ನ್ಯಾಯಾಂಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ನೋಟಿಸ್ ನೀಡಿರುವ ರಾಜಸ್ಥಾನ ಹೈಕೋರ್ಟ್ ತಮ್ಮ ಹೇಳಿಕೆಗಾಗಿ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದೆ.
ಸಿಎಂ ಆರೋಪಗಳು ಒಟ್ಟಾರೆಯಾಗಿ ನ್ಯಾಯಾಂಗದ ವಿರುದ್ಧವಾಗಿದ್ದು ಪ್ರಾಥಮಿಕವಾಗಿ ನ್ಯಾಯಾಲಯಗಳನ್ನು ಹಗರಣಕ್ಕೀಡುಮಾಡುತ್ತವೆ ಎಂದು ನ್ಯಾಯಮೂರ್ತಿಗಳಾದ ಮನೀಂದ್ರ ಮೋಹನ್ ಶ್ರೀವಾಸ್ತವ ಮತ್ತು ಅಶುತೋಷ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೆಹ್ಲೋಟ್ ಅವರು ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಗೆಹ್ಲೋಟ್ ಅವರು ಆಗಸ್ಟ್ 30ರಂದು ನೀಡಿದ ಹೇಳಿಕೆಗಳು ನ್ಯಾಯಾಂಗವನ್ನು ಉದ್ದೇಶಪೂರ್ವಕವಾಗಿ ಹಗರಣಕ್ಕೀಡು ಮಾಡುತ್ತವೆ ಎಂದು ವಕೀಲ ಶಿವ ಚರಣ್ ಗುಪ್ತಾ ಅವರು ಸಲ್ಲಿಸಿದ ಮನವಿ ತಿಳಿಸಿತ್ತು.
ಉನ್ನತ ನ್ಯಾಯಾಂಗ ಸಂಸ್ಥೆಗಳೂ ಸೇರಿದಂತೆ ನ್ಯಾಯಾಂಗದಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ ಎಂದು ಆರೋಪಿಸಿದ್ದ ಗೆಹ್ಲೋಟ್ ಕೆಲವು ವಕೀಲರು ತೀರ್ಪುಗಳನ್ನು ಬರೆದು ಅವುಗಳನ್ನು ನ್ಯಾಯಾಲಯಕ್ಕೆ ಒಯ್ಯುತ್ತಾರೆ. ಅಲ್ಲಿ ಅವುಗಳನ್ನು ಪ್ರಕಟಿಸಲಾಗುತ್ತದೆ ಎಂದು ದೂಷಿಸಿದ್ದರು.