<div class="paragraphs"><p>Karnataka HC,&nbsp; Raghaveshwara Swamiji and Ramachandrapura Mutt</p></div>

Karnataka HC,  Raghaveshwara Swamiji and Ramachandrapura Mutt

 
ಸುದ್ದಿಗಳು

[ರಾಘವೇಶ್ವರ ಶ್ರೀ ವಿರುದ್ಧದ ಅತ್ಯಾಚಾರ ಪ್ರಕರಣ] ತೀರ್ಪು ಮರುಪರಿಶೀಲನೆ ಕೋರಿದ್ದ ರಾಮಕಥಾ ಗಾಯಕಿ, ಸಿಐಡಿ ಮನವಿಗಳು ವಜಾ

Bar & Bench

ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ಹೊಸನಗರದಲ್ಲಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಖುಲಾಸೆಗೊಳಿಸಿದ್ದ ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಬುಧವಾರ ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದೆ.

ಬೆಂಗಳೂರಿನ 53ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು 2016ರ ಮಾರ್ಚ್‌ನಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಂತ್ರಸ್ತೆ ಮತ್ತು ಅಪರಾಧ ತನಿಖಾ ವಿಭಾಗ (ಸಿಐಡಿ) ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್‌ ತೀರ್ಪು ಮರುಪರಿಶೀಲನಾ ಮನವಿಗಳನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ತಿರಸ್ಕರಿಸಿದೆ.

ದೂರುದಾರೆಯಾದ ಸಂತ್ರಸ್ತೆಯು ತೀರ್ಪು ಪರಿಶೀಲನಾ ಮನವಿ ಸಲ್ಲಿಸಲಾಗದು ಮತ್ತು ಸಿಐಡಿ ಪೊಲೀಸ್‌ ಠಾಣೆಯಲ್ಲ ಹಾಗೂ ಪೊಲೀಸ್‌ ಠಾಣೆಯ ಉಸ್ತುವಾರಿ ಹೊತ್ತಿರುವ ಅಧಿಕಾರಿ ಆರೋಪ ಪಟ್ಟಿ ಸಲ್ಲಿಸದಿರುವುದರಿಂದ ಸಿಐಡಿ ವರದಿಯನ್ನು ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿದ್ದು, ತೀರ್ಪು ಮರುಪರಿಶೀಲನಾ ಮನವಿಗಳನ್ನು ವಜಾ ಮಾಡಿದೆ.

ಸದರಿ ಪ್ರಕರಣದ ವಿಚಾರಣೆ ನಡೆಸಿದ್ದ ಹಲವು ನ್ಯಾಯಮೂರ್ತಿಗಳು ವೈಯಕ್ತಿಕ ಕಾರಣ ಸೇರಿದಂತೆ ವಿವಿಧ ಕಾರಣಗಳಿಗೆ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದಾಗಿದೆ.

ಪ್ರಕರಣದ ಹಿನ್ನೆಲೆ: ರಾಮಕಥಾ ಗಾಯಕಿಯಾದ ಸಂತ್ರಸ್ತೆ 2014ರಲ್ಲಿ ಹೊಸನಗರ ತಾಲ್ಲೂಕಿನ ರಾಮಚಂದ್ರಾಪುರ ಮಠದ ಮಠಾಧಿಪತಿಯಾದ ಆರೋಪಿ ಶ್ರೀಮದ್‌ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀ ಸ್ವಾಮೀಜಿ ಅಲಿಯಾಸ್‌ ಹರೀಶ್‌ ಅವರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376(2)(ಎಫ್‌) (ಅತ್ಯಾಚಾರ), 376(2)(ಎನ್‌) (ಬೆದರಿಸಿ ಬಲವಂತದ ಸಂಭೋಗ), 506 (ಕ್ರಿಮಿನಲ್‌ ಬೆದರಿಕೆ) ಆರೋಪಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.

ಸುದೀರ್ಘ ವಿಚಾರಣೆಯ ಬಳಿಕ ಬೆಂಗಳೂರಿನ 53ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಜಿ ಬಿ ಮುದಿಗೌಡರ್‌ ಅವರು ಆರೋಪಿಯಾದ ರಾಘವೇಶ್ವರ ಸ್ವಾಮೀಜಿ ಅವರಿಗೆ ಕಿರುಕುಳ ನೀಡಲು ಮತ್ತು ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸಲಾಗಿದೆ ಎಂದು ಹೇಳಿ, ಸ್ವಾಮೀಜಿ ಅವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿ 2016 ಮಾರ್ಚ್‌ 31ರಂದು ತೀರ್ಪು ಪ್ರಕಟಿಸಿದ್ದರು.

