ಮೋದಿ ಉಪನಾಮದ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಸೂರತ್ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಶಿಕ್ಷೆ ವಿಧಿಸಿದ್ದ ಬೆನ್ನಿಗೇ ಅವರ ಲೋಕಸಭಾ ಸದಸ್ಯತ್ವ ಅನರ್ಹಗೊಂಡಿದೆ.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಚುನಾವಣಾ ಪ್ರಚಾರದ ವೇಳೆ ಅವರು ಮಾಡಿದ್ದ ಭಾಷಣ ಮತ್ತು ಅದನ್ನು ಆಧರಿಸಿ ಹೂಡಲಾಗಿದ್ದ ಮೊಕದ್ದಮೆಗಳು ಚರ್ಚೆಯಲ್ಲಿವೆ. ರಾಹುಲ್ ಅವರ ಸದಸ್ಯತ್ವಕ್ಕೆ ಸಂಚಕಾರ ತಂದಿರುವ ಈ ಮೊಕದ್ದಮೆಯಲ್ಲಿ ರಾಹುಲ್ ವಿರುದ್ಧ ಸಾಕ್ಷ್ಯ ನುಡಿದಿದ್ದವರು ಕರ್ನಾಟಕದ ಕೋಲಾರ ಮೂಲದ ಸ್ಥಳೀಯ ಬಿಜೆಪಿ ಮುಖಂಡ ಪಿ ಎಂ ರಘುನಾಥ್.
"ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿಯೇ ಇರಲಿ, ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಏಕೆ ಇದೆ?" ಎಂದು 2019ರಲ್ಲಿ ಕೋಲಾರದಲ್ಲಿ ನಡೆದಿದ್ದ ಚುನಾವಣಾ ಪ್ರಚಾರ ಸಭೆಯ ವೇಳೆ ರಾಹುಲ್ ತಮ್ಮ ಭಾಷಣದಲ್ಲಿ ಹೇಳಿದ್ದರು.
'ಮೋದಿ' ಉಪನಾಮ ಹೊಂದಿರುವ ಎಲ್ಲ ವ್ಯಕ್ತಿಗಳನ್ನು ರಾಹುಲ್ ದೂಷಿಸಿದ್ದಾರೆ ಎಂದು ಗುಜರಾತ್‌ನ ಬಿಜೆಪಿಯ ಸೂರತ್ ಶಾಸಕ ಪೂರ್ಣೇಶ್ ಮೋದಿ ಅವರು ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದಕ್ಕೆ ಅಗತ್ಯವಾದ ದಾಖಲೆ, ಮಾಹಿತಿ ಒದಗಿಸುವುದಲ್ಲದೇ ಖುದ್ದು ಸೂರತ್ ನ್ಯಾಯಾಲಯದಲ್ಲಿ ಸಾಕ್ಷಿ ನುಡಿದಿದ್ದವರು ಕೋಲಾರದ ಮುಳಬಾಗಿಲಿನ ರಘುನಾಥ್.
ಸಾರ್ವತ್ರಿಕ ಚುನಾವಣೆಯಲ್ಲಿ ಕೋಲಾರ ಲೋಕಸಭಾ ಅಭ್ಯರ್ಥಿಯಾಗಿದ್ದ ಕೆ ಎಚ್ ಮುನಿಯಪ್ಪ ಅವರ ಪರವಾಗಿ 2019ರ ಏಪ್ರಿಲ್ 19ರಂದು ಕೋಲಾರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಅಬ್ಬರದ ಪ್ರಚಾರ ನಡೆಸಿದ್ದರು. ಆ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಬ್ಯಾಂಕ್‌ಗಳಿಗೆ ವಂಚಿಸಿ ದೇಶ ತೊರೆದಿದ್ದ ನೀರವ್ ಮೋದಿ, ಲಲಿತ್ ಮೋದಿ ಅವರೊಂದಿಗೆ ನರೇಂದ್ರ ಮೋದಿ ಅವರ ಹೆಸರು ತಳುಕಿ ಹಾಕಿ ರಾಹುಲ್ ಭಾಷಣ ಮಾಡಿದ್ದರು.
