ವಕೀಲರೇ ತೀರ್ಪು ಬರೆಯುತ್ತಾರೆ ಎಂದು ರಾಜಸ್ಥಾನ ಸಿಎಂ ಗೆಹ್ಲೋಟ್‌ ಗಂಭೀರ ಆರೋಪ: ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲು

ಕೆಲವು ವಕೀಲರು ತೀರ್ಪುಗಳನ್ನು ಬರೆದು ಅವುಗಳನ್ನು ನ್ಯಾಯಾಲಯಕ್ಕೆ ಒಯ್ಯುತ್ತಾರೆ ಅಲ್ಲಿ ಅವುಗಳನ್ನು ಪ್ರಕಟಿಸಲಾಗುತ್ತದೆ ಎಂದು ಕೇಳಿದ್ದೇನೆ ಎಂಬುದಾಗಿ ಹೇಳಿದ ಗೆಹ್ಲೋಟ್‌.
Ashok Gehlot
Ashok Gehlot Facebook

ಉನ್ನತ ನ್ಯಾಯಾಂಗ ಸಂಸ್ಥೆಗಳೂ ಸೇರಿದಂತೆ ನ್ಯಾಯಾಂಗದಲ್ಲಿ ವ್ಯಾಪಕ ಭ್ರಷ್ಟಾಚಾರವಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬುಧವಾರ ಆರೋಪಿಸಿದ್ದಾರೆ. ಅವರು ಆರೋಪ ಮಾಡಿದ ಬೆನ್ನಿಗೇ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವಂತೆ ಕೋರಿ ರಾಜಸ್ಥಾನ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಸಲಾಗಿದೆ.

ಕೆಲವು ವಕೀಲರು ತೀರ್ಪುಗಳನ್ನು ಬರೆದು ಅವುಗಳನ್ನು ನ್ಯಾಯಾಲಯಕ್ಕೆ ಒಯ್ಯುತ್ತಾರೆ, ಅಲ್ಲಿ ಅವುಗಳನ್ನು ಪ್ರಕಟಿಸಲಾಗುತ್ತದೆ ಎಂದು ಕೇಳಿದ್ದೇನೆ ಎಂಬುದಾಗಿ ಗೆಹ್ಲೋಟ್‌ ತಿಳಿಸಿದ್ದಾರೆ.

ಇಂದು, ನ್ಯಾಯಾಂಗದೊಳಗೆ ನಡೆಯುತ್ತಿರುವ ಭ್ರಷ್ಟಾಚಾರ ಭೀತಿ ಹುಟ್ಟಿಸುವಂತಿದೆ. ಬಹಳಷ್ಟು ವಕೀಲರು ತೀರ್ಪುಗಳನ್ನು ಬರೆದು ನ್ಯಾಯಾಲಯಕ್ಕೆ ಒಯ್ಯುತ್ತಾರೆ. ಅಲ್ಲಿ ಅದನ್ನೇ ಪ್ರಕಟಿಸಲಾಗುತ್ತದೆ ಎಂದು ನಾನು ಕೇಳಿದ್ದೇನೆ" ಎಂದು ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.

ನ್ಯಾಯಾಂಗದ ವಿವಿಧ ಹಂತಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಪರಿಸ್ಥಿತಿ ಚಿಂತಾಜನಕವಾಗಿದೆ ಎಂದರು.

ನ್ಯಾಯಾಂಗದಲ್ಲಿ ಏನಾಗುತ್ತಿದೆ? ಕೆಳ ನ್ಯಾಯಾಲಯವೇ ಇರಲಿ ಅಥವಾ ಉನ್ನತ ನ್ಯಾಯಾಲಯವೇ ಇರಲಿ, ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನಾಗರಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಅವರು ಹೇಳಿದರು.

ಕೇಂದ್ರ ಕಾನೂನು ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ವಿರುದ್ಧ ಬಿಜೆಪಿ ಶಾಸಕ ಕೈಲಾಶ್ ಮೇಘವಾಲ್ ಅವರು ಮಾಡಿರುವ ಭ್ರಷ್ಟಾಚಾರದ ಆರೋಪಗಳನ್ನು ಗೆಹ್ಲೋಟ್ ಪ್ರಸ್ತಾಪಿಸಿದರು.

ರಾಜಸ್ಥಾನ ವಿಧಾನಸಭೆಯ ಮಾಜಿ ಸ್ಪೀಕರ್ ಕೈಲಾಶ್ ಮೇಘ್‌ವಾಲ್‌ ಅವರು ಅರ್ಜುನ್ ರಾಮ್ ಮೇಘ್‌ವಾಲ್ ಅವರನ್ನು " ನಂಬರ್ 1 ಭ್ರಷ್ಟ " ಎಂದು ಕರೆದಿದ್ದಾರೆ ಎನ್ನಲಾಗಿದೆ.

“ಅವರ (ಅರ್ಜುನ್ ರಾಮ್ ಮೇಘ್‌ವಾಲ್‌) ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿತ್ತು ಎಂದು ನನ್ನ ಅರಿವಿಗೆ ಬಂದಿದೆ. ಆದರೆ ವಿಷಯವನ್ನು ಬಚ್ಚಿಡಲಾಗಿದೆ. ಈ ಜನ  ಹೈಕೋರ್ಟ್‌ನಿಂದ ತಡೆ ತಂದಿದ್ದಾರೆ ಎಂದು ಗೆಹ್ಲೋಟ್ ಹೇಳಿದರು.

ಸಿಎಂ ವಿರುದ್ಧ ಪಿಐಎಲ್‌

Ashok Gehlot and Rajasthan High Court
Ashok Gehlot and Rajasthan High Court

ಈ ಮಧ್ಯೆ ಗೆಹ್ಲೋಟ್‌ ಅವರ ಹೇಳಿಕೆ ಪ್ರಶ್ನಿಸಿರುವ ವಕೀಲರೊಬ್ಬರು ಅವರ ವಿರುದ್ಧ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ಕೋರಿ ರಾಜಸ್ಥಾನ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ.

ವಕೀಲ ಶಿವ ಚರಣ್ ಗುಪ್ತಾ ಅವರ ಅರ್ಜಿ ಪ್ರಕಾರ, ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಗೆಹ್ಲೋಟ್ ಅವರು ಬುಧವಾರ ನೀಡಿದ ಹೇಳಿಕೆಗಳು ನ್ಯಾಯಾಂಗವನ್ನು ಉದ್ದೇಶಪೂರ್ವಕವಾಗಿ ಹಗರಣಕ್ಕೀಡು ಮಾಡಿವೆ ಎನ್ನಲಾಗಿದೆ.

Kannada Bar & Bench
kannada.barandbench.com