Supreme Court of India 
ಸುದ್ದಿಗಳು

ತಪ್ಪು ಮಾಹಿತಿ ನೀಡಿ ಸರಕು ಸಾಗಣೆ: ವಿತರಣೆ ನಂತರವೂ ರೈಲ್ವೇ ಇಲಾಖೆ ದಂಡ ವಿಧಿಸಬಹುದು ಎಂದ ಸುಪ್ರೀಂ

ಸರಕುಗಳ ವಿತರಣೆಯ ಮೊದಲು ಅಥವಾ ನಂತರವೂ ರೈಲ್ವೆ ಇಲಾಖೆಯು ಸುಳ್ಳು ಮಾಹಿತಿ ನೀಡಿ ಸಾಗಿಸಲಾದ ಸರಕುಗಳಿಗೆ ಸೂಕ್ತ ದಂಡ ವಿಧಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Bar & Bench

ಸುಪ್ರೀಂ ಕೋರ್ಟ್ ಇತ್ತೀಚೆಗೆ ರೈಲ್ವೆ ಕಾಯಿದೆ, 1989 ರ ಸೆಕ್ಷನ್ 66(4) ರ ವ್ಯಾಪ್ತಿಯನ್ನು ಸ್ಪಷ್ಟಪಡಿಸಿದ್ದು ಕಾಯಿದೆಯಡಿ ಭಾರತೀಯ ರೈಲ್ವೆ ಮೂಲಕ ಕಳುಹಿಸಲಾದ ಸರಕುಗಳ ಸಾಗಣೆಯಲ್ಲಿ ಯಾವುದೇ ತಪ್ಪು ಘೋಷಣೆ ಮಾಡಿರುವುದು ಕಂಡುಬಂದರೆ ರೈಲ್ವೆ ಇಲಾಖೆಯು ದಂಡ ವಿಧಿಸಬಹುದು ಎಂದು ಹೇಳಿದೆ [ಭಾರತ ಒಕೂಟ ಮತ್ತು ಕಾಮಾಖ್ಯ ಟ್ರಾನ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ನಡುವಣ ಪ್ರಕರಣ].

ಸರಕುಗಳ ವಿತರಣೆಯ ಮೊದಲು ಅಥವಾ ನಂತರವೂ ಸುಳ್ಳು ಘೋಷಣೆ (ತೆರಿಗೆಯಿಂದ ತಪ್ಪಿಸಿಕೊಳ್ಳಲು ಸರಕಿನ ಕುರಿತು ನೀಡುವ ತಪ್ಪು ಮಾಹಿತಿ) ಮಾಡಿದ ಸರಕುಗಳಿಗೆ ಸೂಕ್ತ ದಂಡ ವಿಧಿಸಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸರಕು ವಿತರಣೆಯ ಮೊದಲು ಅಥವಾ ನಂತರ ದಂಡ ವಿಧಿಸಬೇಕೇ ಎಂಬುದನ್ನು ಕಾಯಿದೆಯ ಸೆಕ್ಷನ್ 66(4) ನಿರ್ದಿಷ್ಟಪಡಿಸಿಲ್ಲ ಇದು ವಿತರಣೆಗೆ ಮುನ್ನ ಅಥವಾ ನಂತರದ ಎರಡೂ ಹಂತಗಳಲ್ಲಿ ದಂಡ ವಿಧಿಸುವುದಕ್ಕೆ ಅವಕಾಶ ನೀಡುವ ಶಾಸಕಾಂಗದ ಉದ್ದೇಶವನ್ನು ಸೂಚಿಸುತ್ತದೆ ಎಂದು ನ್ಯಾಯಮೂರ್ತಿ ಸಂಜಯ್ ಕರೋಲ್ ಮತ್ತು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಸೂಚಿಸಿದೆ.

ಸುಳ್ಳು ಘೋಷಣೆ ಮಾಡಿದ ಸರಕುಗಳನ್ನು ತಲುಪಿಸಿದ ನಂತರ ರೈಲ್ವೆ ಅಧಿಕಾರಿಗಳು ದಂಡ ಪಡೆಯಲು ಅರ್ಹರಲ್ಲ ಎಂದು ಗುವಾಹಟಿ ಹೈಕೋರ್ಟ್‌ 2021ರಲ್ಲಿ ನೀಡಿದ್ದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

ಭಾರತೀಯ ರೈಲ್ವೆಯ ಮೂಲಕ ಬುಕ್ ಮಾಡಿದ ಸರಕುಗಳಿಗೆ ಸಂಬಂಧಿಸಿದಂತೆ ಸುಳ್ಳು ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿ, ಪ್ರತಿವಾದಿಗಳಾದ ಕಾಮಾಕ್ಯ ಟ್ರಾನ್ಸ್‌ಪೋರ್ಟ್ ಪ್ರೈವೇಟ್ ಲಿಮಿಟೆಡ್ ಮತ್ತಿತರರ ವಿರುದ್ಧ 2011ಮತ್ತು 2012 ರಲ್ಲಿ ರೈಲ್ವೆ ಇಲಾಖೆ ಡಿಮ್ಯಾಂಡ್‌ ನೋಟಿಸ್‌ ನೀಡಿತ್ತು. ಇದನ್ನು ಪ್ರಶ್ನಿಸಿದ್ದ ಪ್ರತಿವಾದಿಗಳ ಪರವಾಗಿ ರೈಲ್ವೆ ಪರಿಹಾರ ನ್ಯಾಯಮಂಡಳಿ ಮತ್ತು ಗುವಾಹಟಿ ಹೈಕೋರ್ಟ್‌ ತೀರ್ಪು ನೀಡಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿತ್ತು.

ಮೇಲ್ಮನವಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್‌ ರೈಲ್ವೆ ಅಧಿಕಾರಿಗಳು ಸೆಕ್ಷನ್‌ 66(4)ರ ಅಡಿ ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಿದ್ದು ಡಿಮ್ಯಾಂಡ್‌ ನೋಟಿಸ್‌ ನೀಡಿದ್ದಾರೆ ಎಂದಿತು. ಅಂತೆಯೇ ರೈಲ್ವೆ ಪರಿಹಾರ ನ್ಯಾಯಮಂಡಳಿ ಮತ್ತು ಗುವಾಹಟಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅದು ರದ್ದುಗೊಳಿಸಿತು.

ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಎಂ ನಟರಾಜ್‌ ಮತ್ತವರ ತಂಡ ವಾದ ಮಂಡಿಸಿತು. ಪ್ರತಿವಾದಿಗಳನ್ನು ವಕೀಲರಾದ ದಿವ್ಯಾಂಶ್  ರಾಠಿ, ಕೆಪಿ ಮಹೇಶ್ವರಿ, ದಿವ್ಯಂ ರಾಠಿ ಹಾಗೂ ಗುಂಜನ್ ಕುಮಾರ್ ಪ್ರತಿನಿಧಿಸಿದ್ದರು.

[ತೀರ್ಪಿನ ಪ್ರತಿ]

Union_of_India_v__Ms_Kamakhya_Transport_Pvt__Ltd__Etc_.pdf
Preview