ಮೋದಿ ಉಪನಾಮ ಕುರಿತ ಹೇಳಿಕೆ: ರಾಹುಲ್‌ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ ಗುಜರಾತ್ ನ್ಯಾಯಾಲಯ; ಸದ್ಯಕ್ಕಿಲ್ಲ ಶಿಕ್ಷೆ

ಕರೋಲ್‌ನಲ್ಲಿ ನಡೆದಿದ್ದ ರಾಜಕೀಯ ಪ್ರಚಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀರವ್ ಮೋದಿ ಮತ್ತು ಲಲಿತ್ ಮೋದಿಯಂತಹ ದೇಶಭ್ರಷ್ಟ ವ್ಯಕ್ತಿಗಳೊಂದಿಗೆ ಹೋಲಿಸಿದ್ದರು ರಾಹುಲ್.
Rahul Gandhi
Rahul Gandhi Facebook

ʼಎಲ್ಲಾ ಕಳ್ಳರಿಗೂ ಮೋದಿ ಉಪನಾಮವಿದೆʼ ಎಂಬ ಹೇಳಿಕೆಗೆ ಸಂಬಂಧಿಸಿದಂತೆ 2019ರಲ್ಲಿ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಪ್ಪಿತಸ್ಥ ಎಂದು ಸೂರತ್‌ ನ್ಯಾಯಾಲಯ ಗುರುವಾರ ಘೋಷಿಸಿರುವುದು ವರದಿಯಾಗಿದೆ.

ಈ ಅಪರಾಧಕ್ಕಾಗಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್‌ ಅವರಿಗೆ ವಿಚಾರಣಾ ನ್ಯಾಯಾಲಯ ಜಾಮೀನು ನೀಡಿದ್ದು ಮೇಲ್ಮನವಿ ಸಲ್ಲಿಸಲು ಅವರಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ಶಿಕ್ಷೆಯನ್ನು ಸದ್ಯಕ್ಕೆ ಅಮಾನತಿನಲ್ಲಿಡಲಾಗಿದೆ.

Also Read
ರಾಹುಲ್‌ ಗಾಂಧಿಯ ʼಮೋದಿʼ ಹೇಳಿಕೆ ಪ್ರಶ್ನಿಸಿದ್ದ ಅರ್ಜಿ: ಈ ಹಿಂದಿನ ತಡೆಯಾಜ್ಞೆ ತೆರವುಗೊಳಿಸಿದ ಗುಜರಾತ್ ಹೈಕೋರ್ಟ್

ಕರೋಲ್‌ನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ರಾಹುಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನೀರವ್‌ ಮೋದಿ, ಲಲಿತ್‌ ಮೋದಿ ಅವರಂತಹ ದೇಶಬಿಟ್ಟು ಪರಾರಿಯಾದ ವ್ಯಕ್ತಿಗಳೊಂದಿಗೆ ಹೋಲಿಸಿದ್ದರು. "ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿಯೇ ಇರಲಿ, ಎಲ್ಲಾ ಕಳ್ಳರ ಹೆಸರಿನಲ್ಲಿ ಮೋದಿ ಏಕೆ ಇದೆ?" ಎಂದು ಅವರು ಪ್ರಶ್ನಿಸಿದ್ದರು.

ಈ ಹೇಳಿಕೆಯ ಮೂಲಕ 'ಮೋದಿ' ಉಪನಾಮ ಹೊಂದಿರುವ ಎಲ್ಲ ವ್ಯಕ್ತಿಗಳನ್ನು ರಾಹುಲ್‌ ದೂಷಿಸಿದ್ದಾರೆ ಎಂದು ಹೇಳಿದ ಪೂರ್ಣೇಶ್ ಮೋದಿ ಎಂಬುವವರು ರಾಹುಲ್‌ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಪ್ರಕರಣದ ವಿಚಾರಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ತೆರವುಗೊಳಿಸಿದ್ದು, ಅದರಂತೆ ವಿಚಾರಣೆ ಪುನರಾರಂಭವಾಗಿತ್ತು.

Related Stories

No stories found.
Kannada Bar & Bench
kannada.barandbench.com