ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) - 2019ರ ಜಾರಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮಾಜಿ ಕಾನೂನು ಸಚಿವ ರವಿಶಂಕರ್ ಪ್ರಸಾದ್ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ [ಪುರ್ಣ್ ಚಂದರ್ ಸೇನ್ ಮತ್ತು ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].
ಮನವಿ ಸಲ್ಲಿಸಿದ್ದ ವಕೀಲ ಪೂರಣ್ ಚಂದರ್ ಸೇನ್ ಅವರಿಗೆ ನ್ಯಾಯಮೂರ್ತಿ ಸುದೇಶ್ ಬನ್ಸಾಲ್ ₹50,000 ದಂಡ ವಿಧಿಸಿದರು.
ಬಿಜೆಪಿ ನಾಯಕರ ವಿರುದ್ಧ ಮಾಡಲಾದ ಕೊಲೆ ಅಥವಾ ಹಲ್ಲೆಯಂತಹ ಆರೋಪಗಳು ಮನಸೋಇಚ್ಛೆಯಿಂದ ಕೂಡಿದ್ದು ಅದೊಂದು ಕಟ್ಟುಕತೆ ಎಂದು ನ್ಯಾಯಾಲಯ ಹೇಳಿದೆ. ದೇಶದಲ್ಲಿ ಎಲ್ಲೋ ಯಾವೋದೋ ಘಟನೆ ನಡೆದಿದೆ ಎಂದು ಅದನ್ನು ಸಿಎಎ ಮಂಡನೆ ಮತ್ತು ಜಾರಿಯೊಂದಿಗೆ ತಳಕು ಹಾಕಲು ಸಾಧ್ಯವಿಲ್ಲ ಎಂಬುದಾಗಿ ನ್ಯಾಯಾಲಯ ನುಡಿದಿದೆ.
“ಅರ್ಜಿದಾರರು ತಮ್ಮ ಆರೋಪಕ್ಕೆ ಯಾವುದೇ ಮೂಲ ಇಲ್ಲವೇ ಇನ್ನಿತರ ಆಧಾರಗಳನ್ನು ಒದಗಿಸಿಲ್ಲ. ಆದ್ದರಿಂದ ಪ್ರತಿವಾದಿಗಳ (ಮೋದಿ, ಶಾ ಹಾಗೂ ರವಿಶಂಕರ್ ಪ್ರಸಾದ್) ವಿರುದ್ಧ ಅರ್ಜಿದಾರರು ಮಾಡಿದ ಆರೋಪಗಳು ಅವರದೇ ತಪ್ಪು ಕಲ್ಪನೆ, ಪಕ್ಷಪಾತ ಮತ್ತು ಭ್ರಷ್ಟ ಮನಸ್ಸಿನ ಆಲೋಚನೆಯಷ್ಟೇ ಆಗಿದೆ. ವಿವೇಚನೆಯುಳ್ಳ ಯಾವುದೇ ವ್ಯಕ್ತಿಯೂ ಇಂತಹ ತುರ್ತು, ಅಸಂಬದ್ಧ ಮತ್ತು ಅಸತ್ಯ ಆರೋಪಗಳನ್ನು ಮಾಡಿ, ಅದರ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿ ತನಿಖೆ ಮಾಡಲು ವಿನಂತಿಸುವುದಿಲ್ಲ. ಯಾರು ಗಾಯಗೊಂಡರು, ಎಷ್ಟು ಮಂದಿ ಸಾವಿಗೀಡಾದರು ಮತ್ತು ಅಂತಹ ಘಟನೆಗಳು ಎಲ್ಲೆಲ್ಲಿ ನಡೆದವು ಎಂಬುದರ ಕುರಿತು ಅರ್ಜಿಯಲ್ಲಿ ಯಾವುದೇ ವಿವರಗಳಿಲ್ಲ,” ಎಂದು ನ್ಯಾಯಮೂರ್ತಿಗಳು ಹೇಳಿದರು.
ಅಲ್ವಾರ್ ಜಿಲ್ಲೆಯ ಗೋವಿಂದಗಢ ಪೊಲೀಸ್ ಠಾಣೆಗೆ 2020ರಲ್ಲಿ, 74 ವರ್ಷದ ಸೇನ್ ಅವರು ಅರ್ಜಿ ಸಲ್ಲಿಸಿದ್ದರು, ಮೋದಿ, ಶಾ, ಪ್ರಸಾದ್, ಆಜ್ ತಕ್ ಮತ್ತು ರಿಪಬ್ಲಿಕ್ ಟಿವಿಯಂತಹ ಚಾನೆಲ್‌ಗಳ ವಿವಿಧ ಪತ್ರಕರ್ತರು ಮತ್ತು ಕೆಲವು ಬಲಪಂಥೀಯ ಗುಂಪುಗಳ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 120-ಬಿ (ಕ್ರಿಮಿನಲ್ ಪಿತೂರಿ) ಮತ್ತು ಇತರ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ ನೋಂದಾಯಿಸಲು ಕೋರಿದ್ದರು.
