ಐವತ್ತು ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಕ್ಕೆ ವಿನಾಯಿತಿ ಇದ್ದರೂ ವರ್ಗಾವಣೆ: ಸರ್ಕಾರದ ಮೇಲ್ಮನವಿ ವಜಾ ಮಾಡಿದ ಹೈಕೋರ್ಟ್‌

ಶಾಸನದಲ್ಲಿ ಅನೂಕೂಲಕರ ಅಂಶಗಳನ್ನು ಅಳವಡಿಸಿದಾಗ, ಅದನ್ನು ಫಲಾನುಭವಿಗಳ ಪರವಾಗಿ ಜಾರಿಗೊಳಿಸಬೇಕು. ಅದು ಬಿಟ್ಟು ಫಲಾನುಭವಿ ಅರ್ಜಿ ಸಲ್ಲಿಸಿದ್ದಾರೆಯೇ ಇಲ್ಲವೇ ಎಂಬುದನ್ನು ನೋಡಬಾರದು ಎಂದಿರುವ ಹೈಕೋರ್ಟ್‌.
Karnataka HC
Karnataka HC
Published on

ಐವತ್ತು ವರ್ಷ ಮೇಲ್ಪಟ್ಟ ಶಿಕ್ಷಕರ ವರ್ಗಾವಣೆಗೆ ವಿನಾಯಿತಿ ಇದ್ದರೂ ರಾಜ್ಯ ಸರ್ಕಾರ 55 ವರ್ಷ ಹಾಗೂ 58 ವರ್ಷದ ಇಬ್ಬರು ಮಹಿಳಾ ಶಿಕ್ಷಕಿಯರನ್ನು ಹೆಚ್ಚುವರಿ ಶಿಕ್ಷಕರು ಎಂದು ಪರಿಗಣಿಸಿ ವರ್ಗಾವಣೆ ಮಾಡಿದ್ದ ಆದೇಶ ರದ್ದುಗೊಳಿಸಿದ್ದ ಕೆಎಟಿ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿಹಿಡಿದಿದೆ. “ನಿಯಮಗಳಲ್ಲಿ ವರ್ಗಾವಣೆ ಮಾಡುವುದಕ್ಕೆ ವಿನಾಯಿತಿ ಇದ್ದಾಗ ನೌಕರರು ಅರ್ಜಿ ಸಲ್ಲಿಸಲಿ ಅಥವಾ ಬಿಡಲಿ, ಚಾಲ್ತಿಯಲ್ಲಿ ಇರುವಂತಹ ನಿಯಮವನ್ನು ಅಧಿಕಾರಿಗಳು ಜಾರಿಗೊಳಿಸಬೇಕು” ಎಂದು ಕಟ್ಟುನಿಟ್ಟಾಗಿ ಆದೇಶಿಸಿದೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಬೂದಿಹಾಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಮಾದೇವಿ ಹುಂಡೇಕರ್ ಮತ್ತು ಬೀಳಗಿ ತಾಲ್ಲೂಕಿನ ತೆಗ್ಗಿ ಗ್ರಾಮದ ಪ್ರಭಾವತಿ ರೋಣದ ಅವರನ್ನು ಹೆಚ್ಚುವರಿ ಶಿಕ್ಷಕರು ಎಂದು ಸರ್ಕಾರ ವರ್ಗಾವಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಕೆಎಟಿ (ಕರ್ನಾಟಕ ಆಡಳಿತಾತ್ಮಕ ನ್ಯಾಯಾಧಿಕರಣ) ಮೊರೆ ಹೋಗಿದ್ದರು. ಕೆಎಟಿಯು ಅರ್ಜಿ ಮಾನ್ಯ ಮಾಡುವ ಮೂಲಕ ವರ್ಗಾವಣೆ ಆದೇಶವನ್ನು ಎತ್ತಿ ಹಿಡಿದಿತ್ತು.

ಕೆಎಟಿ ಆದೇಶ ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಇದೀಗ ಸರ್ಕಾರದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಅವರ ವಿಭಾಗೀಯ ಪೀಠವು ಶಾಸನದಲ್ಲಿ ಅನೂಕೂಲಕರ ಅಂಶಗಳನ್ನು ಅಳವಡಿಸಿದಾಗ, ಅದನ್ನು ಫಲಾನುಭವಿಗಳ ಪರವಾಗಿ ಜಾರಿಗೊಳಿಸಬೇಕು. ಅದು ಬಿಟ್ಟು ಫಲಾನುಭವಿ ಅರ್ಜಿ ಸಲ್ಲಿಸಿದ್ದಾರೆಯೇ ಇಲ್ಲವೇ ಎಂಬುದನ್ನು ನೋಡಬಾರದು ಎಂದು ಕುಟುಕಿದೆ.

“ಇಬ್ಬರೂ ಮಹಿಳಾ ಶಿಕ್ಷಕಿಯರಿದ್ದಾರೆ. ಅವರಿಬ್ಬರಿಗೂ 50 ವರ್ಷದ ಮೇಲಾಗಿದೆ. ಇಂಹತವರನ್ನು ಹೆಚ್ಚುವರಿ ಶಿಕ್ಷಕರು ಎಂದು ಘೋಷಿಸಿ, ವರ್ಗಾವಣೆ ಮಾಡಬಾರದಿತ್ತು. ರಾಜ್ಯ ನಾಗರಿಕ ಸೇವಾ ಕಾಯಿದೆ–2020ರ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಸೆಕ್ಷನ್‌ 10(1)(6) ಅನ್ವಯ ಇಂಹತವರ ವರ್ಗಾವಣೆಗೆ ವಿನಾಯಿತಿ ಇದೆ. ಆದರೂ ಅವರನ್ನು ಹೆಚ್ಚುವರಿ ಶಿಕ್ಷಕರು ಎಂದು ಘೋಷಿಸಿರುವುದು ಸರಿಯಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ಉಮಾದೇವಿ ಹುಂಡೇಕರ್ ಮತ್ತು ಪ್ರಭಾವತಿ ರೋಣದ ಅವರನ್ನು ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯಲ್ಲಿ ಹೆಚ್ಚುವರಿ ಶಿಕ್ಷಕರು ಎಂದು ಪರಿಗಣಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ 2022ರ ಡಿಸೆಂಬರ್ 26ರಂದು ಆದೇಶ ಹೊರಡಿಸಿತ್ತು. ಆದರೆ ಇಬ್ಬರೂ ಶಿಕ್ಷಕಿಯರು ನಿಯಮದ ಪ್ರಕಾರ ನಮಗೆ 50 ವರ್ಷಕ್ಕೂ ಹೆಚ್ಚು ವಯಸ್ಸಾಗಿದೆ. ಹೀಗಾಗಿ, ನಮನ್ನು ವರ್ಗಾವಣೆ ಮಾಡುವುದಕ್ಕೆ ವಿನಾಯಿತಿ ಇದೆ ಎಂದು ಆಕ್ಷೇಪಣೆ ಸಲ್ಲಿಸಿದ್ದರು. ಆದರೆ, ಈ ಆಕ್ಷೇಪಣೆಯನ್ನು ಪರಿಗಣಿಸದೆ ಇಬ್ಬರನ್ನೂ ವರ್ಗಾವಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಕೆಎಟಿ ಮೊರೆ ಹೋಗಿದ್ದರು. ಕೆಎಟಿ ವರ್ಗಾವಣೆ ಆದೇಶ ರದ್ದುಪಡಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

Kannada Bar & Bench
kannada.barandbench.com