Raj Kundra 
ಸುದ್ದಿಗಳು

ಅಶ್ಲೀಲ ಚಿತ್ರ ಪ್ರಕರಣ: ಪೊಲೀಸ್‌ ವಶಕ್ಕೆ ನೀಡಿದ್ದನ್ನು ಪ್ರಶ್ನಿಸಿದ್ದ ಕುಂದ್ರಾ ಮನವಿ ವಜಾ ಮಾಡಿದ ಬಾಂಬೆ ಹೈಕೋರ್ಟ್‌

ಕುಂದ್ರಾ ಅವರ ಕಸ್ಟಡಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ಹೊರಡಿಸಿರುವ ಆದೇಶವು ಸರಿಯಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಎ ಎಸ್‌ ಗಡ್ಕರಿ ಹೇಳಿದ್ದಾರೆ.

Bar & Bench

ಮುಂಬೈನ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ತನ್ನನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ್ದು ಮತ್ತು ಆನಂತರದ ಆದೇಶಗಳನ್ನು ಪ್ರಶ್ನಿಸಿ ಉದ್ಯಮಿ ರಾಜ್‌ ಕುಂದ್ರಾ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್‌ ಶನಿವಾರ ವಜಾ ಮಾಡಿದೆ.

ಜುಲೈ 19ರಂದು ಮ್ಯಾಜಿಸ್ಟ್ರೇಟ್‌ ಹೊರಡಿಸಿರುವ ಕಸ್ಟಡಿ ಮತ್ತು ಆನಂತರದ ಆದೇಶಗಳು ಕಾನೂನಿಗೆ ಬದ್ಧವಾಗಿದೆ ಎಂದು ನ್ಯಾಯಮೂರ್ತಿ ಎ ಎಸ್‌ ಗಡ್ಕರಿ ಆದೇಶದಲ್ಲಿ ತಿಳಿಸಿದ್ದಾರೆ. “ಕುಂದ್ರಾ ಅವರನ್ನು ಕಸ್ಟಡಿಗೆ ನೀಡಿರುವ ಮ್ಯಾಜಿಸ್ಟ್ರೇಟ್‌ ಆದೇಶವು ಕಾನೂನಿಗೆ ಬದ್ಧವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ” ಎಂದು ಪೀಠ ಹೇಳಿದೆ.

ಪೊಲೀಸರು ಕುಂದ್ರಾ ಅವರನ್ನು ಬಂಧಿಸಿ ಎಸ್ಪ್ಲನೇಡ್‌ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿದ್ದರು. ಅವರನ್ನು ನ್ಯಾಯಾಲಯವು ಜುಲೈ 23ರ ವರೆಗೆ ಕಸ್ಟಡಿಗೆ ನೀಡಿದ್ದು, ಬಳಿಕ ಕಸ್ಟಡಿ ಅವಧಿಯನ್ನು ಜುಲೈ 27ರವರೆಗೆ ವಿಸ್ತರಿಸಿತ್ತು. ಆನಂತರ ಮತ್ತೊಮ್ಮೆ 14 ದಿನಗಳ ಕುಂದ್ರಾ ಅವರನ್ನು ಪೊಲೀಸ್‌ ಕಸ್ಟಡಿಗೆ ನೀಡಲಾಗಿತ್ತು.

ಈ ಮಧ್ಯೆ, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಜುಲೈ 28ರಂದು ಕುಂದ್ರಾ ಅವರ ಜಾಮೀನು ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಕುಂದ್ರಾ ಅವರು ಸೆಷನ್ಸ್‌ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬಂಧ ಸೆಷನ್ಸ್‌ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದ್ದು, ಆಗಸ್ಟ್‌ 10ರಂದು ಜಾಮೀನು ಮನವಿ ವಿಚಾರಣೆ ನಡೆಸಲಿದೆ.