ಸಿಎಎ ಭಾರತದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದು ಮುಸ್ಲಿಮರು ಮತ್ತು ಜಾತ್ಯತೀತ ನಿಲುವು ಹೊಂದಿರುವ ಜನರನ್ನು ದಮನಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ ಎಂದು ಅವರು ಆರೋಪಿಸಿದ್ದರು. ಕಾಯಿದೆ ದೇಶಾದ್ಯಂತ ಹಿಂಸಾಚಾರಕ್ಕೆ ಕಾರಣವಾಗಿ ಹಲವಾರು ಸಾವನ್ನಪ್ಪಿದರು ಇಲ್ಲವೇ ಗಾಯಗೊಂಡಿದ್ದರು ಎಂದು ಅವರು ಹೇಳಿದ್ದರು.
ಆದರೆ, ದೂರನ್ನು ಆಧರಿಸಿ ಪೊಲೀಸರು ಕ್ರಮ ಕೈಗೊಳ್ಳಲು ನಿರಾಕರಿಸಿದಾಗ, ಅವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋದರು. ಅರ್ಜಿ ನ್ಯಾಯಾಲಯ ತಿರಸ್ಕೃತವಾಗಿತ್ತು. ಆದೇಶವನ್ನು ಸೆಷನ್ಸ್ ನ್ಯಾಯಲಯ ಎತ್ತಿ ಹಿಡಿಯಿತು. ಕಡೆಗೆ ಸೇನ್ ಹೈಕೋರ್ಟ್ ಮೆಟ್ಟಿಲೇರಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ , ಹೆಚ್ಚುವರಿ ಸಾಲಿಸಿಟರ್ ಜನರಲ್ ಆರ್ ಡಿ ರಸ್ತೋಗಿ ಹಾಗೂ ರಾಜಸ್ಥಾನದ ಅಡ್ವೊಕೇಟ್ ಜನರಲ್ ರಾಜೇಂದ್ರ ಪ್ರಸಾದ್ ಅವರು ಅವರ ಅರ್ಜಿಯನ್ನು ವಿರೋಧಿಸಿದರು.
ಸೇನ್ ಅವರ ಮನವಿಯಲ್ಲಿ ಆರೋಪವಷ್ಟೇ ಇದೆ. ಅದಕ್ಕೆ ನಿರ್ದಿಷ್ಟ ಮಾಹಿತಿ ಒದಗಿಸಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ದೂರು ಅಸಂಬದ್ಧ, ಕಪೋಲ ಕಲ್ಪಿತ ಹಾಗೂ ಅಪನಂಬಿಕೆಯಿಂದ ಕೂಡಿದ್ದು ಗಂಭೀರ ಆರೋಪ ಮಾಡಲು ಸಾಕಾಗುವುದಿಲ್ಲ. ಸರ್ಕಾರವನ್ನು ಗುರಿಯಾಗಿಸುವ ಉದ್ದೇಶದಿಂದ ಆರೋಪಗಳನ್ನು ಮಾಡಲಾಗಿದೆ ಎಂದು ತೋರುತ್ತದೆ. ಇದು ಪ್ರತಿವಾದಿಗಳ ವರ್ಚಸ್ಸಿಗೆ ಧಕ್ಕೆ ತರುವುದರ ಜೊತೆಗೆ ಕೋಮು ಹಿಂಸಾಚಾರ ಉಂಟುಮಾಡುವ ಸಾಮಾನ್ಯ ಆರೋಪವಲ್ಲದೆ ಬೇರೇನೂ ಅಲ್ಲ ಎಂದಿತು.
ವಕೀಲರು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ಮೊಕದ್ದಮೆ ಹೂಡುವ ಮುನ್ನ ಪ್ರಕರಣದ ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಕು. ಅಗ್ಗದ ಜನಪ್ರಿಯತೆ ಪಡೆಯುವುದಕ್ಕಾಗಿ ಮನಸೋ ಇಚ್ಚೆಯಿಂದ ವರ್ತಿಸಬಾರದು ಎಂದು ನ್ಯಾಯಾಲಯ ಕಿವಿ ಹಿಂಡಿತು.
ಅಂತೆಯೇ ಅರ್ಜಿ ತಿರಸ್ಕರಿಸಿದ ನ್ಯಾಯಾಲಯ ಮನವಿದಾರ ಸೇನ್ ಅವರಿಗೆ ₹50,000 ದಂಡ ವಿಧಿಸಿತು. ಜೊತೆಗೆ ರಾಜಸ್ಥಾನ ಸರ್ಕಾರ ರಾಜಸ್ಥಾನ ರಾಜ್ಯ, ಮೋದಿ, ಶಾ, ರವಿಶಂಕರ್ ಪ್ರಸಾದ್ ಮತ್ತಿತರ ಪ್ರತಿವಾದಿಗಳು ಸೇನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳು ಅವಕಾಶ ನೀಡಿತು.
[ತೀರ್ಪಿನ ಪ್ರತಿ]