಅದೆಲ್ಲವನ್ನೂ ಇಲ್ಲಿ ವಿವರಿಸಲಾಗದು. ಆದರೆ, ನ್ಯಾಯಮೂರ್ತಿಗಳ ಖಾಲಿ ಹುದ್ದೆಗಳ ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಸೀಮಿತ ಅಧಿಕಾರ ವ್ಯಾಪ್ತಿ ಹೊಂದಿದೆ ಎಂದು ಹೇಳಲು ಬಯಸುತ್ತೇನೆ. ನಾವು ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ಮಾತ್ರ ಅನುಮೋದಿಸುತ್ತೇವೆ. ನ್ಯಾಯಮೂರ್ತಿಗಳ ಹುದ್ದೆಗೆ ಅಭ್ಯರ್ಥಿಗಳನ್ನು ಅನ್ವೇಷಿಸಲು ಮತ್ತು ಶಿಫಾರಸು ಮಾಡಲು ನಮಗೆ ಯಾವುದೇ ಅಧಿಕಾರವಿಲ್ಲ” ಎಂದರು.
ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ ದೇಶದ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಮೂರ್ತಿಗಳ ಹೆಸರನ್ನು ತ್ವರಿತವಾಗಿ ಶಿಫಾರಸು ಮಾಡುವಂತೆ ಸರ್ಕಾರ ಅನೇಕ ಸಂದರ್ಭಗಳಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಮಾಡಿದೆ ಎಂದು ಕಾನೂನು ಸಚಿವರು ಹೇಳಿದರು.
"ನೇಮಕಾತಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಮತ್ತು ದೇಶದ ವೈವಿಧ್ಯಮಯ ಜನ ಸಮುದಾಯವನ್ನು ಪ್ರತಿನಿಧಿಸಿರುವಂತೆ ನೋಡಿಕೊಳ್ಳಲು ನಾವು ಅವರಿಗೆ ವಿನಂತಿಸಿದ್ದೇವೆ. ಆದರೆ ಸದನದ ಭಾವನೆಗಳು, ಜನರ ಭಾವನೆಗಳಿಗೆ ಅನುಗುಣವಾಗಿ ಕೆಲಸ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಅನ್ನಿಸುತ್ತಿದೆ" ಎಂದು ಅವರು ಹೇಳಿದರು.
“ನಾನು ನ್ಯಾಯಾಲಯದ ಬಗ್ಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ, ಏಕೆಂದರೆ ಹಾಗೆ ಮಾಡುವುದು ಸರ್ಕಾರದ ಹಸ್ತಕ್ಷೇಪದಂತೆ ಕಾಣುತ್ತದೆ. ಆದರೆ ನೀವು ಸಂವಿಧಾನವನ್ನು ಗಮನಿಸಿದರೆ, ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆ ಸರ್ಕಾರದ ಹಕ್ಕಾಗಿದೆ" ಎಂದರು.