Senior Citizens 
ಸುದ್ದಿಗಳು

ಭ್ರಷ್ಟಾಚಾರದ ಆರೋಪ: 100 ವರ್ಷದ ವೃದ್ಧ ಹಾಗೂ 96 ವರ್ಷದ ಪತ್ನಿ ವಿರುದ್ಧದ ಪ್ರಕರಣ ರದ್ದುಪಡಿಸಿದ ರಾಜಸ್ಥಾನ ಹೈಕೋರ್ಟ್

ಯಾವುದೇ ಪ್ರಮುಖ ಆರೋಪಗಳಿಲ್ಲದಿದ್ದರೂ ತಮ್ಮ ಜೀವನದ ಇಳಿಸಂಜೆಯಲ್ಲಿರುವ ವ್ಯಕ್ತಿಗಳಿಗೆ ಸುದೀರ್ಘ ಕಾನೂನು ಹೋರಾಟ ಸಹಿಸಿಕೊಳ್ಳುವಂತೆ ಒತ್ತಾಯಿಸುವುದು ಕ್ರೂರ ಮತ್ತು ಅನ್ಯಾಯದಾಯಕ ಎಂದ ಪೀಠ.

Bar & Bench

ವಯಸ್ಸು ಮತ್ತು ಆರೋಗ್ಯ ಸಮಸ್ಯೆ ಪರಿಗಣಿಸಿ, ಭ್ರಷ್ಟಚಾರ ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾದ ನೂರು ವರ್ಷದ ವೃದ್ಧ ಮತ್ತು 96 ವರ್ಷದ ಅವರ ಪತ್ನಿ ವಿರುದ್ಧದ ಆರೋಪಗಳನ್ನು ಮಾನವೀಯ ನೆಲೆಯಲ್ಲಿ ರಾಜಸ್ಥಾನ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ [ರಾಮ್‌ ಲಾಲ್‌ ಪಾಟಿದಾರ್‌ ಮತ್ತಿತರರು ಹಾಗೂ ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].

ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಭ್ರಷ್ಟಾಚಾರ ತಡೆ ಕಾಯಿದೆ ಅಡಿಯಲ್ಲಿ ಮೂಲತಃ ವೃದ್ಧ ದಂಪತಿಯ 71 ವರ್ಷದ ಮಗನ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಅವರ  65 ವರ್ಷದ ಸೊಸೆಗೂ ಕೂಡ ನ್ಯಾ. ಅರುಣ್‌ ಮೊಂಗಾ ಪರಿಹಾರ ನೀಡಿದ್ದಾರೆ. ದಂಪತಿಯ ಪುತ್ರ 1978ರಿಂದ 2006ರವರೆಗೆ ಅಭಿವೃದ್ಧಿ ಅಧಿಕಾರಿಯಾಗಿದ್ದರು.

ವಿಚಾರಣೆ ಮುಕ್ತಾಯವಾಗಲು 18 ವರ್ಷ ವಿಳಂಬವಾಗಿರುವುದನ್ನು ಗಮನಿಸಿದ ನ್ಯಾಯಾಲಯ ಆರೋಪಗಳು ಆಧಾರರಹಿತವಾಗಿರುವ ಸಾಧ್ಯತೆ ಇದೆ ಅಥವಾ ಕನಿಷ್ಠ ಬಲವಾದ ಸಾಕ್ಷ್ಯದ ಬೆಂಬಲ ಇಲ್ಲದಿರುವ ಸಾಧ್ಯತೆಗಳಿವೆ ಎಂದಿತು.

ಯಾವುದೇ ಪ್ರಮುಖ ಆರೋಪಗಳಿಲ್ಲದಿದ್ದರೂ ತಮ್ಮ ಜೀವನದ ಇಳಿಸಂಜೆಯಲ್ಲಿರುವ ವ್ಯಕ್ತಿಗಳಿಗೆ ಸುದೀರ್ಘ ಕಾನೂನು ಹೋರಾಟ ಸಹಿಸಿಕೊಳ್ಳುವಂತೆ ಒತ್ತಾಯಿಸುವುದು ಕ್ರೂರ ಮತ್ತು ಅನ್ಯಾಯದಾಯಕ ಎಂದು ಪೀಠ ಇದೇ ವೇಳೆ ನುಡಿಯಿತು.

