Rajasthan High court

 
ಸುದ್ದಿಗಳು

ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸುವಾಗ ರಾಜ, ನವಾಬ ಬಿರುದು ಬಳಸಬಹುದೇ ಎಂಬುದನ್ನು ಪರಿಶೀಲಿಸಲಿರುವ ರಾಜಸ್ಥಾನ ಹೈಕೋರ್ಟ್

ಸಂವಿಧಾನದ 363 ಎ ಮತ್ತು 14ನೇ ವಿಧಿ ಪರಿಶೀಲಿಸಿದ ನಂತರ ದೇಶದ ರಾಜಪ್ರಭುತ್ವದ ಆಡಳಿತಗಾರರಿಗೆ ನೀಡಲಾಗಿದ್ದ ಬಿರುದುಗಳು ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ, ಅವುಗಳನ್ನು ರದ್ದುಗೊಳಿಸಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿತು.

Bar & Bench

ಸಂವಿಧಾನಕ್ಕೆ 363ಎ ವಿಧಿ ಅಳವಡಿಸಿದ ಬಳಿಕ ರಾಜ/ನವಾಬ/ಮಹಾರಾಜ/ರಾಜಕುಮಾರ ಎಂಬಂತಹ ಬಿರುದುಗಳನ್ನು ವ್ಯಕ್ತಿಗಳು ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡುವಾಗ ಪೂರ್ವಪ್ರತ್ಯಯವಾಗಿ ಬಳಸಬಹುದೇ ಎಂಬ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರಾಜಸ್ಥಾನ ಹೈಕೋರ್ಟ್ ಸೂಚಿಸಿದೆ. [ಭಗವತಿ ಸಿಂಗ್ ಮತ್ತು. ರಾಜಾ ಲಕ್ಷ್ಮಣ್ ಸಿಂಗ್ ನಡುವಣ ಪ್ರಕರಣ].

ತಾವು ವಿಚಾರಣೆ ನಡೆಸುತ್ತಿದ್ದ ಪ್ರಕರಣವೊಂದರಲ್ಲಿ ಪ್ರತಿವಾದಿಯೊಬ್ಬರ ಹೆಸರು 'ರಾಜಾ ಲಕ್ಷ್ಮಣ್ ಸಿಂಗ್' ಎಂದು ಇದ್ದುದನ್ನು ಗಮನಿಸಿದ ನ್ಯಾ,. ಸಮೀರ್ ಜೈನ್ ಅವರು ಈ ಕುರಿತು ಪರಿಶೀಲಿಸಲು ನಿರ್ಧರಿಸಿದರು.

ಸಂವಿಧಾನಕ್ಕೆ 363-ಎ ಮತ್ತು 26ನೇ ತಿದ್ದುಪಡಿ ತಂದ ಬಳಿಕ ರಾಜಾ/ನವಾಬ್/ಮಹಾರಾಜ/ರಾಜಕುಮಾರ ಎಂಬಂತಹ ಬಿರುದುಗಳನ್ನು ಪೂರ್ವಪ್ರತ್ಯಯವಾಗಿ ಸಾಂವಿಧಾನಿಕ ನ್ಯಾಯಾಲಯದಲ್ಲಿ ಅಥವಾ ಕೆಳಹಂತದ ನ್ಯಾಯಾಲಯಗಳಲ್ಲಿ ಬಳಸಬಹುದೇ ಎಂಬ ಕುರಿತು ಪರಿಶೀಲಿಸಲು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಆರ್‌ ಡಿ ರಾಸ್ತೋಗಿ ಅವರಿಗೆ ಸೀಮಿತ ನೋಟಿಸ್‌ ನೀಡಿ ಮತ್ತು ರಾಜಸ್ಥಾನದ ಅಡ್ವೊಕೇಟ್‌ ಜನರಲ್‌ ಎಂ ಎಸ್‌ ಸಿಂಘ್ವಿ ಅವರಿಗೆ ಇದೇ ವಿಚಾರವಾಗಿ ಮಾಹಿತಿ ನೀಡಲು ಅವಕಾಶ ಮಾಡಿಕೊಡಿ ಎಂದು ನ್ಯಾಯಾಲಯ ಆದೇಶಿಸಿತು.


ಸಂವಿಧಾನದ 363A ಮತ್ತು 14ನೇ ವಿಧಿಯನ್ನು ಪರಿಶೀಲಿಸಿದ ನಂತರ ದೇಶದ ರಾಜಪ್ರಭುತ್ವದ ಆಡಳಿತಗಾರರಿಗೆ ನೀಡಲಾಗಿದ್ದ ಮಾನ್ಯತೆ ಮತ್ತು ಬಿರುದುಗಳು ಇನ್ನು ಮುಂದೆ ಅಸ್ತಿತ್ವದಲ್ಲಿರುವುದಿಲ್ಲ, ಅವುಗಳನ್ನು ರದ್ದುಗೊಳಿಸಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿತು.

ತಾವು ಕೆಳಹಂತದ ನ್ಯಾಯಾಲಯದಲ್ಲಿ ಇದೇ ಬಿರುದಿನೊಂದಿಗೆ ಅರ್ಜಿ ಸಲ್ಲಿಸಿರುವುದರಿಂದ ಹೈಕೋರ್ಟ್‌ನಲ್ಲಿಯೂ ಅದೇ ಹೆಸರಿನೊಂದಿಗೆ ಮೇಲ್ಮನವಿ ಸಲ್ಲಿಸಿರುವುದಾಗಿ ಅರ್ಜಿದಾರರು ವಾದಿಸಿದರು. ಫೆ. 3ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಿಗದಿಯಾಗಿದೆ.