Shilpa Shetty, Rajasthan HC, Jodhpur BenchShilpa Shetty (FB) 
ಸುದ್ದಿಗಳು

ಶಿಲ್ಪಾ ಶೆಟ್ಟಿ ವಿರುದ್ಧ ಎಸ್‌ಸಿ, ಎಸ್‌ಟಿ ಕಾಯಿದೆಯಡಿ ದಾಖಲಿಸಿದ್ದ ಪ್ರಕರಣ ರದ್ದುಗೊಳಿಸಿದ ರಾಜಸ್ಥಾನ ಹೈಕೋರ್ಟ್

ಸಾರ್ವಜನಿಕ ವ್ಯಕ್ತಿಗಳು ನೀಡಿದ್ದ ಹೇಳಿಕೆಗಳನ್ನು ಮಾಧ್ಯಮಗಳ ಗಮನ ಸೆಳೆಯುವುದಕ್ಕಾಗಿ ಕೆಲವೊಮ್ಮೆ ಅಪರಿಚಿತ ವ್ಯಕ್ತಿಗಳು ಉತ್ಪ್ರೇಕ್ಷೆ ಮಾಡುತ್ತಾರೆ ಎಂದ ನ್ಯಾಯಾಲಯ.

Bar & Bench

ನಟಿ ಶಿಲ್ಪಾ ಶೆಟ್ಟಿ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಯಡಿ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ .

ನಟ ಸಲ್ಮಾನ್ ಖಾನ್ ಅವರು ಕೂಡ ಭಾಗವಹಿಸಿದ್ದ 2013ರ ಟಿವಿ ಸಂದರ್ಶನವೊಂದರಲ್ಲಿ 'ಭಂಗಿ' ಎಂಬ ಪದ ಬಳಸಿದ್ದಾರೆ ಎಂದು ಆರೋಪಿಸಿ ಶಿಲ್ಪಾ ವಿರುದ್ಧ 2017ರಲ್ಲಿ ದೂರು ದಾಖಲಾಗಿತ್ತು.

ಪದ ಬಳಕೆಯಿಂದ ವಾಲ್ಮೀಕಿ ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿತ್ತು. ಪ್ರಕರಣ ರದ್ದುಗೊಳಿಸುವಂತೆ ಕೋರಿ ಶಿಲ್ಪಾ  2012ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿಯನ್ನು ನವೆಂಬರ್ 18 ರಂದು ಪುರಸ್ಕರಿಸಿದ ನ್ಯಾಯಮೂರ್ತಿ ಅರುಣ್ ಮೊಂಗಾ ಅವರು ಎಫ್‌ಐಆರ್‌ನಲ್ಲಿ ಶಿಲ್ಪಾ ಅವರು ವಾಲ್ಮೀಕಿ ಸಮುದಾಯವನ್ನು ಕೀಳಾಗಿ ಕಂಡಿದ್ದಾರೆ ಅಥವಾ ಅಪಮಾನಿಸಿದ್ದಾರೆ ಎಂದು ಹೇಳುವ ಯಾವುದೇ ಸೂಚನೆಗಳಿಲ್ಲ ಎಂದಿದ್ದಾರೆ.  

ಮಿಗಿಲಾಗಿ, ಪ್ರಾಸಂಗಿಕವಾಗಿರುವಂತೆ ತೋರುವ ಸಂದರ್ಶನದ ಹೇಳಿಕೆಗಳನ್ನು ಸಂದರ್ಭದಿಂದ ಸಂಪೂರ್ಣ ಹೊರಗಿಟ್ಟು ಅರ್ಥೈಸಲಾಗಿದೆ. ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯಿದೆಯನ್ನು ಅನ್ವಯಿಸಬೇಕಾದರೆ ಎಸ್‌ಸಿ ಎಸ್‌ಟಿ ಸಮುದಾಯದ ಸದಸ್ಯರನ್ನು ಮುಜಗರಕ್ಕೀಡುಮಾಡುವ, ಅಪಮಾನಿಸುವ ಅಥವಾ ತೊಂದರೆ ನೀಡುವ ನಿರ್ದಿಷ್ಟ ಉದ್ದೇಶದಿಂದ ಆರೋಪಿಗಳು ಕಾರ್ಯನಿರ್ವಹಿಸಿರಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಸಾರ್ವಜನಿಕ ವ್ಯಕ್ತಿಗಳು ನೀಡಿದ್ದ ಹೇಳಿಕೆಗಳನ್ನು ಮಾಧ್ಯಮಗಳ ಗಮನ ಸೆಳೆಯುವುದಕ್ಕಾಗಿ ಕೆಲವೊಮ್ಮೆ ಅಪರಿಚಿತ ವ್ಯಕ್ತಿಗಳು ಉತ್ಪ್ರೇಕ್ಷೆ ಮಾಡುತ್ತಾರೆ.
ನ್ಯಾಯಮೂರ್ತಿ ಅರುಣ್ ಮೊಂಗಾ

'ಭಂಗಿ' ಪದ ಕೆಲವು ಸಂದರ್ಭಗಳಲ್ಲಿ ಆಕ್ಷೇಪಾರ್ಹವಾಗಿದ್ದರೂ, ಅದನ್ನು ಉದ್ದೇಶಪೂರ್ವಕವಲ್ಲದ ಅಥವಾ ಪರ್ಯಾಯವಾಗಿ ಆಡುಮಾತಿನ ರೀತಿಯಲ್ಲಿ ಕೂಡ  ಬಳಸಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.

ಭಂಗಿ ಎಂಬುದು ಸಂಸ್ಕೃತದ ಭಂಗಾ ಎಂಬ ಪದದಿಂದ ಬಂದಿದೆ ಎಂದ ನ್ಯಾಯಾಲಯ ಅಸ್ಪೃಶ್ಯ ಜಾತಿಗೆ ಸೇರಿದವನು ಎಂಬ ಅರ್ಥ ಮಾತ್ರವಲ್ಲದೆ ಮುರಿದ ಇಲ್ಲವೇ ಛಿದ್ರಗೊಂಡ ಎಂಬ ಅರ್ತವೂ ಇದೆ. ಭಂಗಿ ಪದ ಗಾಂಜಾ ಇಲ್ಲವೇ ಅಮಲು ಪದಾರ್ಥಗಳನ್ನೂ ಸೂಚಿಸುತ್ತದೆ. ಹೀಗಾಗಿ ಭಾಂಗ್‌ ಸೇದುವವರನ್ನು ಕೂಡ ಭಂಗಿಗಳೆಂದು ಕರೆಯಬಹುದಾಗಿದೆ. ಆಕ್ಸ್‌ಫರ್ಡ್ ಹಿಂದಿಯಿಂದ ಇಂಗ್ಲಿಷ್ ನಿಘಂಟಿನ ಪ್ರಕಾರ, ಭಂಗಿ ಎಂದರೆ ಭಾಂಗ್ (ಭಾಂಗಾರ್) ಅಥವಾ "ವಂಚನೆ" ಅಥವಾ "ಟ್ರಿಕ್" ಅಥವಾ "ಮಾರುವೇಷ" ಅಥವಾ "ವಿಲಕ್ಷಣ ಅಥವಾ ವಿಲಕ್ಷಣ ನಡವಳಿಕೆಯವರು ಎಂಬುದನ್ನು ಸೂಚಿಸುತ್ತದೆ. ಅಲ್ಲದೆ ಈ ಪದದ ಅರ್ಥ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ ಎಂದು ನ್ಯಾಯಾಲಯ ನುಡಿಯಿತು.

ಒಂದು ಸಂದರ್ಭದಲ್ಲಿ ಆಕ್ಷೇಪಾರ್ಹವಾಗಿರುವುದು ಇನ್ನೊಂದರಲ್ಲಿ ಆಗದಿರಬಹುದು ಮತ್ತು ಒಟ್ಟಾರೆ ನಿರೂಪಣೆಯ ಆಧಾರದ ಮೇಲೆ ಉದ್ದೇಶವನ್ನು ನಿರ್ಣಯಿಸಬೇಕು. ಅಲ್ಲದೆ ಮಾಧ್ಯಮಗಳ ಗಮನ ಸೆಳೆಯುವುದಕ್ಕಾಗಿ ಸಾರ್ವಜನಿಕ ವ್ಯಕ್ತಿಗಳು ನೀಡಿದ್ದ ಹೇಳಿಕೆಗಳನ್ನು ಕೆಲವರು ಕೆಲವೊಮ್ಮೆ ಉತ್ಪ್ರೇಕ್ಷೆ ಮಾಡುತ್ತಾರೆ ಎಂದು ಕೂಡ ಅದು ಹೇಳಿತು.  ಅಂತೆಯೇ ಶಿಲ್ಪಾ ಅವರಿಗೆ ಸಂಬಂಧಿಸಿದಂತೆ ಕೊತ್ವಾಲಿ ಚುರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಅನ್ನು ನ್ಯಾಯಾಲಯ ರದ್ದುಗೊಳಿಸಿತು.