ರಾಜಸ್ಥಾನ ಪೆರೋಲ್ ನಿಯಮಗಳಡಿ ಕೈದಿಗಳ ಬಿಡುಗಡೆ ನಿಯಮಾವಳಿ- 1958ರ ಅಡಿ ತನಗೆ 20 ದಿನಗಳ ಪೆರೋಲ್ ನೀಡುವಂತೆ ಕೋರಿ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಸಲ್ಲಿಸಿದ್ದ ಅರ್ಜಿಯನ್ನು ಮರುಪರಿಶೀಲಿಸುವಂತೆ ಜೋಧ್‌ಪುರದ ಜಿಲ್ಲಾ ಪೆರೋಲ್ ಸಲಹಾ ಸಮಿತಿಗೆ ರಾಜಸ್ಥಾನ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ [ಆಶಾ ರಾಮ್ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].
2021ರ ಪೆರೋಲ್ ನಿಯಮ ಆಧರಿಸಿ ತನ್ನನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವುದನ್ನು ತಡೆದಿದ್ದ ಸಮಿತಿಯ ನಿರ್ಧಾರ ಪ್ರಶ್ನಿಸಿ ಅಸಾರಾಮ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿತು. ನ್ಯಾಯಮೂರ್ತಿ ವಿಜಯ್ ಬಿಷ್ಣೋಯ್ ಮತ್ತು ನ್ಯಾಯಮೂರ್ತಿ ಯೋಗೇಂದ್ರ ಕುಮಾರ್ ಪುರೋಹಿತ್ ಅವರ ಪೀಠವು ಸಮಿತಿ 2021ರ ನಿಯಮಾವಳಿಯಡಿ ಹೊರಡಿಸಿದ್ದ ಆದೇಶವನ್ನು ಬದಿಗೆ ಸರಿಸಿತು.
2021ರ ನಿಯಮಾವಳಿ ಬದಲಿಗೆ 1958ರ ನಿಯಮಾವಳಿಯಂತೆಯೇ ಪೆರೋಲ್ ಅರ್ಜಿಯನ್ನು ನಿರ್ಧರಿಸುವಂತೆ ಅದು ನಿರ್ದೇಶಿಸಿತು. ಆದೇಶದ ಪ್ರತಿ ದೊರೆತ ಆರು ವಾರಗಳೊಳಗೆ ನಿರ್ಣಯ ಕೈಗೊಳ್ಳುವಂತೆಯೂ ಅದು ಗಡುವು ವಿಧಿಸಿದೆ.
2013ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಅಸಾರಾಮ್ ಬಾಪು ಅವರನ್ನು ಬಂಧಿಸಲಾಗಿತ್ತು. ಕೃತ್ಯ 2013ರ ಆಗಸ್ಟ್‌ನಲ್ಲಿ ಜೋಧ್‌ಪುರದ ಮನೈ ಗ್ರಾಮದಲ್ಲಿ ನಡೆದಿತ್ತು ಎನ್ನಲಾಗಿದೆ.
2021 ರ ಪೆರೋಲ್ ನಿಯಮಾವಳಿ ಅಸ್ತಿತ್ವಕ್ಕೆ ಬರುವ ಮೂರು ವರ್ಷಗಳ ಮೊದಲು ಅಂದರೆ 2018ರಲ್ಲಿ ತನ್ನ ಕಕ್ಷಿದಾರನನ್ನು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಲಾಯಿತು. ಹೀಗಾಗಿ, ಅವರ ಪೆರೋಲ್ ಅನ್ನು 1958ರ ನಿಯಮಾವಳಿ ಅಡಿ ಪರಿಗಣಿಸಬೇಕು ಎಂಬುದು ಎಂದು ಅಸಾರಾಮ್ ಪರ ವಕೀಲರ ವಾದವಾಗಿತ್ತು.