ವಿಷಯವನ್ನು ಯಾರಿಗೂ ಬಹಿರಂಗಪಡಿಸಬಾರದು ಎಂದು ದೇವರ ಮೇಲೆ ಶಪಥ ಮಾಡಿಸಿ ಸ್ವಾಮೀಜಿ ತಮ್ಮ ಮೇಲೆ 169 ಬಾರಿ ಸಂಭೋಗ ನಡೆಸಿದ್ದರು ಎಂದು ವಯಸ್ಸಿಗೆ ಬಂದಿರುವ ಇಬ್ಬರು ಮಕ್ಕಳನ್ನು ಹೊಂದಿದ್ದ ಸಂತ್ರಸ್ತೆ ಆರೋಪಿಸಿದ್ದು ಅಸಹಜ. ವಂಶವಾಹಿಗೆ ಸಂಬಂಧಿಸಿದ (ಡಿಎನ್‌ಎ) ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ನೀಡಿದ್ದ ವ್ಯಕ್ತಿಯು ನಿರ್ದಿಷ್ಟ ಅರ್ಹತೆಯನ್ನು ಹೊಂದಿಲ್ಲದಿರುವುದರಿಂದ ಸದರಿ ವರದಿಯನ್ನು ಆಧರಿಸಲಾಗದು. ಡಿಎನ್‌ಎ ವರದಿ ನೀಡಿದ ಎಫ್‌ಎಸ್‌ಎಲ್‌ ಘಟಕಕ್ಕೆ ಯಾವುದೇ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಯು ಮಾನ್ಯತೆ ನೀಡಿಲ್ಲ. 15.4.1974ರಂದು ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಸಿಐಡಿ ಪೊಲೀಸರಿಗೆ ಪ್ರಕರಣದ ತನಿಖೆ ನಡೆಸುವ ಅಧಿಕಾರವಿಲ್ಲ. ಇದು ಸಿಆರ್‌ಪಿಸಿಗೆ ವಿರುದ್ಧವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿತ್ತು.

ತನಿಖಾ ಸಂಸ್ಥೆಯಾದ ಸಿಐಡಿಯು ನ್ಯಾಯಸಮ್ಮತವಾಗಿ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಎತ್ತಿ ಹಿಡಿಯುವ ರೀತಿಯಲ್ಲಿ ಪ್ರಕರಣದ ತನಿಖೆ ನಡೆಸಿಲ್ಲ. ಆ ಮೂಲಕ ಮಠ ಮತ್ತು ಸ್ವಾಮೀಜಿಯ ವಿರುದ್ಧ ಇರುವವರ ಪರವಾಗಿ ಕೆಲಸ ಮಾಡಿದ್ದು, ಆರೋಪಿಗಳಾದ ಮುಗ್ಧರಿಗೆ ಕಿರುಕುಳ ನೀಡಲಾಗಿದೆ. ಮೊದಲ ಬಾರಿಗೆ ಘಟನೆ ನಡೆದ ಮೂರು ವರ್ಷಗಳ ಬಳಿಕ ಸಂತ್ರಸ್ತೆಯು ಅತ್ಯಾಚಾರವಾಗಿದೆ ಎಂದು ದೂರು ನೀಡಿದ್ದರು ಎಂಬ ಅಂಶಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿತ್ತು. ಈ ಅಂಶಗಳನ್ನು ಒಳಗೊಂಡಿದ್ದ ವಿಚಾರಣಾಧೀನ ನ್ಯಾಯಾಲಯದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ2016ರ ಮೇ 2ರಂದು ರಾಮಕಥಾ ಗಾಯಕಿ ಮತ್ತು ಸಿಐಡಿ ಕಡೆಯಿಂದ ಮನವಿ ಸಲ್ಲಿಕೆಯಾಗಿತ್ತು. ಈಗ ಮನವಿ ವಜಾಗೊಂಡಿದೆ.