ಪ್ರಕರಣದಲ್ಲಿ ವೃದ್ಧ ದಂಪತಿ ಮತ್ತು ಅವರ ಸೊಸೆಯ ನೇರ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದ  ಸಾಕ್ಷ್ಯಗಳ ಕೊರತೆ ಪರಿಗಣಿಸಿ, ಅವರ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಲು ಬಲವಾದ ಕಾರಣಗಳಿವೆ ಎಂದು ನ್ಯಾಯಾಲಯ  ತೀರ್ಮಾನಿಸಿತು.

ತಮ್ಮ ಜೀವನದ ಇಳಿಗಾಲದಲ್ಲಿ ಬಿಡುಗಡೆಯ ಆಶಾಕಿರಣಗಳಿಲ್ಲದೆ ದಾವೆಗಳ ಸುದೀರ್ಘ ನೋವನ್ನು ಅವರು ಅನುಭವಿಸಿದ್ದಾರೆ ಎಂದು ನ್ಯಾಯಾಲಯ ಹೇಳಿತು.

ವೃದ್ಧ ದಂಪತಿಯ ವೈಯಕ್ತಿಕ ಆಸ್ತಿ ಸೇರಿದಂತೆ ಅವರ ಕುಟುಂಬ ಸದಸ್ಯರ ಆಸ್ತಿ ವಶಪಡಿಸಿಕೊಳ್ಳುವುದನ್ನು ನ್ಯಾಯಾಲಯ ಪ್ರಶ್ನಿಸಿತು. ಇದು ಇಡೀ ಕುಟುಂಬಕ್ಕೆ ಅನಗತ್ಯ ತೊಂದರೆ ಉಂಟು ಮಾಡುತ್ತದೆ ಎಂದಿತು. ತನಿಖೆಯಲ್ಲಿ ಸಂಬಂಧವಿಲ್ಲದ ಕುಟುಂಬ ಸದಸ್ಯರನ್ನು ಸೇರಿಸಿಕೊಳ್ಳುವುದು ಅವರ ವಿರುದ್ಧ ನಡೆಸುವ ದಬ್ಬಾಳಿಕೆಯಾಗುತ್ತದೆ. ಅಲ್ಲದೆ ಇಂತಹ ಆರೋಪ ವಿಚಾರಣೆಗೂ ಹೊರೆಯಾಗಿ ಪರಿಣಮಿಸುತ್ತದೆ ಎಂದು ನ್ಯಾಯಾಲಯ ಎಚ್ಚರಿಕೆ ನೀಡಿತು.

ಅಲ್ಲದೆ ಅರ್ಜಿದಾರರ ಸಹೋದರನಂತಹ ಪ್ರಮುಖ ವ್ಯಕ್ತಿಯನ್ನು ಅಭಿಯೋಜನಾ ಮಂಜೂರಾತಿ ದೊರೆಯದ ಕಾರಣಕ್ಕೆ ವಿಚಾರಣೆಗೆ ಒಳಪಡಿಸದೆ, ಕುಟುಂಬದ ಉಳಿದವರ ವಿರುದ್ಧ ಪ್ರಕರಣ ಹೂಡಿರುವುದು ನ್ಯಾಯಸಮ್ಮತತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತದೆ ಎಂದು ಅದು ಹೇಳಿತು. ಅಂತೆಯೇ  ಪ್ರಮುಖ ಆರೋಪಿಯ ಪೋಷಕರು ಮತ್ತು ಪತ್ನಿ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿದ ಅದು ಪ್ರಮುಖ ಆರೋಪಿ ವಿರುದ್ಧ ವಿಚಾರಣೆ ಮುಂದುವರಿಸಲು ಅವಕಾಶ ನೀಡಿತು.