Justice Gita Gopi and Gujarat High Court
Justice Gita Gopi and Gujarat High Court  
ಸುದ್ದಿಗಳು

ಮೋದಿ ಉಪನಾಮ ಹೇಳಿಕೆ: ರಾಹುಲ್ ಮೇಲ್ಮನವಿ ವಿಚಾರಣೆಯಿಂದ ಹಿಂದೆ ಸರಿದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಗೀತಾ ಗೋಪಿ

Bar & Bench

ಮೋದಿ ಉಪನಾಮ ಕುರಿತ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ತನ್ನನ್ನು ದೋಷಿ ಎಂದು ಅಪರಾಧ ನಿರ್ಣಯ ಮಾಡಿರುವ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ತೀರ್ಪಿಗೆ ತಡೆ ನೀಡುವಂತೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಯಿಂದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಗೀತಾ ಗೋಪಿ ಬುಧವಾರ ಹಿಂದೆ ಸರಿದಿದ್ದಾರೆ [ರಾಹುಲ್‌ ಗಾಂಧಿ ಮತ್ತು ಪೂರ್ಣೇಶ್‌ ಮೋದಿ ನಡುವಣ ಪ್ರಕರಣ].

ನ್ಯಾ. ಗೀತಾ ಗೋಪಿ ಅವರಿದ್ದ ಏಕಸದಸ್ಯ ಪೀಠದೆದುರು ರಾಹುಲ್‌ ಅವರ ಮನವಿ ಪ್ರಸ್ತಾಪಿಸಲಾಯಿತು.  ಆಗ ತಮ್ಮ ಮುಂದೆ ಅರ್ಜಿ ಪ್ರಸ್ತಾಪಿಸದಂತೆ ನ್ಯಾಯಮೂರ್ತಿಗಳು ಸೂಚಿಸಿದರು. ಮತ್ತೊಂದು ಪೀಠವನ್ನು ನಿಯೋಜಿಸುವ ಅಧಿಕಾರವುಳ್ಳ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅವರನ್ನು ಕೋರುವಂತೆ ಹೇಳಿದರು.

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತಮ್ಮನ್ನು ದೋಷಿ ಎಂದು ಮಾಡಿರುವ ಅಪರಾಧ ನಿರ್ಣಯವನ್ನು ಅಮಾನತುಗೊಳಿಸುವಂತೆ ಕೋರಿ ರಾಹುಲ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಸೂರತ್‌ನ ಸೆಷನ್ಸ್ ನ್ಯಾಯಾಲಯ ಏಪ್ರಿಲ್ 20 ರಂದು ವಜಾಗೊಳಿಸಿತ್ತು.

“ಸಂಸತ್‌ ಸದಸ್ಯತ್ವದಿಂದ ರಾಹುಲ್‌ ಅವರನ್ನು ಅನರ್ಹಗೊಳಿಸಿರುವುದರಿಂದ ಅವರಿಗೆ ಯಾವುದೇ ಎದುರಿಸಲಾಗದಂತಹ ಅಥವಾ ತುಂಬಿಕೊಡಲಾಗದಂತಹ ನಷ್ಟ ಅಥವಾ ಧಕ್ಕೆ ಒದಗಿದೆ ಎಂದು ಹೇಳಲಾಗದು” ಎಂದು ಸೆಷನ್ಸ್‌ ನ್ಯಾಯಾಲಯ ತನ್ನ ವಿಸ್ತೃತ ಆದೇಶದಲ್ಲಿ ಹೇಳಿತ್ತು.