Raj Kundra 
ಸುದ್ದಿಗಳು

ಅಶ್ಲೀಲ ಚಲನಚಿತ್ರ ಪ್ರಕರಣ: ಆರೋಪಪಟ್ಟಿ ಸಲ್ಲಿಸಿದ ಬಳಿಕ ಜಾಮೀನು ಕೋರಿ ಮುಂಬೈ ನ್ಯಾಯಾಲಯದ ಮೊರೆ ಹೋದ ರಾಜ್ ಕುಂದ್ರಾ

ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 20ರಂದು ಮುಂಬೈ ಎಸ್ಪ್ಲನೇಡ್‌ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ವಿಚಾರಣೆ ನಡೆಸಲಿದ್ದಾರೆ.

Bar & Bench

ಅಶ್ಲೀಲ ಚಲನಚಿತ್ರ ಪ್ರಕರಣದ ತನಿಖೆಯನ್ನು ಪೊಲೀಸರು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಪ್ರಕರಣದ ಆರೋಪಿ, ಉದ್ಯಮಿ ರಾಜ್‌ ಕುಂದ್ರಾ ಅವರು ಸಾಮಾನ್ಯ ಜಾಮೀನು ಕೋರಿ ಮುಂಬೈ ನ್ಯಾಯಾಲಯವೊಂದರ ಮೊರೆ ಹೋಗಿದ್ದಾರೆ.

ಜಾಮೀನು ಅರ್ಜಿಯನ್ನು ಸೆಪ್ಟೆಂಬರ್ 20ರಂದು ಮುಂಬೈ ಎಸ್ಪ್ಲನೇಡ್‌ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ವಿಚಾರಣೆ ನಡೆಸಲಿದ್ದಾರೆ.

ಕುಂದ್ರಾ ಸೇರಿದಂತೆ ನಾಲ್ವರ ವಿರುದ್ಧ ಮುಂಬೈ ಪೊಲೀಸ್ ಅಪರಾಧ ವಿಭಾಗ, ವಿವರವಾದ ಪೂರಕ ಆರೋಪಪಟ್ಟಿ ಸಲ್ಲಿಸಿದೆ. ಆರೋಪಪಟ್ಟಿ ಸಲ್ಲಿಸಿರುವುದರಿಂದ ತನ್ನ ವಿರುದ್ಧದ ತನಿಖೆ ಪೂರ್ಣಗೊಂಡಿದೆ. ಹೀಗಾಗಿ ತಾನು ಜಾಮೀನಿಗೆ ಅರ್ಹ ಎಂದು ಕುಂದ್ರಾ ಪ್ರತಿಪಾದಿಸಿದ್ದಾರೆ. ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿದ ಬಳಿಕ ಒಂಬತ್ತು ಆರೋಪಿಗಳಲ್ಲಿ ಎಂಟು ಮಂದಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕುಂದ್ರಾ ಹೇಳಿದ್ದಾರೆ.

ವಕೀಲ ಪ್ರಶಾಂತ್ ಪಾಟೀಲ್ ಅವರ ಮೂಲಕ ಅರ್ಜಿ ಸಲ್ಲಿಸಿರುವ ಕುಂದ್ರಾ ಈಗ ಸಹ-ಆರೋಪಿಗಳಂತೆ ತಮಗೂ ಜಾಮೀನು ನೀಡಬೇಕು. ಮೊದಲ ಆರೋಪಪಟ್ಟಿಯಲ್ಲಿ ಯಾವುದೇ ಸಾಕ್ಷ್ಯಾಧಾರವಿಲ್ಲದಿದ್ದರೂ ತಮ್ಮನ್ನು ಬಂಧಿಸಲಾಗಿದ್ದು ಪ್ರಚೋದಿತ ತನಿಖೆ ಬಳಿಕ ಪೂರಕ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಜಾಮೀನಿಗಾಗಿ ಕುಂದ್ರಾ ಪ್ರತಿಪಾದಿಸಿರುವ ಕೆಲ ಅಂಶಗಳು ಹೀಗಿವೆ:

  • ತಾವು ಸಮಾಜದೊಂದಿಗೆ ಆಳ ಒಡನಾಟ ಹೊಂದಿರುವ ಭಾರತದ ಖಾಯಂ ನಿವಾಸಿ.

  • ಕೇವಲ 10 ತಿಂಗಳ ಅವಧಿಗೆ ಮಾತ್ರ ತಾನು ಹಾಟ್‌ಶಾಟ್ ಮತ್ತು ಬಾಲಿಫೇಮ್ ಮೊಬೈಲ್‌ ಅಪ್ಲಿಕೇಷನ್‌ಮಾಲೀಕನಾಗಿದ್ದೆ

  • ಈ ಅವಧಿಯಲ್ಲಿ, ಎಎಂಪಿಎಲ್‌ನ ಕೆಲ ಕ್ಲೈಂಟ್‌ಗಳೊಂದಿಗೆ ಸಂವಹನ ನಡೆಸಿದ್ದೆನಾದರೂ ಒಪ್ಪಂದ ಮಾಡಿಕೊಂಡಿರಲಿಲ್ಲ ಇಲ್ಲವೇ ಯಾವುದೇ ಕಂಟೆಂಟ್‌ ರೂಪಿಸುವಲ್ಲಿ ಸಕ್ರಿಯ ಭಾಗವಹಿಸುವಿಕೆ ಇರಲಿಲ್ಲ.

  • ಸಾಕ್ಷಿಗಳು ಎಂದು ಕರೆಸಿಕೊಂಡವರ ಹೇಳಿಕೆಯನ್ನಷ್ಟೇ ಪರಿಗಣಿಸಲಾಗಿದೆ. ಪ್ರಕರಣದ ಸಂತ್ರಸ್ತರು ವಯಸ್ಕರಾಗಿದ್ದು ಸ್ವಪ್ರೇರಣೆಯಿಂದ ʼವೀಡಿಯೊ ಶೂಟಿಂಗ್‌ʼನಲ್ಲಿ ನಟಿಸಿದ್ದರು ಎಂದು ಸ್ಪಷ್ಟವಾಗುತ್ತದೆ.

  • ಕೋವಿಡ್‌ ಸಾಂಕ್ರಾಮಿಕ ಸ್ಥಿತಿಯಿಂದಾಗಿ ತಾನು ಅನಾರೋಗ್ಯಕ್ಕೆ ತುತ್ತಾಗಬಹುದು.