ಆ ವೇಳೆ ರಾಜ್ಯ ಬಿಜೆಪಿಯ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ರಘುನಾಥ್ ಅವರು ಚುನಾವಣಾ ಕಾರ್ಯದ ನಿಮಿತ್ತ ಸಾರ್ವಜನಿಕ ಸಭೆಯ ಸಮೀಪ ಇದ್ದರು. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ರಘುನಾಥ್ ಅವರು “ನಾನು ರಾಹುಲ್ ಗಾಂಧಿಯ ಭಾಷಣಕ್ಕೆ ಸಾಕ್ಷಿಯಾಗಿದ್ದು, ನಮ್ಮ ಸಮಾಜವನ್ನು ಅವರು ಭಾಷಣದಲ್ಲಿ ನಿಂದಿಸಿದ್ದರು. ರಾಹುಲ್ ಭಾಷಣವನ್ನು ಕಾಂಗ್ರೆಸ್ ರಾಜ್ಯ ಮುಖಂಡ ಬಿ ಎಲ್ ಶಂಕರ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದರು. ಗುಜರಾತ್‌ನಲ್ಲಿ ʼಮೋದಿʼ ಎಂಬುದು ಒಂದು ಸಮಾಜ. ಕರ್ನಾಟಕದಲ್ಲಿ ಅದನ್ನು ಗಾಣಿಗ ಸಮಾಜ ಎನ್ನಲಾಗುತ್ತದೆ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಸಮಾಜವನ್ನೇಕೆ ದೂಷಿಸಬೇಕು? ಈ ವಿಚಾರವನ್ನು ನಾನು ಗುಜರಾತ್‌ನ ಸೂರತ್ ಶಾಸಕ ಹಾಗೂ ಸ್ನೇಹಿತರಾದ ಪೂರ್ಣೇಶ್ ಮೋದಿ ಅವರ ಗಮನಕ್ಕೆ ತಂದಿದ್ದೆ. ಈ ಸಂಬಂಧ ಪೂರ್ಣೇಶ್ ಅವರು ಸೂರತ್ ನ್ಯಾಯಾಲಯದಲ್ಲಿ ಮಾನನಷ್ಟ ದಾವೆ ಹೂಡಿದ್ದರು” ಎಂದು ವಿವರಿಸಿದ್ದಾರೆ.
“ರಾಹುಲ್ ಗಾಂಧಿ ಅವರ ಭಾಷಣದ ಆಡಿಯೊ ಹಾಗೂ ಮಾಧ್ಯಮಗಳಲ್ಲಿ ಬಂದಿದ್ದ ಸುದ್ದಿಯನ್ನು ಸಂಗ್ರಹ ಮಾಡಿ ಸೂರತ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. 2021ರ ಜನವರಿ 1ರಂದು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದೆ. ಈ ವಿಚಾರವಾಗಿ ಹಲವು ಬಾರಿ ಸೂರತ್‌ಗೆ ಭೇಟಿ ನೀಡಿದ್ದೇನೆ. ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ರಘುನಾಥ್ ಅವರಿಗೆ 67 ವರ್ಷ ವಯಸ್ಸಾಗಿದ್ದು, ಅಖಿಲ ಭಾರತ ಗಾಣಿಗ (ತೈಲಿಕ್ ಸಾಹು) ಮಹಾಸಭಾದ ಕಾರ್ಯಾಧ್ಯಕ್ಷರಾಗಿದ್ದಾರೆ. 1992ರಿಂದ 1996ರವರೆಗೆ ಕೋಲಾರದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಎರಡು ಬಾರಿ ಕಾರ್ಯನಿರ್ವಹಿಸಿದ್ದ ಅವರು 1983 ಮತ್ತು 1994ರ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು ಎಂದು ತಿಳಿದು ಬಂದಿದೆ.